Site icon Vistara News

Accident Free Drivers: ಕೇಂದ್ರದ ʻಹೀರೋಸ್‌ ಆನ್‌ ದಿ ರೋಡ್‌ʼ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿರುವ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಚಾಲಕರು

#image_title

ಬೆಂಗಳೂರು/ಮೈಸೂರು: ನವದೆಹಲಿಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಂಘವು (Association of State Road Transport Undertakings) ಅಪಘಾತ ರಹಿತ ಚಾಲಕರನ್ನು (Accident Free drivers) ಗೌರವಿಸಿ, ಪ್ರೋತ್ಸಾಹಿಸುವ ಸಲುವಾಗಿ ಹೀರೋಸ್‌ ಆನ್‌ ದ ರೋಡ್‌ (Heroes on the road award) ಎಂಬ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ಬಾರಿ ಕೆಎಸ್‌ಆರ್‌ಟಿಸಿ ಚಾಲಕ ಎಜಾಜ್ ಅಹಮದ್ ಷರೀಫ್, ಇಶಾಕ್ ಶರೀಫ್ ಹಾಗೂ ಬಿಎಂಟಿಸಿಯಿಂದ ಚಾಲಕ ಲಕ್ಷ್ಮಣ ರೆಡ್ಡಿ ಎಂಬುವವರು ಆಯ್ಕೆ ಆಗಿದ್ದಾರೆ.

ಚಾಲಕ ಎಜಾಜ್‌ ಅಹಮದ್‌ ಷರೀಪ್‌ ಹಾಗೂ ಇಶಾಕ್ ಶರೀಫ್ ಕೆಎಸ್‌ಆರ್‌ಟಿಸಿ ನಿಗಮದಲ್ಲಿ 33 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತ ಬಿಎಂಟಿಸಿಯ ಚಾಲಕ ಲಕ್ಷ್ಮಣ ರೆಡ್ಡಿ ಎಂಬುವವರು 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂವರು ತಮ್ಮ ಸೇವಾ ಅವಧಿಯಲ್ಲಿ ಅಪಘಾತ ರಹಿತ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಮೂವರಿಗೆ ಹೀರೋಸ್‌ ಆನ್‌ ದಿನ ರೋಡ್‌ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಚಾಲಕ ಎಜಾಜ್‌ ಅಹಮದ್‌ ಷರೀಪ್‌ ಮೈಸೂರಿನ ಹುಣಸೂರು ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈಗಾಗಲೇ ಅಪಘಾತ ರಹಿತ ಚಾಲನೆಗೆ ನಿಗಮದಿಂದಲೇ ಬೆಳ್ಳಿ ಹಾಗೂ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಚಾಲಕ ಇಶಾಕ್ ಶರೀಫ್ ಮೈಸೂರಿನ ಸಾತಗಳ್ಳಿ ಡಿಪೋದಲ್ಲಿ 33 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು, ನಿಗಮದಿಂದ ಅಪಘಾತ ರಹಿತ ಸೇವೆಗೆ ಬೆಳ್ಳಿ ಹಾಗೂ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಬಿಎಂಟಿಸಿ ಚಾಲಕ ಲಕ್ಷ್ಮಣ ರೆಡ್ಡಿ ಅವರು ಬೆಂಗಳೂರು ಪೂರ್ವದ ಘಟಕ 41ರಲ್ಲಿ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ನಿಗಮದಿಂದ ಅಪಘಾತ ರಹಿತ ಚಾಲನೆಗಾಗಿ ಬೆಳ್ಳಿ ಮತ್ತು ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

ಇದೀಗ ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ನೀಡುತ್ತಿರುವ ಹೀರೋಸ್‌ ಆನ್‌ ದ ರೋಡ್‌ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಏ.18 ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ಮಂಗಳವಾರ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Karnataka Elections : ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿ ವರುಣ ಕಣಕ್ಕಿಳಿದ ವಿ. ಸೋಮಣ್ಣ, ವಿಕ್ಟರಿ ಸೋಮಣ್ಣ ಎಂದ ಬೊಮ್ಮಾಯಿ

ಅಪಘಾತ ರಹಿತವಾಗಿ ನಗರ ಹಾಗೂ ಗ್ರಾಮೀಣ, ಅಂತರ್ ನಗರ ಸೇವೆಗಳು/ಗ್ರಾಮಾಂತರ ಸಮೂಹ ಸಾರಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರನ್ನು ಗುರುತಿಸಿ ರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಲಾಗುತ್ತದೆ. ಈ ಮೂಲಕ ಚಾಲಕರನ್ನು ಮತ್ತಷ್ಟು ಪ್ರೋತ್ಸಾಹಿಸುವ ಕೆಲಸ ಮಾಡುವಂತಾಗುತ್ತದೆ. ಮಾತ್ರವಲ್ಲದೆ ಅಪಘಾತದ ಪ್ರಮಾಣ ಕಡಿಮೆ ಮಾಡುವ ದೃಷ್ಟಿಯಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

Exit mobile version