ದಾವಣಗೆರೆ: ಇಲ್ಲಿನ ಆನಗೋಡ ರಾಷ್ಟ್ರೀಯ ಹೆದ್ದಾರಿ 48ರ ಸಮೀಪ ನಡೆದ ಅಪಘಾತಕ್ಕೆ ಹೊಸ ತಿರುವು (Accident Mystery) ಸಿಕ್ಕಿದೆ. ಯುವಕರು ಹೆದ್ದಾರಿಯಲ್ಲಿ ದರೋಡೆಗೆ ಯತ್ನ ಮಾಡಲು ಬಂದಿದ್ದಕ್ಕೆ ಚಾಲಕ ಲಾರಿ ಹರಿಸಿ ಹತ್ಯೆ ಮಾಡಿದ್ದಾನೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಶನಿವಾರ ತಡರಾತ್ರಿ ಅಪರಿಚಿತ ವಾಹನವೊಂದು ಬೈಕ್ಗೆ (Road Accident) ಡಿಕ್ಕಿ ಹೊಡೆದ ಘಟನೆಯಲ್ಲಿ ಪರಶುರಾಮ್ (24), ಸಂದೇಶ (23), ಶಿವು (26) ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ದಾವಣಗೆರೆ ತಾಲೂಕಿನ ಕಾಟಿಹಳ್ಳಿ ಗ್ರಾಮದ ದೇವಿ ಜಾತ್ರೆ ಮುಗಿಸಿಕೊಂಡು ಬಾಡೂಟ ತಿಂದು ವಾಪಸಾಗುವ ವೇಳೆ ಅಪಘಾತ ನಡೆದಿತ್ತು ಎನ್ನಲಾಗಿತ್ತು.
ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಇದು ಅಪಘಾತ ಅಲ್ಲ ಎಂದು ತಿಳಿದು ಬಂದಿದೆ. ಉದ್ದೇಶ ಪೂರ್ವಕವಾಗಿ ಲಾರಿ ಹರಿಸಿ ಯುವಕರನ್ನು ಕೊಲೆ ಮಾಡಿರುವ ಅನುಮಾನ ದಟ್ಟವಾಗಿದೆ.
ಘಟನಾ ಸ್ಥಳದಲ್ಲಿ ಕಬ್ಬಿಣದ ರಾಡ್ ಪತ್ತೆ ಆಗಿದ್ದು, ಅಪಘಾತ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಲಾರಿ ನಿಂತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಆ ಬಳಿಕ ಲಾರಿ ಮುಂದಿನ ಯಾವುದೇ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿಲ್ಲ. ಮತ್ತೊಂದು ಕಡೆ ಯುವಕರ ಬೈಕ್ ಸ್ವಲ್ಪವೂ ಡ್ಯಾಮೇಜ್ ಆಗದೆ ಅಲ್ಲೊಂದು, ಇಲ್ಲೊಂದು ಎಂಬಂತೆ ದೂರದಲ್ಲಿ ಯುವಕರ ಮೃತದೇಹಗಳು ಬಿದ್ದಿವೆ. ಹೀಗಾಗಿ ಇದು ಅಪಘಾತವಲ್ಲ, ಕೊಲೆ ಎಂದು ಪೊಲೀಸರು ಅನುಮಾನಿಸಿದ್ದಾರೆ.
ಇದನ್ನೂ ಓದಿ: Suicide Case: ದಾಂಪತ್ಯ ಕಲಹದಿಂದ ಕೆರೆಗೆ ಹಾರಲು ಹೋದವಳನ್ನು ತಳ್ಳಿ ತಾನೂ ಬಿದ್ದ; ಪತ್ನಿ ಪಾರು, ಪತಿ ಸಾವು
ಎರಡು ಬೈಕ್ಗಳಲ್ಲಿ ಆರು ಯುವಕರು ಕಾಟೀಹಳ್ಳಿಗೆ ಮಟನ್ ಊಟಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ. ಆರರಲ್ಲಿ ಮೂರು ಯುವಕರು ಮೃತಪಟ್ಟಿದ್ದು, ಇಬ್ಬರು ನಾಪತ್ತೆ ಆಗಿದ್ದಾರೆ, ಮತ್ತೊಬ್ಬನನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಅಪಘಾತಕ್ಕೂ ಮುನ್ನ ಲಾರಿ ಚಾಲಕ ಹಾಗೂ ಯುವಕರ ನಡುವೆ ಮಾರಾಮಾರಿ ನಡೆದಿರಬಹುದೆಂದು ಶಂಕಿಸಲಾಗಿದೆ. ಸದ್ಯ ಇದು ಕೊಲೆಯೊ ಅಥವಾ ದರೋಡೆ ಯತ್ನವೋ ಎಂಬ ಎರಡು ಆಯಾಮದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.