Site icon Vistara News

ACB raid | ದಾಳಿಗೊಳಗಾದವರ ಮನೆಯಲ್ಲಿ‌ ಸಿಗುತ್ತಿದೆ ಕೆಜಿ ಕೆಜಿ ಚಿನ್ನ, ಹತ್ತಾರು ಸೈಟ್‌, ಬಂಗಲೆ!

ಹೂವಿನಹಡಗಲಿಯಲ್ಲಿ -ಸಣ್ಣ ನೀರಾವರಿ, ಅಂತರ್ಜಲ ಇಲಾಖೆಯ ಸಹಾಯಕ ಅಭಿಯಂತರು ಪರಮೇಶ್ವರಪ್ಪ

ಬೆಂಗಳೂರು : ರಾಜ್ಯಾದ್ಯಂತ 21 ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳ ಶೋಧ (ACB raid) ಕಾರ್ಯ ಮುಂದುವರಿದಿದ್ದು, ಚಿನ್ನಾಭರಣ ಹಾಗೂ ಆಸ್ತಿ ಕುರಿತ ಮಹತ್ವದ ದಾಖಲೆ ಪತ್ರಗಳು ಪತ್ತೆಯಾಗುತ್ತಿವೆ. ಬಾತ್‌ರೂಂನಂಥ ಪ್ರದೇಶದಲ್ಲೂ ನಗದು ಪತ್ತೆಯಾಗುತ್ತಿದೆ. ಕೆಜಿಗಟ್ಟಲೆ ಚಿನ್ನಾಭರಣ, ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗುತ್ತಿದ್ದು, ಸೈಟ್‌ಗಳಷ್ಟೇ ಅಲ್ಲದೆ ಹಲವು ಕಡೆ ಕೃಷಿ ಭೂಮಿಗಳನ್ನೂ ಅಧಿಕಾರಿಗಳು ಹೊಂದಿದ್ದಾರೆ.

ಬೆಂಗಳೂರು ಉತ್ತರ ವಿವಿಯ ಮಾಜಿ ವಿಜಿಲೆನ್ಸ್‌ ರಿಜಿಸ್ಟ್ರಾರ್ ಜನಾರ್ದನಂ ಅವರಿಗೆ ಸೇರಿದ ಚಂದ್ರಾ ಲೇಔಟ್‌ನ ಮನೆಯಲ್ಲಿ ಎಸಿಬಿ ಶೋಧ ಮುಂದುವರಿದಿದೆ. ಮನೆಯಲ್ಲಿ 4 ಲಕ್ಷ ನಗದು, ಅಂದಾಜು 1 ಕೆಜಿ ಚಿನ್ನ, 3 ಕೆಜಿ ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಪತ್ನಿ ಬೆಂಗಳೂರು ವಿವಿಯಲ್ಲಿ ತೆಲುಗು ವಿಭಾಗದ ಮುಖ್ಯಸ್ಥೆಯಾಗಿದ್ದು, ಇಬ್ಬರೂ ಮೂಲತಃ ಆಂಧ್ರಪ್ರದೇಶದವರು.

ಮಾಜಿ ಉತ್ತರ ಯೂನಿವರ್ಸಿಟಿಯ ವಿಜಿಲೆನ್ಸ್‌ ರಿಜಿಸ್ಟ್ರಾರ್ ಜನಾರ್ಧನಮ್‌

ಕಸ್ತೂರಬಾ ರಸ್ತೆಯಲ್ಲಿ ಮಗನ ಹೆಸರಿನಲ್ಲಿ ರೆಸ್ಟೋರೆಂಟ್ ನಿರ್ಮಾಣ ಹಂತದಲ್ಲಿದೆ. ನಾಗದೇವನಹಳ್ಳಿ ಮತ್ತು ವಿಶ್ವೇಶ್ವರಯ್ಯ ಲೇ ಓಟ್‌ನಲ್ಲಿ 2 ಸೈಟ್ ಹಾಗೂ ಬನ್ನೇರುಘಟ್ಟ ರಸ್ತೆಯಲ್ಲಿ 3 ಪ್ರತ್ಯೇಕ ಅಪಾರ್ಟ್ಮೆಂಟ್‌ನಲ್ಲಿ 3 ಫ್ಲಾಟ್ ಖರೀದಿಗೆ ಅಡ್ವಾನ್ಸ್ ಪಾವತಿ ಮಾಡಿದ್ದಾರೆ. ತಲಾ 35 ಲಕ್ಷ ಅಡ್ವಾನ್ಸ್ ನೀಡಿರುವ ದಾಖಲೆ ಪತ್ತೆಯಾಗಿದೆ. ಜನಾರ್ದನಂ ಒಡೆತನದ ವೆಂಕಟೇಶ್ವರ ಚಾರಿಟೆಬಲ್ ಟ್ರಸ್ಟ್ ಅಡಿಯಲ್ಲಿ ಚಿತ್ತೂರಿನಲ್ಲಿ ಜ್ಞಾನಜ್ಯೋತಿ ಇಂಟರ್ ನ್ಯಾಷನಲ್ ಸ್ಕೂಲ್ ಕೂಡ ಹೊಂದಿದ್ದಾರೆ.

ಇದನ್ನೂ ಓದಿ | ACB raid |ಬಿಡಿಎ ಗಾರ್ಡನರ್‌ ಕೂಡ ಕೋಟಿ ಕೋಟಿ ಕುಳ: 48 ಸಾವಿರ ಸಂಬಳ ಪಡೆಯುವವನ ಆಸ್ತಿ ಎಷ್ಟು ನೋಡಿ

ಉಡುಪಿ

ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್‌ ಹರೀಶ್‌ ಮನೆಯಲ್ಲಿ 5 ಲಕ್ಷ ರೂ. ನಗದು 18ಕ್ಕೂ ಹೆಚ್ಚು ಚಿನ್ನದ ಬಳೆ, 30ಕ್ಕೂ ಹೆಚ್ಚು ಚಿನ್ನದ ಸರ ಹಾಗೂ ನಕ್ಲೇಸ್‌, ಉಂಗುರ ಸೇರಿದಂತೆ ಹಲವು ಚಿನ್ನದ ಆಭರಣಗಳು ಹಾಗೂ ಆಸ್ತಿಪತ್ರಗಳು ಪತ್ತೆಯಾಗಿದ್ದು ಪರಿಶೀಲನೆ ಪ್ರಗತಿಯಲ್ಲಿದೆ. 21 ಅಧಿಕಾರಿಗಳ 2 ತಂಡಗಳಿಂದ ಏಕಕಾಲಕ್ಕೆ ದಾಳಿ ಆಗಿದೆ.7 6 ಬಡಗುಬೆಟ್ಟು ಕೊರಂಗಪಾಡಿ ವಾಸದ ಮನೆ, ಉಡುಪಿಯಲ್ಲಿರುವ ಕಚೇರಿಯಲ್ಲಿ ದಾಖಲೆ ಪರಿಶೀಲಿಸಲಾಗುತ್ತಿದೆ.

ಕಲಬುರಗಿ

ಕಲಬರಗಿಯ ಈಶಾನ್ಯ ವಲಯ ಎಸಿಬಿ ಅಧಿಕಾರಿಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ ಜಿಲ್ಲಾ ಯೋಜನಾಧಿಕಾರಿ ತಿಪ್ಪಣ್ಣ ಪಿ. ಶಿರಸಂಗಿ ಮೇಲೆ ದಾಳಿ ನಡೆಸಿದೆ. 11 ಅಧಿಕಾರಿಗಳ 2 ತಂಡದಿಂದ ಏಕಕಾಲಕ್ಕೆ ದಾಳಿ ಮಾಡಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ ಕಚೇರಿ ಹಾಗೂ ಕೆಹೆಚ್‌ಬಿ ಕಾಲೋನಿಯ ಮನೆ ಮೇಲೆ ದಾಳಿ ಯಾಗಿ ಚಿನ್ನಾಭರಣ, ನಗದು ಹಾಗೂ ದಾಖಲೆಪತ್ರಗಳನ್ನು ವಶಪಡಿಸಿಕೊಂಡು ಲೆಕ್ಕ ಹಾಕಲಾಗುತ್ತಿದೆ.

ಬೀದರ್‌

ಈಶಾನ್ಯ ವಲಯ ಎಸಿಬಿ ಅಧಿಕಾರಿಗಳಿಂದ ವಿವಿ ಸಹಾಯಕ ನಿಯಂತ್ರಕ ಮೃತ್ಯುಂಜಯ ಸಿ. ಕಿರಾಣಿ ಅವರ ಮೇಲೆ ದಾಳಿ ಆಗಿದೆ. 22 ಅಧಿಕಾರಿಗಳ 4 ತಂಡಗಳಿಂದ ಏಕಕಾಲಕ್ಕೆ ದಾಳಿ ಆಗಿದ್ದು, ಬೀದರ್, ಕಲಬರಗಿ ಮನೆ, ಮೃತ್ಯಂಜಯ ಮಾವನ ಮನೆ, ವಿವಿ ಕಚೇರಿ ಸೇರಿ 4 ಕಡೆ ದಾಳಿ, ಎಸಿಬಿಯಿಂದ ಶೋಧವಾಗುತ್ತಿದೆ.

ವಿಜಯನಗರ

ಹೂವಿನಹಡಗಲಿಯಲ್ಲಿ ಸಣ್ಣ ನೀರಾವರಿ, ಅಂತರ್ಜಲ ಇಲಾಖೆಯ ಸಹಾಯಕ ಅಭಿಯಂತ ಪರಮೇಶ್ವರಪ್ಪ ಮೇಲೆ ಬಳ್ಳಾರಿ ವಲಯ ಎಸಿಬಿ ಅಧಿಕಾರಿಗಳಿಂದ ದಾಳಿ ಆಗಿದೆ. 18 ಅಧಿಕಾರಿಗಳ 3 ತಂಡಗಳಿಂದ ಏಕಕಾಲಕ್ಕೆ ದಾಳಿ ಆಗಿದ್ದು ಹಗರಿ ಬೊಮ್ಮನಹಳ್ಳಿಯ ಕೆಹೆಚ್‌ಬಿ ಕಾಲೋನಿಯ ಮನೆ ಹಾಗೂ ಚಿತ್ರದುರ್ಗದ ವಾಸದ ಮನೆಗೆ ದಾಳಿ ಆಗಿದೆ. ಪತ್ನಿಗೆ ಎರಡು ಎರಡು ಮಾಂಗಲ್ಯ ಸರ, ನಕ್ಲೇಸ್, ಉಂಗುರ, ಬಂಗಾರದ ಬಳೆಗಳು, ಬೆಳ್ಳಿಯ ಆಭರಣಗಳನ್ನು ಎಸಿಬಿ ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳ್ಳಿಯ ನಾಣ್ಯ ಹಾಗೂ ಲಕ್ಷಾಂತರ ರೂಪಾಯಿ ಪತ್ತೆಯಾಗಿದೆ. ಹಗರಿಬೊಮ್ಮನಹಳ್ಳಿಯ ನಿವಾಸದಲ್ಲಿ ಹಲವು‌ ಆಸ್ತಿ ಖರೀದಿ ಪತ್ರಗಳು ಪತ್ತೆ ಯಾಗಿದ್ದು, ಚಿತ್ರದುರ್ಗದ ವಿದ್ಯಾನಗರ ಬಡಾವಣೆಯ ಮನೆಯಲ್ಲೂ ಪರಿಶೀಲನೆ ಮುಂದುವರಿದಿದೆ.

ಬೆಂಗಳೂರು ವಲಯದ ಎಸಿಬಿ ಅಧಿಕಾರಿಗಳು ಪಿಡಬ್ಲ್ಯುಡಿ ಇಲಾಖೆ ನಿವೃತ್ತ ಅಭಿಯಂತರ ಮಂಜುನಾಥ್ ಜಿ. ಅವರ ಮೇಲೆ ದಾಳಿ ಮಾಡಿದ್ದಾರೆ. 12 ಅಧಿಕಾರಿಗಳ ತಂಡದಿಂದ ದಾಳಿ ಆಗಿದ್ದು, ಬಸವೇಶ್ವರ ನಗರದಲ್ಲಿರುವ ವಾಸದ ಮನೆಯಲ್ಲಿ ಶೋಧವಾಗುತ್ತಿದೆ. ಬೆಂಗಳೂರು ದಕ್ಷಿಣ ಬಿಡಿಎ ಎಇಇ ಶಿವಲಿಂಗಯ್ಯ ಮೇಲೆ 15 ಅಧಿಕಾರಿಗಳ ಮೂರು ತಂಡಗಳಿಂದ ದಾಳಿ ನಡೆದಿದೆ. ಜೆ.ಪಿ. ನಗರ 6ನೇ ಹಂತದಲ್ಲಿರುವ ವಾಸದ ಮನೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ಕಂದಾಯ ಭವನದ ಸಹಾಯಕ ಮಹಾನಿರೀಕ್ಷಕ ಮಧುಸೂಧನ್ ಮೇಲೆ 22 ಅಧಿಕಾರಿಗಳ 3 ತಂಡಗಳಿಂದ ಏಕಕಾಲಕ್ಕೆ ದಕ್ಷಿಣ ವಲಯ ಎಸಿಬಿ ಅಧಿಕಾರಿಗಳಿಂದ ದಾಳಿ ಆಗಿದೆ. ರಾಜಾಜಿನಗರದ ವಾಸದ ಮನೆ, ಬಸವೇಶ್ವರನಗರದ ಮನೆ, ಐಜಿಆರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ | ACB raid | 80 ಸ್ಥಳಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ದಾಳಿ, ಪರಿಶೀಲನೆಯಲ್ಲಿ ಸಿಗ್ತಿರೋದೇನು?

ಕೊಡಗು

ಕೊಡಗು ಜಿಲ್ಲಾ ಪಂಚಾಯಿತಿ ಪಂಚಾತ್ ರಾಜ್ ಉಪವಿಭಾಗದ ಸಹಾಯಕ ಅಭಿಯಂತರ ಓಬಯ್ಯನ ವೀರಾಜಪೇಟೆಯ ಮನೆ ಮೇಲೆ 33 ಅಧಿಕಾರಿಗಳ 4 ತಂಡಗಳಿಂದ ಏಕಕಾಲಕ್ಕೆ ದಾಳಿ ಮಾಡಿದೆ. ಹುಣಸೂರಿನ ವಿನೋಭನಗರದ ವಾಸದ ಮನೆ, ಮೈಸೂರಿನ ಸರಸ್ವತಿಪುರಂನ ಸಂಬಂಧಿಕರ ಮನೆ, ಹುಣಸೂರು ತಾಲೂಕಿನ 2 ಫಾರ್ಮ್ ಹೌಸ್‌, ವಿರಾಜಪೇಟೆಯ ಕಚೇರಿಯ ಮೇಲೆ ಎಸಿಬಿ ದಾಳಿ ನಡೆಸಿದೆ.

ಪೊನ್ನಂಪೇಟೆಯ ಕಚೇರಿ, ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವ ಅವರ ನಿವಾಸ, ಎರಡು ತೋಟದ ಮನೆಗಳ ಮೇಲೆ ದಾಳಿ ಮಾಡಲಾಗಿದೆ .29 ಮಂದಿಯ ಎಸಿಬಿ ತಂಡದಿಂದ ಬೆಳಗ್ಗೆ 5.45ಕ್ಕೆ ದಾಳಿ ನಡೆಸಲಾಯಿತು .ಎಸಿಬಿಯ ಮೈಸೂರು ವಿಭಾಗದ ಎಸ್.ಪಿ.ಸಜಿತ್ ನೇತೃತ್ವದಲ್ಲಿ ಡಿವೈಎಸ್ಪಿ ರಾಜೇಂದ್ರ, ಸದಾನಂದ ತಿಪ್ಪಣ್ಣನವರ, ಇನ್ ಸ್ಪೆಕ್ಟರ್ ಗಳಾದ ಹರೀಶ್, ಕುಮಾರ್, ಚಿತ್ತರಂಜನ್, ಲಕ್ಷ್ಮೀಕಾಂತ ಸೇರಿದಂತೆ ಒಟ್ಟು 29 ಮಂದಿಯ ತಂಡದಿಂದ ದಾಳಿ ನಡೆದಿರುವುದಾಗಿ ಎಸಿಬಿಯ ಕೊಡಗು ಜಿಲ್ಲಾ ಡಿವೈಎಸ್ಪಿ ರಾಜೇಂದ್ರ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ

ಡಿ.ಸಿದ್ದಪ್ಪ, ಡೆಪ್ಯೂಟಿ ಚೀಫ್ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ಮೇಲೆ 28 ಅಧಿಕಾರಿಗಳ 4 ತಂಡಗಳಿಂದ ಏಕಕಾಲಕ್ಕೆ ದಾಳಿ ಆಗಿದೆ. ಶಿವಮೊಗ್ಗದ ಎಲ್‌ಬಿಎಸ್ ನಗರದ ವಾಸದ ಮನೆ, ಹೊನ್ನಾಳಿ ತಾಲೂಕಿನ ಗೋಪಗೊಂಡನಹಳ್ಳಿ ಮನೆ, ಬೆಂಗಳೂರಿನ ಬಿಟಿಎಸ್ ಬಡಾವಣೆ ಮನೆ ಮೇಲೆ, ಬೆಂಗಳೂರಿನ ಕಚೇರಿಯ ಮೇಲೆ ಎಸಿಬಿ ದಾಳಿ ಆಗಿದೆ.

ಹಾವೇರಿ

ತುಂಗಾ ಮೇಲ್ಡಂಡೆ ಯೋಜನೆಯ ಪೂರ್ವ ವಲಯದ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಪ್ಪ ಸಿ.ಓಲೇಕಾರ್‌ ಅವರ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ರಾಣೆಬೆನ್ನೂರಿನ ಸಿದ್ಧಾರೂಢದ ವಾಸದ ಮನೆ, ಬ್ಯಾಡಗಿ ಅಣೂರಿನ ತಂದೆಯ ನಿವಾಸ, ರಾಣೆಬೆನ್ನೂರಿನಲ್ಲಿರುವ ಕಚೇರಿಯ ಮೇಲೆ ಎಸಿಬಿ ದಾಳಿ ನಡೆಸಿದೆ.

ಬೆಳಗಾವಿ

ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಭೀಮರಾವ್ ಯಶವಂತಪ್ ಪವಾರ್ ಮನೆ, ಕಚೇರಿಗಳ ಮೇಲೆ ಉತ್ತರ ವಲಯ ಎಸಿಬಿ ಅಧಿಕಾರಿಗಳಿಂದ ದಾಳಿ ಆಗಿದೆ. 48 ಅಧಿಕಾರಿ, ಸಿಬ್ಬಂದಿಯ 6 ತಂಡಗಳಿಂದ ದಾಳಿ ಆಗಿದ್ದು, ಬೆಳಗಾವಿಯ ಟಿಕಳವಾಡಿಯ ವಾಸದ ಮನೆ, ನಿಪ್ಪಾಣಿ ಶಿವಾಜಿನಗರದ ಸಂಬಂಧಿಕರ ಮನೆ, ಬೆಳಗಾವಿಯ ಪಿಡಬ್ಲ್ಯುಡಿ ವಸತಿ ಗೃಹದ ಮೇಲೆ ದಾಳಿ ಆಗಿದೆ. ಬೋರಗಾಂ ಪುತ್ರನ ಹೆಸರಿನಲ್ಲಿರುವ ಟೆಕ್ಸ್‌ಟೈಲ್ಸ್ಬೆ ಬೆಳಗಾವಿಯ ಪಿಡಬ್ಲ್ಯುಡಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಎಸಿಬಿ ರೇಡ್ ಆದರೂ ಬಿಂದಾಸ್ ಆಗಿರುವ ಬಿ.ವೈ.ಪವಾರ್, ಅರಾಮಾಗಿ ಮೊಬೈಲ್ ನಲ್ಲಿ ಮಾತುಕತೆ ನಡೆಸುತ್ತಿರುವುದು ತಿಳಿದು ಬಂದಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿ ಇರುವ ಸರ್ಕಾರಿ ನಿವಾಸಕ್ಕೆ ಎಸಿಬಿ ಟೀಮ್ ಕರೆದೊಯ್ದಿತ್ತು. ಬಳಿಕ ಸ್ವಂತ ನಿವಾಸಕ್ಕೆ ಕರೆತಂದು ಪರಿಶೀಲನೆ ನಡೆಸುತ್ತಿದ್ದಾರೆ.

ಗದಗ

ಅಸುಂಡಿ ಗ್ರಾಮ ಪಂಚಾಯಿತಿಯ ಗ್ರೇಡ್‌ 2 ಕಾರ್ಯದರ್ಶಿ ಪ್ರದೀಪ್ ಶಿವಪ್ಪ ಆಲೂರು ಮನೆ ಮೇಲೆ ಎಸಿಬಿಯ ಉತ್ತರ ವಲಯ ಅಧಿಕಾರಿಗಳಿಂದ ದಾಳಿ ಆಗಿದೆ. 23 ಅಧಿಕಾರಿಗಳ 5 ತಂಡದಿಂದ ಏಕಕಾಲಕ್ಕೆ ದಾಳಿ ನಡೆಸಿದ್ದು, ಗದಗ ಹುಲಕೋಟಿಯಲ್ಲಿರುವ ವಾಸದ ಮನೆ, ಗದಗ ಜಿಲ್ಲೆಯ ಬೆಂತೂರಿನ ಸಂಬಂಧಿಕರ ಮನೆ, ಧಾರವಾಡದ ಸಂಬಂಧಿಕರ ವಾಸದ ಮನೆ, ಅಸುಂಡಿ ಗ್ರಾ.ಪಂ.ಕಚೇರಿಯ ಮೇಲೆ ಎಸಿಬಿ ದಾಳಿ ಮಾಡಿದೆ.

ಬಾಗಲಕೋಟೆ

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ನಾಗಪ್ಪ ಯೋಗಿ ಅವರ ಮೇಲ ಉತ್ತರ ವಲಯದ ಎಸಿಬಿ ಅಧಿಕಾರಿಗಳಿಂದ ದಾಳಿ ಆಗಿದೆ. 33 ಅಧಿಕಾರಿಗಳ 5 ತಂಡದಿಂದ ಏಕಕಾಲಕ್ಕೆ ದಾಳಿ ನಡೆಸಿದ್ದು, ಬಾಗಲಕೋಟೆಯ ನವನಗರದ ವಾಸದ ಮನೆ, ಬಾಗಲಕೋಟೆಯ ನವನಗರದ ಸ್ನೇಹಿತರ ಮನೆ, ವಿದ್ಯಾಗಿರಿಯ ಮನಗೂಳಿ ಬಡಾವಣೆಯ ಸ್ನೇಹಿತ ಮನೆ, ಹುಬ್ಬಳ್ಳಿಯ ಕೇಶವಾಪುರದಲ್ಲಿರುವ ಆಪ್ತರ ಮನೆ, ಬಾಗಲಕೋಟೆಯ ಕಚೇರಿಯ ಮೇಲೆ ಎಸಿಬಿ ದಾಳಿ ನಡೆಸಿದೆ.

ಬಾಗಲಕೋಟೆ ನಿರ್ಮಿತಿ ಕೇಂದ್ರದ ಎಂಜಿನಿಯರ್ ಮಲ್ಲೇರಾವ್ ದೇಸಾಯಿ ಮನೆ ಮೇಲೂ ದಾಳಿ ಆಗಿದ್ದೂ, ಬಂಗಾರದ ಬಳೆ, ಬೆಳ್ಳಿ ಒಡವೆಗಳು, ನಗದು ಒಂದುವರೆ ಲಕ್ಷ ಹಣ ಪತ್ತೆಯಾಗಿವೆ. ಬಾಗಲಕೋಟೆಯ ಅಕ್ಕಿಮರಡಿ ಲೇಔಟ್ ನಲ್ಲಿರುವ ಮನೆಯಲ್ಲಿ ಎಸಿಬಿ ಅಧಿಕಾರಿಗಳ ತಂಡ ಪರಿಶೀಲನೆ ಮುಂದುವರೆಸಿದೆ.

ಧಾರವಾಡ

ಉತ್ತರ ವಲಯ ಎಸಿಬಿ ಅಧಿಕಾರಿಗಳಿಂದ ಆರ್‌ಟಿಒ ಅಧಿಕಾರಿ ಯಲ್ಲಪ್ಪ ಪಡಸಾಲಿ ಮನೆ ಮೇಲೆ 49 ಅಧಿಕಾರಿಗಳ 6 ತಂಡಗಳಿಂದ ಏಕಕಾಲಕ್ಕೆ ದಾಳಿ ಆಗಿದೆ. ಬಾಗಲಕೋಟೆಯ ನವನಗರದಲ್ಲಿರುವ ವಾಸದ ಮನೆ, ಕೊಪ್ಪಳದ ಭಾಗ್ಯನಗರದಲ್ಲಿರುವ ಮಗನ ಮನೆ, ಕೊಪ್ಪಳ ನಗರದ ಭಾಗ್ಯನಗರದ ಸಂಬಂಧಿಕರ ಮನೆ, ಕೊಪ್ಪಳದ ಭಾಗ್ಯನಗರದ ಸ್ನೇಹಿತನ ಮನೆ, ಬಾಗಲಕೋಟೆಯ ಆರ್‌ಟಿಒ ಕಚೇರಿಯಲ್ಲಿ ದಾಳಿ ಆಗಿದೆ.

ಕಾರವಾರ

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೀವ್ ಪಿ. ನಾಯಕ್ ಮೇಲೆ ಪಶ್ಚಿಮ ವಲಯ ಎಸಿಬಿ ಅಧಿಕಾರಿಗಳಿಂದ ದಾಳಿ ಆಗಿದೆ. 12 ಅಧಿಕಾರಿಗಳ 2 ತಂಡಗಳಿಂದ ಏಕಕಾಲಕ್ಕೆ ದಾಳಿ ಆಗಿದ್ದು, ಕಾರವಾರದ ಎಂ.ಜಿ.ರಸ್ತೆಯ ಬೃಂದಾವನ ಅಪಾರ್ಟ್‌ಮೆಂಟ್‌ ಹೆಬ್ಬವಾಡದಲ್ಲಿರುವ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ಸಹಾಯಕ ಇಂಜಿನಿಯರ್ ಹರೀಶ್‌ ಮನೆಯಲ್ಲಿ ದೊರೆತ ನಗದು

ಚಿಕ್ಕಮಗಳೂರು

ಅಜ್ಜಂಪುರ ಪಟ್ಟಣ ಪಂಚಾಯಿತಿಯ ದ್ವಿತೀಯ ದರ್ಜೆ ಸಹಾಯಕ ಬಿ.ಜಿ.ತಿಮ್ಮಯ್ಯ ಮನೆ ಮೇಲೆ ಪಶ್ಚಿಮವಲಯ ಎಸಿಬಿ ಅಧಿಕಾರಿಗಳಿಂದ ದಾಳಿ ಆಗಿದೆ. 29 ಅಧಿಕಾರಿಗಳ 3 ತಂಡಗಳಿಂದ ದಾಳಿ ಕಡೂರು ನಗರದಲ್ಲಿರುವ ವಾಸದ ಮನೆ, ಕಡೂರಿನ ಬಾಸೂರಿನಲ್ಲಿರುವ ತಂದೆ ನಿವಾಸ, ಅಜ್ಜಂಪುರ ಕಚೇರಿಯ ಮೇಲೆ ಎಸಿಬಿ ದಾಳಿ ಆಗಿದೆ.

ಕೊಪ್ಪಳ :

ಪಿಐ ಉದಯರವಿ ಸ್ನೇಹಿತ ಹರಿಕಾಂತ ಮೋತಾ ಎಂಬುವವರ ಗಂಗಾವತಿ ಬಂಬೂ ಬಜಾರ ಬಳಿ ಇರು ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆದಿದ್ದು, 8 ಲಕ್ಷ ರುಪಾಯಿ ನಗದು, 600 ಗ್ರಾಂ ಚಿನ್ನ, ಹಾಗೂ ಇನ್ನಿತರ ಪ್ರಮುಖ ದಾಖಲೆಗಳು ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ | ಬೆಂಗಳೂರು, ಹಾಸನ, ಕೊಪ್ಪಳ ಸೇರಿ 80 ಸ್ಥಳಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಮುಂದುವರಿದ ಎಸಿಬಿ ಬೇಟೆ

Exit mobile version