ಕಾರವಾರ: ಟೆಂಪೋ ಹಾಗೂ ಬೈಕ್ ನಡುವೆ ಅಪಘಾತ (Accident Case) ಸಂಭವಿಸಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬೈಕ್ ಸವಾರ ಮೃತಪಟ್ಟ ಘಟನೆ ಕಾರವಾರದಲ್ಲಿ ನಡೆದಿದೆ. ಕುಮಟಾ ಮೂಲದ ಫೋಟೊಗ್ರಾಫರ್ ಮಹಾಬಲೇಶ್ವರ ಅಂಬಿಗ ಮೃತ ದುರ್ದೈವಿಯಾಗಿದ್ದಾರೆ. ಆಂಬ್ಯುಲೆನ್ಸ್ ಬರುವುದು ವಿಳಂಬವಾಗಿರುವುದೂ ಸಹ ಸಾವಿಗೆ ಕಾರಣ ಎನ್ನಲಾಗಿದೆ.
ಕಾರವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಅಮದಳ್ಳಿ ಗ್ರಾಮದ ಬಳಿ ಬೈಕ್‌ನಲ್ಲಿ ಸಾಗುತ್ತಿದ್ದ ಮಹಾಬಲೇಶ್ವರ ಅವರು ತಿರುವಿನಲ್ಲಿ ಏಕಾಏಕಿ ಬೈಕ್ ತಿರುಗಿಸಿದ್ದಾರೆ. ಈ ಸಂದರ್ಭದಲ್ಲಿ ಬೈಕ್‌ನ ಹಿಂದೆ ಬರುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣಕ್ಕೆ ಸಿಗದೇ ಬೈಕ್‌ಗೆ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ.
ಟೆಂಪೋ ಡಿಕ್ಕಿಯಾದ ರಭಸಕ್ಕೆ ಬೈಕ್‌ನಲ್ಲಿದ್ದ ಮಹಾಬಲೇಶ್ವರ ಅವರು ಬೈಕ್ ಸಮೇತ ಹಾರಿ ಎದುರು ಚಲಿಸುತ್ತಿದ್ದ ಕಾರಿಗೆ ಬಡಿದು ರಸ್ತೆಗೆ ಬಿದ್ದಿದ್ದಾರೆ. ಅಪಘಾತದಲ್ಲಿ ಮಹಾಬಲೇಶ್ವರ ಗಂಭೀರ ಗಾಯಗೊಂಡಿದ್ದರು. ಇದೇ ಮಾರ್ಗದಲ್ಲಿ ಸಾಗುತ್ತಿದ್ದ ಶಾಸಕಿ ರೂಪಾಲಿ ನಾಯ್ಕ ಅವರು ಸಹಾಯಕ್ಕೆ ಧಾವಿಸಿದ್ದು, ಆಂಬ್ಯುಲೆನ್ಸ್‌ಗಾಗಿ ಕರೆ ಮಾಡಿದ್ದಾರೆ. ಆದರೆ, ಆಂಬ್ಯುಲೆನ್ಸ್ ಸ್ಥಳಕ್ಕೆ ಬರುವುದು ವಿಳಂಬವಾದ ಕಾರಣ ಶಾಸಕಿ ಐಆರ್‌ಬಿ ವಾಹನವನ್ನು ಸ್ಥಳಕ್ಕೆ ಕರೆಸಿದ್ದಾರೆ.
ಐಆರ್‌ಬಿ ವಾಹನದಲ್ಲಿ ಕ್ರಿಮ್ಸ್‌ಗೆ ಸಾಗಿಸುವ ಮಾರ್ಗ ಮಧ್ಯೆ ಆಂಬ್ಯುಲೆನ್ಸ್ ಸಿಕ್ಕಿದ್ದು, ಬಳಿಕ ಅದಕ್ಕೆ ಸ್ಥಳಾಂತರಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅಷ್ಟರಲ್ಲಾಗಲೇ ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಾಬಲೇಶ್ವರ ಅಸುನೀಗಿದ್ದಾರೆ. ಈ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Video Viral | ಬಿಜೆಪಿ ಮುಖಂಡನ ಪುತ್ರನಿಂದ ರೆಸ್ಟೋರೆಂಟ್‌ನಲ್ಲಿ ದಾಂಧಲೆ; 10 ದಿನವಾದ್ರೂ ಆಗಿಲ್ಲ ಅರೆಸ್ಟ್