ಬೆಂಗಳೂರು: ರಾಜ್ಯದ ಕೆಲವು ಮುಜರಾಯಿ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಸಲಾಂ ದೀವಟಿಗೆ ಆರತಿಗೆ (ಟಿಪ್ಪು ವಿವಾದ) ಬ್ರೇಕ್ ಹಾಕಲಾಗುತ್ತದೆ ಎಂದು ಧಾರ್ಮಿಕ ಪರಿಷತ್ ಹೇಳಿಕೊಂಡಿದೆ. ಆದರೆ, ಈ ಬಗ್ಗೆ ಇನ್ನೂ ಏನೂ ತೀರ್ಮಾನ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದರ ನಡುವೆ, ಮುಜರಾಯಿ ಖಾತೆ ಸಚಿವರಾಗಿರುವ ಶಶಿಕಲಾ ಜೊಲ್ಲೆ ಅವರು ಆರತಿ ರದ್ದಾಗುವುದಿಲ್ಲ, ಹೆಸರು ಬದಲಾಗುತ್ತದೆ, ಈ ಬಗ್ಗೆ ಸಿಎಂ ಅವರ ಜತೆ ಇನ್ನಷ್ಟೇ ಚರ್ಚಿಸಬೇಕಾಗಿದೆ ಎಂದು ಹೇಳಿದ್ದಾರೆ.
ಆರತಿ ರದ್ದಾಗುವುದಿಲ್ಲ ಎಂದ ಸಚಿವೆ
ಟಿಪ್ಪು ಸುಲ್ತಾನ್ ಕಾಲದಿಂದ ಆಚರಣೆಯಲ್ಲಿರುವ ಸಲಾಂ ಆರತಿಯನ್ನು ನಿಲ್ಲಿಸುವುದಾಗಿ, ಅದರ ಬದಲಿಗೆ ಸಂಧ್ಯಾರತಿ ಮಾಡುವುದಾಗಿ ಹೇಳಿರುವ ಧಾರ್ಮಿಕ ಪರಿಷತ್ ಹೇಳಿಕೆಗೆ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟನೆ ನೀಡಿದ್ದಾರೆ.
ಸಲಾಂ ಆರತಿ ಬಗ್ಗೆ ಹಿಂದಿನಿಂದಲೂ ಚರ್ಚೆ ಇದೆ. ಈಗ ಧಾರ್ಮಿಕ ಪರಿಷತ್‌ನಲ್ಲಿ ಅದರ ಹೆಸರು ಬದಲಾಯಿಸಲು ನಿರ್ಧರಿಸಲಾಗಿದೆ. ಅದರ ಹೆಸರು ಬದಲಾಗುತ್ತದೆಯೇ ವಿನಃ ಆರತಿ ರದ್ದಾಗುವುದಿಲ್ಲ ಎಂದು ಸಚಿವರು ಹೇಳಿದರು. ಸಲಾಂ ಎನ್ನುವುದು ಸಂಸ್ಕೃತ ಪದವಲ್ಲ. ಆರತಿಗೆ ಒಂದು ಸಂಸ್ಕೃತ ಹೆಸರು ಇಡಬೇಕು ಎಂಬ ಮನವಿಗೆ ಸ್ಪಂದಿಸಿದ್ದೇವೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಸಚಿವರು ತಿಳಿಸಿದರು.
ಮೊದಲು ಮುಜರಾಯಿ ಇಲಾಖೆ ಅಧಿಕಾರಿಗಳು, ನಂತರ ಇತಿಹಾಸಕಾರರ ಜತೆ ಚರ್ಚಿಸಿ ಬಳಿಕ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸುತ್ತೇವೆ. ಆ ಬಳಿಕ ಸರಕಾರದ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ದೀವಟಿಗೆ ಸಲಾಂ ಬದಲಿಗೆ ಮಂಗಳಾರತಿ ನಮಸ್ಕಾರ, ಆರತಿ ನಮಸ್ಕಾರ ಎಂದು ಹೆಸರಿಡುವ ಚಿಂತನೆ ಇದೆ ಎಂದು ಅವರು ತಿಳಿಸಿದರು.
ಸಲಾಂ ಆರತಿ ಬದಲಾಗಲೇಬೇಕು
ಈ ನಡುವೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಯಾವುದೋ ಗುಲಾಮಿ ಪರಿಸ್ಥಿತಿಯಲ್ಲಿ ಆರಂಭಗೊಂಡ ಸಲಾಂ ಆರತಿಯನ್ನು ಬದಲಾಯಿಸಬೇಕು ಎಂದು ಅಭಿಪ್ರಾಯಪಟ್ಟರು.
ʻʻನಮ್ಮ ದೇವಾಲಯಗಳಲ್ಲಿ ನಮ್ಮ ಸಾಂಸ್ಕೃತಿಕ ನೆಲೆಗಟ್ಟು ಮುಖ್ಯ. ಹಾಗಾಗಿ ಸಲಾಂ ಆರತಿ ಬದಲಾವಣೆ ಆಗಲೇ ಬೇಕುʼʼ ಎಂದು ಹೇಳಿದರು.
ಇದನ್ನೂ ಓದಿ | ಟಿಪ್ಪು ವಿವಾದ | ದೇವಾಲಯಗಳಲ್ಲಿ ಟಿಪ್ಪು ಆರಂಭಿಸಿದ್ದ ದೀವಟಿಕೆ ಸಲಾಮ್‌ಗೆ ಬ್ರೇಕ್, ಮುಜರಾಯಿ ಇಲಾಖೆ ಹೆಸರೂ ಬದಲು