ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಚಂದ್ರಾಣಿ ಗ್ರಾಮದ ಬಳಿ ಭಾನುವಾರ (ಡಿ.೪) ಲಗೇಜ್ ವಾಹನಕ್ಕೆ ಏಕಾಏಕಿ ಬಂದ ಶಾಲಾ ಬಸ್ ಡಿಕ್ಕಿ (Accident Case) ಹೊಡೆದಿದೆ. ಇದರಿಂದ ನಿಯಂತ್ರಣ ತಪ್ಪಿದ ಲಗೇಜ್ ವಾಹನ ಪಲ್ಟಿಯಾಗಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಿಜಯಪುರ ಮೂಲದ ಶಾಲಾ ಬಸ್ ಎಂದು ಹೇಳಲಾಗಿದ್ದು, ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಬರಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಚಂದ್ರಾಣಿ ಗ್ರಾಮದ ಬಳಿ ರಸ್ತೆಗೆ ಶಾಲಾ ಬಸ್ ಏಕಾಏಕಿ ಬಂದಿದೆ. ಈ ವೇಳೆ ಅರೇಅಂಗಡಿ ಮಾರ್ಗದಿಂದ ಹೊನ್ನಾವರ ಕಡೆ ತೆರಳುತ್ತಿದ್ದ ಲಗೇಜ್ ವಾಹನವು ಏಕಾಏಕಿ ಎದುರಾಗಿದ್ದು ಅದಕ್ಕೆ ಶಾಲಾ ವಾಹನ ಡಿಕ್ಕಿ ಹೊಡೆದಿದೆ. ಹೀಗಾಗಿ ಗೂಡ್ಸ್ ವಾಹನ ಪಲ್ಟಿಯಾಗಿದೆ. ಶಾಲಾ ಬಸ್ ಮುಂಭಾಗದ ಬಂಪರ್ ಸ್ವಲ್ಪ ನಜ್ಜುಗುಜ್ಜಾಗಿದೆ.
ಶಾಲಾ ಮಕ್ಕಳು ಸೇಫ್
ಶಾಲಾ ಬಸ್ ಗುದ್ದಿ ಹಾಗೇ ನಿಂತಿದ್ದರಿಂದ ಬಸ್ ಒಳಗಿದ್ದ ಮಕ್ಕಳಿಗೆ ಸಣ್ಣ ಪುಟ್ಟ ಒಳೇಟು ಆಗಿದ್ದು ಬಿಟ್ಟರೆ ಅದೃಷ್ಟವಶಾತ್ ಯಾವುದೇ ಗಾಯಗಳು, ಅಪಾಯಗಳು ಆಗಿಲ್ಲ. ರಸ್ತೆ ಮಧ್ಯೆ ವಾಹನ ಪಲ್ಟಿಯಾದ ಪರಿಣಾಮ ಅರೇಅಂಗಡಿ ಹೊನ್ನಾವರ ಮಾರ್ಗದ ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಸ್ಥಳಕ್ಕೆ ಹೊನ್ನಾವರದ 112 ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯರ ಸಹಕಾರದಿಂದ ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಇದನ್ನೂ ಓದಿ | Kiccha Sudeep | ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಟ ಕಿಚ್ಚ ಸುದೀಪ್ ದಂಪತಿ ಭೇಟಿ