Site icon Vistara News

ವಿಸ್ತಾರ ಸಂಪಾದಕೀಯ: ನಿಂದನೆಗಳು ಆಡಿದವರಿಗೇ ಹಾನಿಕರ, ಮಾತಿನಲ್ಲಿ ಎಚ್ಚರವಿರಲಿ

Abuses are harmful to those who have spoken, beware of words

#image_title

ನರೇಂದ್ರ ಮೋದಿ ಅಂದರೆ ವಿಷದ ಹಾವಿದ್ದಂತೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಯ ಸನಿಹದಲ್ಲಿ ಖರ್ಗೆ ನೀಡಿದ ಹೇಳಿಕೆ ಸಾಕಷ್ಟು ಸದ್ದು ಮಾಡಿದೆ. ಕಳೆದ ಗುಜರಾತ್‌ ಚುನಾವಣೆಯ ಸಂದರ್ಭದಲ್ಲೂ ಖರ್ಗೆ ಅವರು ಮೋದಿಯವರನ್ನು ರಾವಣನಿಗೆ ಹೋಲಿಸಿ ವಿವಾದಕ್ಕೆ ಗುರಿಯಾಗಿದ್ದರು. ʼವಿಷದ ಹಾವುʼ ಹೇಳಿಕೆಗೆ ಬಿಜೆಪಿ ಹಾಗೂ ಸಾರ್ವಜನಿಕ ವಲಯದಿಂದ ಕಟು ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಖರ್ಗೆಯವರು, ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಆಡಿದ ಮಾತು ಮತ್ತು ಒಡೆದ ಮುತ್ತು ತಿರುಗಿ ಬರಲಾರವು. ಅವು ಸಾಕಷ್ಟು ಹಾನಿ ಎಸಗಿಯೇ ಎಸಗುತ್ತವೆ.

ನರೇಂದ್ರ ಮೋದಿಯವರು ಕಾಂಗ್ರೆಸ್‌ ಮತ್ತಿತರ ಪ್ರತಿಪಕ್ಷಗಳ ನಾಯಕರಿಗೆ ಒಂಥರಾ ʼಪಂಚಿಂಗ್‌ ಬ್ಯಾಗ್‌ʼ ಇದ್ದಂತೆ ಆಗಿಬಿಟ್ಟಿದ್ದಾರೆ. ಎಲ್ಲಾ ನಾಯಕರೂ ಮೋದಿಯವರನ್ನು ಕಟು ಪದಗಳಿಂದ ಟೀಕಿಸುತ್ತಾರೆ. ತುಂಬಾ ಮಂದಿ ಸಭ್ಯತೆಯ ಎಲ್ಲೆ ಮೀರಿದ ಶಬ್ದಗಳಿಂದ ನಿಂದಿಸಿದ್ದಾರೆ. ಮೋದಿ ಅವರಿಗೆ ಮಾತ್ರವೇ ಅಲ್ಲ, ಯಾರನ್ನು ಉದ್ದೇಶಿಸಿಯೂ ಇಂಥ ಪದಪ್ರಯೋಗ, ನಿಂದನೆ, ಕೀಳು ಅಭಿರುಚಿಯ ಟೀಕೆಯ ಬಳಕೆ ಸಲ್ಲದು. ಚುನಾವಣೆಯ ಸಂದರ್ಭದಲ್ಲಿ ಇಂಥ ಟೀಕೆಗಳು ತಿರುಗುಬಾಣವಾಗುತ್ತವೆ ಎಂಬುದು ಅರಿವಿನಲ್ಲಿದ್ದರೂ, ವಾಗ್ದಾಳಿಯ ಭರದಲ್ಲಿ ರಾಜಕೀಯ ನಾಯಕರು ಮತ್ತೆ ಮತ್ತೆ ಇಂಥ ಭಾಷಾ ಬಳಕೆ ಮಾಡುವುದು, ನಾಲಿಗೆ ಸಡಿಲ ಬಿಡುವುದು ಸೋಜಿಗ.

ಈ ಹಿಂದಿನ ಇಂಥ ನಿದರ್ಶನಗಳನ್ನು ಗಮನಿಸಿದರೆ, ಇಂಥ ಮಾತುಗಳನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದು ಗೊತ್ತಾಗುತ್ತದೆ. 2007ರಲ್ಲಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ʼಸಾವಿನ ವ್ಯಾಪಾರಿʼ ಎಂದು ಕರೆದಿದ್ದರು. ಮಣಿಶಂಕರ ಅಯ್ಯರ್‌ ಅವರು ಮೋದಿಯವರನ್ನು 2014ರಲ್ಲಿ ʼಚಾಯ್‌ವಾಲಾʼ ಎಂದು, 2017ರಲ್ಲಿ ʼನೀಚʼ ಎಂದು ಜರೆದಿದ್ದರು. 2019ರ ಲೋಕಸಭೆ ಚುನಾವಣೆಯ ಸಂದರ್ಭ ರಾಹುಲ್‌ ಗಾಂಧಿಯವರು ಮೋದಿಯವರಿಗೆ ʼಚೌಕಿದಾರ್‌ ಚೋರ್‌ ಹೈʼ ಎಂದು ಟೀಕಿಸಿದ್ದರು. ಇತ್ತೀಚೆಗೆ ಗುಜರಾತ್‌ ಚುನಾವಣೆ ಸಂದರ್ಭ ಮೋದಿಯವರಿಗೆ ಮಲ್ಲಿಕಾರ್ಜುನ ಖರ್ಗೆಯವರು ʼರಾವಣʼ ಎಂದಿದ್ದರು. ಆದರೆ ಇಂಥ ಹೇಳಿಕೆಗಳೆಲ್ಲ ಹೇಳಿದವರಿಗೇ ತಿರುಮಂತ್ರವಾಗಿದ್ದವು. ಬಿಜೆಪಿ ಭಾರಿ ಬಹುಮತದಿಂದ ಗೆದ್ದಿತ್ತು. ಮತದಾರರ ಮನಶ್ಶಾಸ್ತ್ರ ಅರ್ಥ ಮಾಡಿಕೊಳ್ಳುವ ಜನನಾಯಕರು ಇಂಥ ಬೈಗುಳಗಳನ್ನು ತಮ್ಮ ಎದುರಾಳಿಗೆ ಬಳಸಲಾರರು. ಇದು ಅವರನ್ನೇ ಇಕ್ಕಟ್ಟಿಗೆ ಸಿಲುಕಿಸುವುದಲ್ಲದೆ, ಅವರ ಚಾರಿತ್ರ್ಯವನ್ನೂ ಹರಾಜಿಗಿಡುತ್ತದೆ.

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ಜೋರಾಗುವುದು ಸಹಜ. ಆದರೆ ಅದು ಮಿತಿಯನ್ನು ಮೀರಕೂಡದು. ಇತ್ತೀಚೆಗೆ ಕಾಂಗ್ರೆಸ್‌ನ ಮುಖಂಡರೊಬ್ಬರು, ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋದ ಶಾಸಕರನ್ನು ವೇಶ್ಯೆಯರಿಗೆ ಹೋಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿಯ ಸಚಿವರೊಬ್ಬರು, ಹಿಂಬಾಗಿಲಿನಿಂದ ಬಂದು ಎಂಎಲ್‌ಸಿ ಆದವರು ಪಿಂಪ್‌ ಇದ್ದಂತೆ ಎಂದಿದ್ದರು. ಇಂಥ ಮಾತುಗಳೆಲ್ಲಾ ಸಾರ್ವಜನಿಕ ಜೀವನದಲ್ಲಿ ಅಗತ್ಯವಿದೆಯೇ? ಈ ಬಗೆಯ ಟೀಕೆ- ನಿಂದನೆಗಳಿಲ್ಲದೇ, ಸಭ್ಯ ರೀತಿಯ ಮಾತುಗಳಿಂದಲೇ ಜನಮನ ಗೆಲ್ಲಲು ಸಾಧ್ಯವಿದೆ ಎಂಬುದನ್ನು ಕರ್ನಾಟಕದ ಈ ಹಿಂದಿನ ಅನೇಕ ಮುತ್ಸದ್ಧಿಗಳು ಮಾಡಿ ತೋರಿಸಿದ್ದಾರೆ. ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ಜೆ.ಎಚ್‌ ಪಟೇಲ್‌, ದೇವರಾಜ ಅರಸು ಮೊದಲಾದವರೆಲ್ಲ ಎಂದೂ ಅಸಾಂಸದಿಕವಾದ ಇಂಥ ಮಾತುಗಳನ್ನು ಆಡಲಿಲ್ಲ. ಆದರೆ ಅವರ ಜನಪ್ರಿಯತೆಯೇನೂ ಕಡಿಮೆಯಾಗಲಿಲ್ಲ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ನಕ್ಸಲರ ಹೇಡಿತನದ ದಾಳಿ ಖಂಡನೀಯ

ಕಾಂಗ್ರೆಸ್‌ ಹಳೆಯ ಘಟನೆಗಳಿಂದ ಪಾಠ ಕಲಿತಿಲ್ಲವೆಂಬುದನ್ನು ಇದು ತೋರಿಸುತ್ತದೆ. ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಚಾರದಲ್ಲಿ ಸಾಕಷ್ಟು ಮುಂದಿದೆ. ಒಂದು ಹಂತದಲ್ಲಿ ಅದು ಬಿಜೆಪಿಯ ಎದುರು ಮೇಲುಗೈಯನ್ನೂ ಸಾಧಿಸಿತ್ತು. ಇದೀಗ ಇಂಥ ಹೇಳಿಕೆಗಳಿಂದ ಅದು ತನ್ನ ಕಾಲ ಕೆಳಗಿನ ನೆಲವನ್ನು ತಾನೇ ತೋಡಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಚುನಾವಣೆ ಸಂದರ್ಭದಲ್ಲಿ ಪ್ರಗತಿ, ಭ್ರಷ್ಟಾಚಾರ, ಸಾಧನೆ, ವೈಫಲ್ಯಗಳ ಬಗ್ಗೆ ಅರ್ಥಪೂರ್ಣ ಚರ್ಚೆ ಆಗಬೇಕು. ಆಡಳಿತ ಪಕ್ಷ ಸರಿಯಾಗಿ ಕೆಲಸ ಮಾಡಿದೆಯೇ ಇಲ್ಲವೇ ಎಂದು ಪ್ರತಿಪಕ್ಷ ವಿಮರ್ಶಿಸಬೇಕು. ತಾನು ಮಾಡಿರುವ ಕೆಲಸಗಳಿಗೆ ಆಡಳಿತ ಪಕ್ಷ ಕನ್ನಡಿ ಹಿಡಿಯಬೇಕು, ಪ್ರತಿಪಕ್ಷದ ವೈಫಲ್ಯಗಳನ್ನು ಸಾಣೆಗೆ ಹಿಡಿಯಬೇಕು. ಆಗ ಮಾತ್ರ ವಾಗ್ವಾದಗಳು ಅರ್ಥಪೂರ್ಣವಾಗುತ್ತವೆ.

Exit mobile version