ಬೆಂಗಳೂರು: ಆಮ್ ಆದ್ಮಿ ಪಾರ್ಟಿ (Aam Aadmi Party) ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಆವರಣದಲ್ಲಿ ʻಪೊರಕೆಯೇ ಪರಿಹಾರʼ ಹೆಸರಿನಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ, ಅಲ್ಲಿಂದ ಬೃಹತ್ ಮೆರವಣಿಗೆಯಲ್ಲಿ ಸಾಗಿ ಫ್ರೀಡಂ ಪಾರ್ಕ್‌ನಲ್ಲಿ ಬಹಿರಂಗ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಪ್ರಸ್ತುತ ಫ್ರೀಡಂ ಪಾರ್ಕ್ ಅನ್ನು ಸರಿಯಾಗಿ ಗಮನಿಸಿದರೆ ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಹೇಗಿದೆ ಎಂದು ಸ್ಪಷ್ಟವಾಗಿ ಅರಿವಾಗುತ್ತದೆ. ವಿವಿಧ ಸಂಘಟನೆಗಳು ನ್ಯಾಯಕ್ಕಾಗಿ ಪ್ರತಿಭಟನೆಗಳನ್ನು ಮಾಡುವುದು ಸಾಮಾನ್ಯವಾಗಿದೆ. ಇದು ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿದೆ ಹಾಗೂ ಅದಕ್ಕೆ ಅಂತ್ಯ ಹಾಡಲು ಜನರು ನಿರ್ಧರಿಸಿದ್ದಾರೆ ಎಂಬುದರ ಸಂಕೇತ. ಭ್ರಷ್ಟಾಚಾರ, ಅನ್ಯಾಯ, ಅಕ್ರಮ ಮುಂತಾದ ಕಸಗಳಿಗೆ ಪೊರಕೆಯೇ ಪರಿಹಾರ. ಆದ್ದರಿಂದ ಕರ್ನಾಟಕದ ಜನರು ಈ ಬಾರಿ ಪೊರಕೆಯನ್ನು ಅಧಿಕಾರಕ್ಕೆ ತರಬೇಕು” ಎಂದು ಹೇಳಿದರು.
“ಒಂದು ದಶಕದ ಹಿಂದೆ ಫ್ರೀಡಂ ಪಾರ್ಕ್‌ನಲ್ಲಿ ನಾವು ಭ್ರಷ್ಟಾಚಾರ ವಿರೋಧಿ ಭಾರತ ಹೆಸರಿನಲ್ಲಿ ಪ್ರತಿಭಟನೆಗೆ ಕುಳಿತಿದ್ದೆವು. ಆಗ, ರಾಜಕೀಯ ಪ್ರವೇಶಿಸಿ ನಂತರ ಮಾತಾಡಿ ಎಂದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ನಮಗೊಂದು ಸವಾಲು ಹಾಕಿತು. ನಾವು ಆ ಸವಾಲು ಸ್ವೀಕರಿಸಿ ಆಮ್ ಆದ್ಮಿ ಪಾರ್ಟಿಯನ್ನು ರಚಿಸಿ, ಜನವಿರೋಧಿ ಆಡಳಿತಗಳನ್ನು ಕೊನೆಗಾಣಿಸುತ್ತಾ ಸಾಗಿದೆವು. ಈಗ 2 ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದು, ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ್ದೇವೆ. ಅದೇ ರೀತಿ ಜನರು ಕರ್ನಾಟಕದ ಭ್ರಷ್ಟ ಹಾಗೂ ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಬೇಕು” ಎಂದು ಪೃಥ್ವಿ ರೆಡ್ಡಿ ಹೇಳಿದರು.
ಇದನ್ನೂ ಓದಿ | Political warfare : ಸಚಿವ ಅಶ್ವತ್ಥನಾರಾಯಣಗೆ ತಿರುಗೇಟು ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ, ಆಮ್ ಆದ್ಮಿ ಪಾರ್ಟಿ ಮುಖಂಡರಾದ ಮುಖ್ಯಮಂತ್ರಿ ಚಂದ್ರು, ಬ್ರಿಜೇಶ್ ಕಾಳಪ್ಪ, ಸುರೇಶ್ ರಾಥೋಡ್, ಬಿ.ಕೆ.ಶಿವಪ್ಪ, ಸೌಂದರ್ಯ ಕೀರ್ತನ್, ರವಿಚಂದ್ರ, ಲಕ್ಷ್ಮೀಕಾಂತ ರಾವ್, ಡಾ. ಸತೀಶ್ ಕುಮಾರ್, ಅಶೋಕ್ ಮೃತ್ಯುಂಜಯ, ಗಿರೀಶ್ ನಾಯ್ಡು, ಉಷಾ ಮೋಹನ್ ಮತ್ತಿತರ ನಾಯಕರು ಭಾಗವಹಿಸಿದ್ದರು.