ಬೆಂಗಳೂರು: ಯುವತಿಯೊಬ್ಬಳ ವಂಚನೆಯಿಂದ 35 ಲಕ್ಷ ರೂಪಾಯಿ ಕಳೆದುಕೊಂಡಿರುವ (Fraud Case) ಕಬ್ಬಾಳ ಮಹಾಸಂಸ್ಥಾನದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇಲ್ಲೀಗ ಎ2 ಆರೋಪಿ ಎ1 ಆಗಿ ಬದಲಾಗಿದ್ದಾರೆ. ಇದು ಪೊಲೀಸರೇ ಹೆಣೆದ ಪ್ಲ್ಯಾನ್ ಎಂದು ಹೇಳಲಾಗುತ್ತಿದ್ದು, ಸ್ವಾಮೀಜಿಯನ್ನು ಬಚಾವ್ ಮಾಡಲು ಹೀಗೆ ಮಾಡಲಾಗಿದೆಯೇ ಎಂಬ ಅನುಮಾನವೂ ಮೂಡಿದೆ. ಕಾರಣ, ಎ2 ಹಾಗೂ ಎ3 ಆರೋಪಿಗಳ ಸಂಭಾಷಣೆಯ ಆಡಿಯೊ ಇದನ್ನು ಪುಷ್ಟೀಕರಿಸುತ್ತಿದೆ.
ತಾವು ಯುವತಿಯೊಬ್ಬಳನ್ನು ನಂಬಿ 35 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾಗಿ (Fraud Case) ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ದೂರು ನೀಡಿದ್ದರು. ಒಂದು ತಿಂಗಳ ಬಳಿಕ ಈ ರಹಸ್ಯ ಎಲ್ಲರಿಗೂ ಗೊತ್ತಾಗಿತ್ತು. ಅವರು ನೀಡಿದ ದೂರಿನನ್ವಯ ವರ್ಷ ಎಂಬ ಯುವತಿ ವಿಡಿಯೊ ಕಾಲ್ ಮೂಲಕ ಪರಿಚಯವಾಗಿದ್ದು, ಜಾಗದ ಹೆಸರಿನಲ್ಲಿ ಮೋಸ ಮಾಡಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದರು. ಆದರೆ, ಆಕೆಯ ಸ್ನೇಹಿತೆ ಮಂಜುಳಾ ಎಂಬಾಕೆಯ ಖಾತೆಗೆ ಹಣವನ್ನು ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ಪೊಲೀಸರು ಈ ಪ್ರಕರಣದಲ್ಲಿ ಎ 1 ಆರೋಪಿಯನ್ನಾಗಿ ವರ್ಷಳನ್ನು ಹಾಗೂ ಮಂಜುಳಾ ಎಂಬಾಕೆಯನ್ನು ಎ2 ಆರೋಪಿಯನ್ನಾಗಿ ಮಾಡಿದ್ದರು. ಆದರೆ, ಈಗ ವರ್ಷ ಎನ್ನುವ ಯುವತಿಯೇ ಇಲ್ಲ. ತಾನೇ ಹಾಗೆ ಮಾಡಿದ್ದು ಎಂದು ಮಂಜುಳಾ ಎಂಬಾಕೆಯಿಂದ ತಪ್ಪೊಪ್ಪಿಗೆ ಪತ್ರವನ್ನು ಬರೆಸಿಕೊಂಡು ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿ ತಿಲಾಂಜಲಿ ಹಾಕಲು ಪ್ರಯತ್ನಿಸಲಾಗಿದೆ ಎಂಬ ಅನುಮಾನ ಮೂಡಿದೆ.
ಇದನ್ನೂ ಓದಿ: Monsoon Precaution: ಮಳೆಗಾಲಕ್ಕೆ ಶುರುವಾಯ್ತು ಕ್ಷಣಗಣನೆ; ಈ ಆ್ಯಪ್‌ಗಳು ಈಗ ನಿಮಗೆ ಅತ್ಯಗತ್ಯ
ಪೊಲೀಸರ ಪ್ಲ್ಯಾನ್?
4 ಲಕ್ಷ ರೂಪಾಯಿಗೆ ಕೇಸ್ ಕ್ಲೋಸ್ ಮಾಡಲು ಯಾರು ಹೊರಟಿದ್ದಾರೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಈ ಪ್ರಕರಣದ ಆಡಿಯೊ ಈಗ ಲಭ್ಯವಾಗಿದೆ. ಎ2 ಆರೋಪಿ ಮಂಜುಳಾ ಮತ್ತು ಎ3 ಆರೋಪಿ ಅವನಿಕಾ ನಡುವಿನ ಸಂಭಾಷಣೆ ಬಹಿರಂಗಗೊಂಡಿದೆ.
ಸ್ವಾಮೀಜಿ ನೀಡಿದ್ದ ದೂರಿನಲ್ಲಿ A1 ಆರೋಪಿಯಾಗಿ ವರ್ಷ ಎಂಬ ಯುವತಿ ಇದ್ದಳು. A2 ಆರೋಪಿಯಾಗಿ ವರ್ಷಾಳ ಸ್ನೇಹಿತೆ ಮಂಜುಳಾ ಮೇಲೆ ದೂರಿತ್ತು. ಇನ್ನು ಈ ಸಂಬಂಧ ಸ್ವಾಮೀಜಿ ಬಳಿ ಮಾತುಕತೆಗೆ ಬಂದಿದ್ದ ಸಂಘಟನೆಯೊಂದ ಮುಖ್ಯಸ್ಥೆ ಅವನಿಕಾ A3 ಆರೋಪಿಯಾಗಿದ್ದಾಳೆ. ಸ್ವಾಮೀಜಿ ನೀಡಿದ ದೂರಿನಂತೆ ಪ್ರಕರಣದ ತನಿಖೆಯನ್ನು ದಾಬಸ್‌ಪೇಟೆ ಪೊಲೀಸರು ಆರಂಭಿಸಿದ್ದರು. ಅಲ್ಲದೆ, ಈ ಕೇಸನ್ನು ದೊಡ್ಡದು ಮಾಡ್ಬೇಡಿ, ಚಿಕ್ಕದಾಗಿ ಮುಗಿಸಿ ಎಂದು ಸ್ವಾಮೀಜಿ ಮನವಿ ಮಾಡಿದ್ದರು ಎನ್ನಲಾಗಿದೆ.
ಆದರೆ, ಪೊಲೀಸರಿಗೆ ಸಮಸ್ಯೆಯಾಗಿದ್ದು ಎ1 ಆರೋಪಿ ವರ್ಷ. ಕಾರಣ, ಇಲ್ಲಿ ವರ್ಷ ಎಂಬ ಕ್ಯಾರೆಕ್ಟರ್ ಇಲ್ಲವೇ ಇಲ್ಲ ಎಂಬುದು ಪೊಲೀಸರ ತನಿಖಾ ಆಯಾಮವಾಗಿದೆ. ಏಕೆಂದರೆ ವರ್ಷಳ ಮುಖ ನೋಡದೆ ಸ್ವಾಮೀಜಿ ಹಣ ಹಾಕಲು ಹೇಗೆ ಸಾಧ್ಯ ಎಂಬುದು ಅವರ ಪ್ರಶ್ನೆಯಾಗಿದೆ. ಸ್ವಾಮೀಜಿ ವರ್ಷ ಎಂದರೆ ಯಾರು ಎಂಬ ವಿಷಯವನ್ನು ಮುಚ್ಚಿಟ್ಟಿದ್ದಾರೆಯೇ ಎಂಬ ಅನುಮಾನವೂ ಮೂಡಿದೆ. ಜತೆಗೆ, ಕೇಸ್ ಮುಂದುವರಿಯಲು ವರ್ಷ ಬೇಕೇ ಬೇಕು. ಹೀಗಾಗಿ ಪೊಲೀಸರು ಪ್ಲ್ಯಾನ್ ಮಾಡಿದ್ದಾರೆ. ಎ2 ಆರೋಪಿ ಮಂಜುಳಾಳನ್ನೇ ವರ್ಷಳನ್ನಾಗಿ ಬದಲಾಗೋಕೆ ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Fraud Case: ಬೆಳದಿಂಗಳ ಬಾಲೆಯ ಮೋಹಕ್ಕೆ ಬಿದ್ದರೇ ಸ್ವಾಮೀಜಿ? 35 ಲಕ್ಷ ರೂಪಾಯಿ ದೋಖಾ!
ವರ್ಷಳ ಪರಿಚಯಿಸಿದ್ದ ಮಂಜುಳಾ?
ಇನ್ನೊಂದು ಕಡೆ ಮಂಜುಳಾನೇ ಸ್ವಾಮೀಜಿಗೆ ವರ್ಷಳನ್ನು ಪರಿಚಯ ಮಾಡಿಸಿರಬಹುದು ಎಂಬ ಅನುಮಾನವೂ ಮೂಡಿದೆ. ಸ್ವಾಮೀಜಿ ಅಕೌಂಟಿಂದ ಹಣ ಹೋಗಿರುವುದು ಸಹ ಮಂಜುಳಾ ಅಕೌಂಟಿಗೇ ಆಗಿದೆ. ಹೀಗಾಗಿ ಈ ಪ್ರಕರಣವನ್ನು ಕೊನೆಗಾಣಿಸಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.
ಪೊಲೀಸರು ಹೇಗೆ ಪ್ಲ್ಯಾನ್ ಮಾಡಿದರು ಎನ್ನುವ ಮಾತುಕತೆಯ ಆಡಿಯೊ ಈಗ ಬಹಿರಂಗವಾಗಿದೆ. ಮೂರು ಲಕ್ಷ ರೂಪಾಯಿ ಕೊಟ್ಟರೆ ಬಿ ರಿಪೋರ್ಟ್ ಹಾಕುತ್ತೇವೆ. ನೀನು ಬೇಲ್ ಕೂಡ ತೆಗೆದುಕೊಳ್ಳುವುದು ಬೇಡ. ಆದರೆ ನೀನೇ ವರ್ಷ ಎಂಬಂತೆ ಬರವಣಿಗೆ ಮತ್ತು ವಿಡಿಯೊ ಹೇಳಿಕೆ ಕೊಡಬೇಕು ಎಂದು ಪೊಲೀಸರು ಮಂಜುಳಾಳಿಗೆ ಹೇಳಿದ್ದಾರೆ ಎಂಬ ಬಗ್ಗೆ ಆಡಿಯೊದಲ್ಲಿ ಮಾತುಕತೆ ನಡೆಸಲಾಗಿದೆ.
ವಂಚನೆ ಪ್ರಕರಣದ ಆಡಿಯೊ ಇಲ್ಲಿದೆ
ಈಗಾಗಲೇ ಪೊಲೀಸರ ಒತ್ತಡಕ್ಕೆ ಬರವಣಿಗೆ ಮೂಲಕ ಮಂಜುಳಾ ತಪ್ಪೊಪ್ಪಿಗೆ ಪತ್ರವನ್ನು ಬರೆದುಕೊಟ್ಟಿದ್ದಾಳೆ ಎನ್ನಲಾಗಿದೆ. ಆದರೆ, ಹೀಗೆ ಹೇಳಿಕೆ ನೀಡುವಂತೆ ಮಂಜುಳಾಗೆ ವಕೀಲರ ಮೂಲಕ ಪೊಲೀಸರು ಹೇಳಿಸಿದ್ದಾರೆಯೇ ಎಂಬ ಅನುಮಾನವೂ ಮೂಡಿದೆ.
ಇದನ್ನೂ ಓದಿ: ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
ನನ್ನ ಮಗ ಮಠದಲ್ಲಿ ಓದುತ್ತಿದ್ದ. ಆಗ ಸ್ವಾಮೀಜಿ ಮತ್ತು ನನಗೆ ಪರಿಚಯ ಆಯ್ತು. ಫೇಸ್‌ಬುಕ್ ಮತ್ತು ವಾಟ್ಸಾಪ್‌ನಲ್ಲಿ ಪರಿಚಯ ಮಾಡಿಕೊಂಡಿದ್ದೆವು. ನಾನು ಭಕ್ತೆಯಾಗಿದ್ದು, ಸ್ವಾಮೀಜಿಗೆ 10 ಎಕರೆ ಜಮೀನು ಕೊಡುತ್ತೇನೆ ಎಂದು ಹೇಳಿದ್ದೆ. ಹಾಗಾಗಿ ಸ್ವಾಮೀಜಿ ನನಗೆ ದುಡ್ಡು ಕೊಟ್ಟರು. .ಈ ಕೇಸ್‌ಗೂ ಸಂಘಟನೆಯ ಅವನಿಕಾ, ಕಾವೇರಿ ಸೇರಿದಂತೆ ಯಾರಿಗೂ ಸಂಬಂಧ ಇಲ್ಲ ಎಂದು ಮಂಜುಳಾ ತಪ್ಪೊಪ್ಪಿಗೆ ಪತ್ರವನ್ನು ಕೊಟ್ಟಿದ್ದಾಳೆ. ಈ ಎಲ್ಲ ವಿಚಾರಗಳೂ ಆಡಿಯೊದಲ್ಲಿ ಬಹಿರಂಗವಾಗಿದೆ. ಹೀಗಾಗಿ ಈ ಪ್ರಕರಣ ಮತ್ತೆ ಯಾವ ರೂಪ ಪಡೆದುಕೊಳ್ಳಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.