ಚಿತ್ರದುರ್ಗ: ಸುಮಾರು ಆರು ತಿಂಗಳಿಂದ ಎರಡೂ ಕಾಲು ಸ್ವಾಧೀನವಿಲ್ಲದೆ ಪರದಾಡುತ್ತಿದ್ದ ಯುವತಿಯೊಬ್ಬಳು ರಾಯರ ಮಠಕ್ಕೆ ಬಂದ ತಕ್ಷಣ ಎದ್ದು ಓಡಾಡಿರುವ ಘಟನೆ ಕೋಟೆ ನಾಡಿನಲ್ಲಿ ನಡೆದಿದೆ. ಮಠಕ್ಕೆ ಬರುತ್ತಿದ್ದಂತೆ ವ್ಹೀಲ್ ಚೇರ್‌ನಲ್ಲಿ ಕೂತಿದ್ದ ಯುವತಿ ನಡೆದಾಡೋ ಶಕ್ತಿ ಪಡೆದಿರುವುದು ಅಚ್ಚರಿಗೆ ಕಾರಣವಾಗಿದೆ. ಇದು ರಾಯರ ಪವಾಡ ಎಂದು ಯುವತಿಯ ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಯಲಹಂಕ ಮೂಲದ ಶ್ರೀಕಾಂತ್ ಮತ್ತು ಅರುಣಾ ದಂಪತಿ ಪುತ್ರಿ ತೇಜಸ್ವಿನಿ, ರಕ್ತನಾಳ ಸಮಸ್ಯೆಯಿಂದ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಳು. 6 ತಿಂಗಳಿಂದ ನಡೆದಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವ್ಹೀಲ್ ಚೇರ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು. ಆದರೆ, ರಾಯರ ಮಠಕ್ಕೆ ಬಂದ ವೇಳೆ ಯುವತಿ ಮೇಲೆದ್ದು ಯಾರ ಸಹಾಯವಿಲ್ಲದೆ ನಡೆದಾಡಿದ್ದು, ಮೂರು ಪ್ರದಕ್ಷಿಣೆ ಹಾಕಿದ್ದಾಳೆ. ಇದು ಅಲ್ಲಿ ನೆರೆದಿದ್ದ ಭಕ್ತರಲಿ ಅಚ್ಚರಿ ಉಂಟುಮಾಡಿದೆ.
ಶ್ರೀಕಾಂತ್ ಮತ್ತು ಅರುಣಾ ದಂಪತಿಗೆ ತೇಜಸ್ವಿ ಮತ್ತು ಸಾಗರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ವಿಶೇಷಚೇತನಾಗಿದ್ದಾರೆ. 19 ವರ್ಷದ ತೇಜಸ್ವಿನಿ ಹುಟ್ಟಿದಾಗಿನಿಂದಲೂ ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದಾಳೆ. ಜತೆಗೆ ರಕ್ತನಾಳಗಳ ಸಮಸ್ಯೆಯೂ ಕಾಡತೊಡಗಿತು. ಕಳೆದ 3 ವರ್ಷದಿಂದ ಋತುಚಕ್ರದಲ್ಲೂ ಏರು-ಪೇರಾದ ಹಿನ್ನೆಲೆಯಲ್ಲಿ 6 ತಿಂಗಳಿನಿಂದ ಕಾಲುಗಳಲ್ಲಿ ಸಂಪೂರ್ಣ ಸ್ವಾಧೀನ ಇಲ್ಲದಂತಾಗಿದೆ.
ಇದನ್ನೂ ಓದಿ | ರಾಮ ಎಲ್ಲ ಧರ್ಮದವರಿಗೂ ಸೇರಿದವನು: ಪಾದಯಾತ್ರೆ ಹೊರಟ ಶಬನಮ್ ಶೇಖ್ ಹೇಳಿಕೆ
ದೀಪಾವಳಿ ಸಂದರ್ಭದಲ್ಲಿ ಪಾಲಕರೊಂದಿಗೆ ಯುವತಿ ಮಂತ್ರಾಲಯಕ್ಕೆ ಹೋಗಿದ್ದಳು. ರಾಯರ ದರ್ಶನ ಪಡೆದು ಮರಳುವಾಗ ಅಲ್ಲಿನ ಸ್ವಾಮೀಜಿಗಳು, 45 ದಿನದೊಳಗೆ ಶುಭ ಸುದ್ದಿ ದೊರೆಯಲಿದೆ ಎಂದು ಆಶೀರ್ವದಿಸಿದ್ದರು ಎನ್ನಲಾಗಿದೆ. ಇದಾದ ನಂತರ ಶಿವಮೊಗ್ಗದ ಆಯುರ್ವೇದ ವೈದ್ಯರ ಬಳಿಗೆ ಚಿಕಿತ್ಸೆಗಾಗಿ ಯುವತಿಯನ್ನು ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಬೆಂಗಳೂರಿಗೆ ಬರುವಾಗ ಮಾರ್ಗಮಧ್ಯೆ ಚಿತ್ರದುರ್ಗದ ರಾಘವೇಂದ್ರ ಸ್ವಾಮಿಯ ದರ್ಶನಕ್ಕೆ ಬಂದ ವೇಳೆ ಯುವತಿ ಎದ್ದು ಓಡಾಡಿದ್ದಾಳೆ.
ರಾಮ ಮಂದಿರ ಲೋಕಾರ್ಪಣೆಗೆ ದಿನಗಣನೆ; ಹಾಸನದಲ್ಲಿ ಕಂಡಿತು ಒಂದು ಅಚ್ಚರಿ
ಹಾಸನ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ (Sri Rama Janmabhumi) ಜನವರಿ 22ರಂದು ಭವ್ಯ ಶ್ರೀ ರಾಮಮಂದಿರ (Rama Mandir) ಲೋಕಾರ್ಪಣೆಗೊಳ್ಳಲಿದೆ. ಹೀಗಾಗಿ ಲೋಕಾದ್ಯಂತ ಅದರ ಕುರಿತೇ ಚರ್ಚೆಗಳು ನಡೆಯುತ್ತಿದೆ. ಅದರ ನಡುವೆಯೇ ಹಾಸನದಲ್ಲಿ ಶ್ರೀರಾಮನ ಕುರಿತ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ (Hasana News) ಆಲೂರು ತಾಲೂಕಿನ ಕಾಗನೂರು ಪರಿಸರದಲ್ಲಿ ಶ್ರೀರಾಮ ಓಡಾಡಿದ್ದ ಎಂಬುದಕ್ಕೆ ಪೂರಕವಾಗಿ ಕೆಲವು ಪುರಾವೆಗಳು (foot prints of Sri Rama) ಸಿಕ್ಕಿವೆ.
ಆಲೂರು ತಾಲೂಕಿನ ಕಾಗನೂರಿನಲ್ಲಿ ಹೇಮಾವತಿ ನದಿ ಹರಿಯುತ್ತಿದ್ದು ಅದರ ದಡದಲ್ಲಿರುವ ಬೃಹದಾಕಾರದ ಬಂಡೆಯ ಮೇಲೆ ಶ್ರೀರಾಮದ ಪಾದದ ಗುರುತು ಕಂಡಿದೆ. ಅಷ್ಟೇ ಅಲ್ಲ ಆಂಜನೇಯ ಪಾದ ಹಾಗೂ ಶಿವಲಿಂಗ ಮೂರ್ತಿ ಕೂಡ ಕಂಡಿದೆ. ವಿಶೇಷವೆಂದರೆ ಶ್ರೀರಾಮನ ಪಾದ ಕಂಡ ಜಾಗದಿಂದ ಅರ್ದ ಕಿಲೋಮೀಟರ್ ದೂರದಲ್ಲಿ ಆಂಜನೇಯನ ದೇವಸ್ಥಾನವೂ ಇದೆ.
ನೀರಿನಲ್ಲಿ ಮುಳುಗಿದ್ದ ಬಂಡೆಯಲ್ಲಿ ರಾಮನ ಪಾದ
ಹೇಮಾವತಿ ನದಿ ದಂಡೆಯಲ್ಲಿರುವ ಈ ಬೃಹತ್ ಬಂಡೆಯ ಮೇಲೆ ಹಿಂದಿನಿಂದಲೂ ಪಾದದ ಗುರುತು ಇತ್ತು. ಅಲ್ಲಿ ಪೂಜೆಯೂ ನಡೆಯುತ್ತಿತ್ತು. ಆದರೆ, 70ರ ದಶಕದಲ್ಲಿ ಈ ಸ್ಥಳದಲ್ಲಿ ಜಲಾಶಯ ನಿರ್ಮಾಣ ಮಾಡಿದ ಬಳಿಕ ಈ ಕಲ್ಲು ಇರುವ ಪ್ರದೇಶದಲ್ಲಿ ನೀರು ತುಂಬಿಕೊಂಡಿತ್ತು. ಈ ಬಾರಿ ಮಳೆ ಕಡಿಮೆ ಆದ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರು ಕಡಿಮೆಯಾಗಿ ಮತ್ತೆ ಬಂಡೆ ಗೋಚರಿಸಿದೆ. ಹೀಗಾಗಿ ಜನರು ಸುಮಾರು 50 ವರ್ಷಗಳ ಬಳಿಕ ರಾಮ ಪಾದ ಈಶ್ವರ ಲಿಂಗವನ್ನು ಕಂಡು ಪುಳಕಿತರಾಗಿದ್ದಾರೆ. ಪೂಜೆಯನ್ನೂ ನಡೆಸುತ್ತಿದ್ದಾರೆ.
ಇಲ್ಲಿ ದೇವಸ್ಥಾನ ಕಟ್ಟಬೇಕು ಎಂದು ಆಗ್ರಹ
ಲಂಕೆಯಲ್ಲಿ ರಾವಣನ ಸಂಹಾರದ ಬಳಿಕ ಬ್ರಹ್ಮ ಹತ್ಯೆ ದೋಷ ಪರಿಹಾರಕ್ಕಾಗಿ ಲೋಕ ಸಂಚಾರದಲ್ಲಿದ್ದ ರಾಮ ಲಕ್ಷ್ಮಣ ಸೀತೆಯರು ಪುಣ್ಯ ನದಿ ಹೇಮಾವತಿ ದಂಡೆಯಲ್ಲಿ ಸ್ವಲ್ಪ ಕಾಲ ವಾಸಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ರಾಮ ಈಶ್ವರ ಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದ್ದ ಎನ್ನಲಾಗುತ್ತಿದೆ. ಇಲ್ಲೇ 500 ಮೀಟರ್ ದೂರದಲ್ಲಿ ಹನುಮನ ವಿಗ್ರಹವೂ ಇರುವುದು ಭಕ್ತಿಯನ್ನು ವರ್ಧಿಸಿದೆ.
ಇದನ್ನೂ ಓದಿ: Sonia Gandhi: ರಾಮನ ದರ್ಶನ ಪಡೆಯಲಿರುವ ಸೋನಿಯಾ ಗಾಂಧಿ; ಕಾರ್ಯಕ್ರಮದಲ್ಲಿ ಭಾಗಿ ನಿಶ್ಚಿತ
ಇದೀಗ ಜನರು ಈ ರಾಮನ ಪಾದ, ಈಶ್ವರನ ಲಿಂಗ ಕಾಣಿಸಿಕೊಂಡಿರುವ ಜಾಗದಲ್ಲಿ ಒಂದು ದೇವಾಲಯವನ್ನು ಸ್ಥಾಪಿಸಿ ನಿತ್ಯ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಇದರ ಬಗ್ಗೆ ಏನು ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕಾಗಿದೆ.
ಭಕ್ತರಂತೂ ಅರ್ಚಕರನ್ನು ಕರೆಸಿ ನಿತ್ಯ ಪೂಜೆಯನ್ನು ಮಾಡುತ್ತಿದ್ದಾರೆ. ಈಶ್ವರ ಲಿಂಗಕ್ಕೆ ಒಂದು ಸಣ್ಣ ಕಲ್ಲಿನ ಚಾವಣಿಯನ್ನೂ ಮಾಡಲಾಗಿದೆ. ಪಾದಗಳಿಗೆ ಹೂವಿನಿಂದ ಅರ್ಚನೆ ಮಾಡಲಾಗುತ್ತಿದೆ. ದಿನವೂ ನೂರಾರು ಭಕ್ತರು ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ