ಬೆಂಗಳೂರು: ಕೆಎಸ್‌ಆರ್‌ಟಿಸಿಯಿಂದ ಸಿಬ್ಬಂದಿಗೆ ಗುಡ್ ನ್ಯೂಸ್‌ವೊಂದು ದೊರೆತಿದೆ. 50 ಲಕ್ಷ ರೂಪಾಯಿಯ ಅಪಘಾತ ವಿಮಾ ಯೋಜನೆಗೆ ಸೌಲಭ್ಯ ಜಾರಿ ಮಾಡಲಾಗುತ್ತಿದ್ದು, ಈ ಪ್ಯಾಕೇಜ್ ಯೋಜನೆಯ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
ನಿಗಮದ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಡಾ. ಎಂ. ಚಂದ್ರಪ್ಪ ಮತ್ತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ಪಂಕಜ್ ತಪ್ಲಿಯಾಲ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು.
ಅಪಘಾತ ವಿಮಾ ಯೋಜನೆ ವಿವರ
– ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಮ್ಮ ವೇತನ ಖಾತೆ ಹೊಂದಿರುವ ನಿಗಮದ ನೌಕರರಿಗೆ ಪ್ರೀಮಿಯಂ ರಹಿತ ವೈಯುಕ್ತಿಕ ಅಪಘಾತ ವಿಮೆಯನ್ನು ಒಳಗೊಂಡಿದೆ.
– ಈ ವೈಯುಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಫಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ 50 ಲಕ್ಷ ರೂಪಾಯಿಗಳ ಪರಿಹಾರದ ಹಣ ಕೂಡಲೇ ದೊರೆಯಲಿದೆ.
– ಅಫಘಾತದಲ್ಲಿ ಸಿಬ್ಬಂದಿ ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದಲ್ಲಿ 20 ಲಕ್ಷ ರೂಪಾಯಿ ಹಾಗೂ ಭಾಗಶಃ ಅಂಗವೈಕಲ್ಯ ಉಂಟಾದಲ್ಲಿ 10 ಲಕ್ಷ ರೂಪಾಯಿ ವಿಮಾ ಪರಿಹಾರ ದೊರೆಯಲಿದೆ.
– ಕರ್ತವ್ಯ ನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲೂ ಆಗುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ.
– ಅಪಘಾತವಾಗಿ ಸಿಬ್ಬಂದಿ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗಾಗಿ ಒಳಗಾದರೆ ಗರಿಷ್ಠ 10 ಲಕ್ಷ ರೂ., ಔಷಧಗಳಿಗಾಗಿ ಗರಿಷ್ಠ 5 ಲಕ್ಷ ರೂ., ಕೋಮಾದಲ್ಲಿ ಮೃತಪಟ್ಟರೆ ಹೆಚ್ಚುವರಿ ರೂ. 2 ಲಕ್ಷ ರೂ. (ರೂ.50 ಲಕ್ಷ + ರೂ.2 ಲಕ್ಷ), ಏರ್ ಆಂಬ್ಯುಲೆನ್ಸ್ ಸೇವೆಗೆ 10 ಲಕ್ಷ ವಿಮಾ ಪರಿಹಾರ ನೀಡಲಾಗುವುದು.
– ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೆ ಮಕ್ಕಳ ಪದವಿ ಶಿಕ್ಷಣಕ್ಕೆ ಗರಿಷ್ಠ 5 ಲಕ್ಷ ರೂ. ಹಾಗೂ ಹೆಣ್ಣು ಮಗಳ ವಿವಾಹಕ್ಕೆ ಗರಿಷ್ಠ 5 ಲಕ್ಷ ರೂ.ಗಳವರೆಗೆ ಆರ್ಥಿಕ ಸಹಾಯವನ್ನು ಈ ವಿಮಾ ಯೋಜನೆಯು ಒಳಗೊಂಡಿರುತ್ತದೆ.
ಇದನ್ನೂ ಓದಿ | Deepavali Special Bus | ಬೆಳಕಿನ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ 1500 ಹೆಚ್ಚುವರಿ ವಿಶೇಷ ಬಸ್