ಮಂಗಳೂರು: ಕಾರೊಳಗಿದ್ದ ಚಿಕ್ಕಪ್ಪನನ್ನು ಕಂಡ ಕೂಡಲೇ ಹಿಂಬಾಲಿಸಲು ಹೋದ ಮಗುವೊಂದು ಕಾರಿನ ಚಕ್ರದಡಿ ಸಿಲುಕಿ (Accident Case) ಮೃತಪಟ್ಟಿದೆ. ಈ ದುರ್ಘಟನೆ ಮಂಗಳೂರು ಗಡಿಭಾಗದ ಕಾಸರಗೋಡಿನ ಉಪ್ಪಳದ ಸೋಂಕಾಲ್ ಬಳಿ (Accident Case) ನಡೆದಿದೆ.
ಸೋಂಕಾಲ್ ನಿವಾಸಿ ನಿಝಾರ್ ತಸ್ರೀಫಾ ಎಂಬುವವರ ಒಂದೂವರೆ ವರ್ಷದ ಪುತ್ರ ಮಸ್ತುಲ್ ಜಿಶಾನ್ ದುರ್ಮರಣ ಹೊಂದಿದ್ದಾನೆ. ಮನೆಯ ಪಾರ್ಕಿಂಗ್ ಜಾಗದಲ್ಲಿ ಜಿಶಾನ್ ತನ್ನ ಅಣ್ಣನೊಂದಿಗೆ ಆಟವಾಡುತ್ತಿದ್ದ. ಇದೇ ವೇಳೆ ಜಿಶಾನ್‌ನ ಚಿಕ್ಕಪ್ಪ ಹೊರಗಿದ್ದ ಕಾರನ್ನು ಮನೆಯೊಳಗೆ ತಂದು ಪಾರ್ಕಿಂಗ್ ಮಾಡಲು ಮುಂದಾಗಿದ್ದರು.
ಚಿಕ್ಕಪ್ಪ ಕಾರಲ್ಲಿ ಬರುವುದನ್ನು ಕಂಡ ಕೂಡಲೇ ಓಡೋಡಿ ಬಂದ ಜಿಶಾನ್ ಕಾರಿನ ಮುಂದೆ ಬಂದು ನಿಂತಿದ್ದ. ಆದರೆ ಇದ್ಯಾವುದರ ಅರಿವು ಇರದ ಅವರು ಕಾರನ್ನು ಹಿಂದೆ ತೆಗೆದು ಮುಂದೆ ಬಂದಿದ್ದಾರೆ. ಈ ವೇಳೆ ಕಾರಿನ ಮುಂಭಾಗದ ಚಕ್ರ ಮಗುವಿನ ಮೈಮೇಲೆ ಹರಿದಿದೆ. ಈ ದೃಶ್ಯವೆಲ್ಲ ಮನೆಗೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೂಡಲೇ ಮಗುವಿನ ಚಿಕ್ಕಪ್ಪ ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮಗು ಮೃತಪಟ್ಟಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Physical Abuse : ಸ್ಕೂಟರ್ ಅಡ್ಡಗಟ್ಟಿ ಯುವತಿ ಬಟ್ಟೆ ಹಿಡಿದು ಎಳೆದಾಡಿದ ಕಾಮುಕ!
ಅಪಘಾತ ತಪ್ಪಿಸಲು ಹೋಗಿ ಬೈಕ್‌ಗೆ ಡಿಕ್ಕಿ ಹೊಡೆದ ಕ್ರೂಸರ್; ಮೂವರು ದಾರುಣ ಸಾವು
ಧಾರವಾಡ: ಅವರೆಲ್ಲೂ ಕೂಲಿ ಕಾರ್ಮಿಕರು. ಕೆಲಸ ಮುಗಿಸಿ ಮನೆಗೆ ಮರುಳುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮನೆಗೆ ಹೋಗಬೇಕಾದವರು ದಾರಿ ಮಧ್ಯೆಯೇ ಜೀವ ಬಿಟ್ಟಿದ್ದಾರೆ. ಬೈಕ್ ಹಾಗೂ ಕ್ರೂಸರ್ ವಾಹನದ ನಡುವೆ ಅಪಘಾತ (road Accident) ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಧಾರವಾಡ ತಾಲೂಕಿನ ಶಿವಳ್ಳಿ ಬಳಿ ಭಾನುವಾರ ರಾತ್ರಿ ಈ ಅಪಘಾತ ನಡೆದಿದೆ.
ಕ್ರೂಸರ್‌ನಲ್ಲಿದ್ದ ಬಸವರಾಜ್ ಕುರಹಟ್ಟಿ (45), ಯಲ್ಲಪ್ಪ ಗಂಟಿ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಅರುಣ್ ಎಂಬಾತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಬೈಕ್ ಸವಾರನ ಜೀವ ಉಳಿಸಲು ಹೋಗಿ ಅಪಘಾತ ನಡೆದಿದೆ ಎನ್ನಲಾಗಿದೆ. ಕ್ರೂಸರ್ ವಾಹನವು ಮೊದಲಿಗೆ ಬೈಕ್‌ಗೆ ಡಿಕ್ಕಿ ಹೊಡೆದಿದ್ದು ಬಳಿಕ ಮರಕ್ಕೆ ಗುದ್ದಿದೆ. ಈ ವೇಳೆ ಕ್ರೂಸರ್‌ನಲ್ಲಿದ್ದ ಕೂಲಿ ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ. ನವಲಗುಂದ ತಾಲೂಕಿನ ಜಾವೂರು, ಹೆಬ್ಬಾಳ ಗ್ರಾಮದ ಕೂಲಿ ಕಾರ್ಮಿಕರು ಧಾರವಾಡಕ್ಕೆ ಬಂದಿದ್ದರು. ಕೆಲಸ ಮುಗಿಸಿ ಮರಳಿ ಊರಿಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ.
ಸದ್ಯ ಗಾಯಾಳುಗಳನ್ನು ಧಾರವಾಡದ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿವಿಲ್ ಆಸ್ಪತ್ರೆಗೆ ಶಾಸಕ ಎನ್ ಎಚ್ ಕೋನರೆಡ್ಡಿ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ: Road Accident : ಗೂಡ್ಸ್ ವಾಹನ ಪಲ್ಟಿಯಾಗಿ ಒಬ್ಬ ಸಾವು, 10 ಮಂದಿಗೆ ತೀವ್ರ ಗಾಯ
ಬಸ್ಸಿನ ಸ್ಟೇರಿಂಗ್ ಕಟ್; ಬೈಕ್‌ನಲ್ಲಿದ್ದ ತಂದೆ-ಮಗ ಮೃತ್ಯು
ರಾಮನಗರ/ತುಮಕೂರು: ಕೆಎಸ್‌ಆರ್‌ಟಿಸಿ ಬಸ್ಸಿನ ಸ್ಟೇರಿಂಗ್ ಕಟ್ ಆಗಿದ್ದು, ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ತಂದೆ- ಮಗ ಸ್ಥಳದಲ್ಲೇ (Road Accident) ಮೃತಪಟ್ಟಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕೋಟಮಾರನಹಳ್ಳಿ ಗ್ರಾಮದ ತಂದೆ ಸಿದ್ದಯ್ಯ (65), ಮಗ ಅರುಣ್ (28) ಮೃತ ದುರ್ದೈವಿಗಳು.
ತಿಟ್ಟಮಾರನಹಳ್ಳಿಯ ರಾಮಮ್ಮನ ಕೆರೆ ಏರಿ ಮೇಲೆ ಬರುವಾಗ ಈ ಅಪಘಾತ ಸಂಭವಿಸಿದೆ. ತಡೆಗೋಡೆ ಇದ್ದ ಪರಿಣಾಮ 30 ಜನ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ