Site icon Vistara News

Aadhaar Card: ಇನ್ನೂ ಅಪ್ಡೇಟ್‌ ಮಾಡಿಲ್ವಾ? ಆಧಾರ್‌ ಕಾರ್ಡ್‌ ಉಚಿತ ತಿದ್ದುಪಡಿಗೆ 2 ತಿಂಗಳು ಮಾತ್ರ ಅವಕಾಶ!

Aadhar card updates

ಬೆಂಗಳೂರು: ಆಧಾರ್‌ ಕಾರ್ಡ್‌ನಲ್ಲಿ (Aadhaar Card) ತಮ್ಮ ವಿವರಗಳನ್ನು ಯಾವುದೇ ಶುಲ್ಕವಿಲ್ಲದೆ ನವೀಕರಿಸಬಹುದಾದ ಕಾಲವಕಾಶವನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India-UIDAI) ಈಚೆಗೆ ವಿಸ್ತರಿಸಿ ಆದೇಶ ನೀಡಿತ್ತು. ಅಂದರೆ 2024ರ ಮಾರ್ಚ್‌ 14ರವರೆಗೆ ಉಚಿತ ನವೀಕರಣಕ್ಕೆ ಅವಕಾಶ ನೀಡಿದೆ.

ಈ ಸೇವೆಯು ಹಿಂದಿನಂತೆ ಮೈ ಆಧಾರ್ (myAadhaar) ಪೋರ್ಟಲ್‌ನಲ್ಲಿ ಮಾತ್ರ ಉಚಿತವಾಗಿದ್ದು, ಆಧಾರ್ ಕೇಂದ್ರಗಳಲ್ಲಿ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಮುಂತಾದ ವಿವರಗಳನ್ನು ನವೀಕರಿಸಬಹುದು. 2024ರ ಮಾರ್ಚ್‌ 14ರ ನಂತರ ನೀವು ಶುಲ್ಕ ಪಾವತಿಸಿ ಅಪ್‌ಡೇಟ್‌ ಮಾಡಬೇಕಾಗುತ್ತದೆ ಎಂದು ಯುಐಡಿಎಐ ತಿಳಿಸಿದೆ.

ಏಕೆ ನವೀಕರಿಸಬೇಕು?

ಆಧಾರ್‌ನ ಆಡಳಿತ ಮಂಡಳಿ ಯುಐಡಿಎಐ, ಪ್ರಜೆಗಳು ತಮ್ಮ ಆಧಾರ್ ವಿವರಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ. ಡೇಟಾಬೇಸ್‌ನಲ್ಲಿನ ಡೇಟಾ ನಿಖರವಾಗಿದೆ ಮತ್ತು ನವೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕಿದೆ. ಮದುವೆ, ವಾಸಸ್ಥಾನ ಬದಲಾವಣೆ ಇತ್ಯಾದಿ ಜೀವನ ಘಟನೆಗಳಿಂದ ವ್ಯಕ್ತಿ ಹೆಸರು ಮತ್ತು ವಿಳಾಸದಂತಹ ಮೂಲಭೂತ ಜನಸಂಖ್ಯಾ ವಿವರಗಳನ್ನು ಬದಲಾಯಿಸಬೇಕಾಗಬಹುದು. ವಿಳಾಸ ಮತ್ತು ಮೊಬೈಲ್ ಸಂಖ್ಯೆ ಹೊಸ ಸ್ಥಳಗಳಿಗೆ ವಲಸೆ ಹೋದಾಗ ಬದಲಾಗಬಹುದು. ಇದರ ಜತೆಗೆ ಮಕ್ಕಳ ಆಧಾರ್ ವಿವರಗಳನ್ನು ನವೀಕರಿಸಲು ಸರ್ಕಾರ ಈಗ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಈ ಮಾರ್ಗಸೂಚಿಗಳ ಪ್ರಕಾರ, ಮಗುವಿಗೆ 15 ವರ್ಷ ವಯಸ್ಸಾದಾಗ ನವೀಕರಣಕ್ಕಾಗಿ ಎಲ್ಲ ಬಯೋಮೆಟ್ರಿಕ್‌ಗಳನ್ನು ಒದಗಿಸಬೇಕು. ಇದು ಮಗುವಿನ ಆಧಾರ್ ಡೇಟಾ ನಿಖರವಾಗಿದೆ ಮತ್ತು ನವೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತದೆ.

ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್‌ ಮಾಡುವ ವಿಧಾನ

UIDAI ವೆಬ್‌ಸೈಟ್‌ಗೆ ಹೋಗಿ, ಅಲ್ಲಿ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಸೃಷ್ಟಿಸಿಕೊಳ್ಳಿ. ಲಾಗ್ ಇನ್ ಆಗಿ ಅಪ್‌ಡೇಟ್‌ ವಿನಂತಿ ಸಲ್ಲಿಸಿದರೆ, UIDAI ವಿನಂತಿಯನ್ನು ಪರಿಶೀಲಿಸುತ್ತದೆ ಮತ್ತು 15 ದಿನಗಳಲ್ಲಿ ಆಧಾರ್ ವಿವರಗಳನ್ನು ನವೀಕರಿಸುತ್ತದೆ.

ಇದನ್ನೂ ಓದಿ: BMTC Bus: ಮದುವೆ, ಟೂರ್‌ಗೆ ಸಿಗಲಿದೆ ಬಿಎಂಟಿಸಿ ಬಸ್; ಯಾವ ಬಸ್‌ಗೆ ಎಷ್ಟು ಬಾಡಿಗೆ?

Exit mobile version