ಕಾರವಾರ: ಕೊಚ್ಚಿ-ಗೋವಾ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಗೋವಾದ ಕಾಣಕೋಣ ಬಳಿ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ (accident news) ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಕಾಣಕೋಣದ ತಾರಿ ಬಳಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ.
ಮೃತರನ್ನು ಹರೀಶ್ ಉಲ್ಲಾಸ ನಾಗೇಕರ್(35), ಉಲ್ಲಾಸ ರಾಮ ನಾಗೇಕರ್(60) ವೀಣಾ ಉಲ್ಲಾಸ ನಾಗೇಕರ್(60) ಎಂದು ಗುರುತಿಸಲಾಗಿದೆ. ಇವರು ಗೋವಾದ ವಾಸ್ಕೋದಲ್ಲಿ ವಾಸವಾಗಿದ್ದಾರೆ. ಆದರೆ, ಇವರು ಮೂಲತಃ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ಮೂಲದವರು. ಈಗ ಅಲ್ಲಿ ವಾಸವಾಗಿದ್ದಾರೆ.
ಎರಡು ಕಾರುಗಳಲ್ಲಿದ್ದ ಏಳು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಕಾಣಕೋಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತ ನಡೆದಿದ್ದು ಹೇಗೆ?
ಗೋವಾದ ಕಾಣಕೋಣದ ಮನೋಹರ ಪರಿಕ್ಕರ್ ಬೈಪಾಸ್ ಬಳಿ ಈ ಘಟನೆ ನಡೆದಿದೆ. ಮಡಗಾಂವ್‌ನಿಂದ ಕಾರವಾರದತ್ತ ಬರುತ್ತಿದ್ದ ಕಾರು ಅತ್ಯಂತ ವೇಗವಾಗಿ ಧಾವಿಸಿ ಒಂದು ಹಂತದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿ ಹೊಡೆದು ಮತ್ತೊಂದು ಭಾಗಕ್ಕೆ ಹಾರಿದೆ. ಇದೇ ಸಂದರ್ಭದಲ್ಲಿ ಕಾಣಕೋಣದ ಸಾತೇರಿ ದೇವಸ್ಥಾನಕ್ಕೆ ಬಂದು ಮಡಗಾಂವ್ ವಾಪಸಾಗುತ್ತಿದ್ದ ಕಾರಿಗೆ ಬಂದು ಹೊಡೆದಿದೆ. ಇದೇ ವೇಳೆ ಒಂದು ಸ್ಕೂಟರ್ ಕೂಡಾ ಜಖಂಗೊಂಡಿದೆ.
ಮೃತರಲ್ಲಿ ಒಬ್ಬ ಮಹಿಳೆ ಸೇರಿದ್ದಾರೆ. ಇನ್ನೂ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.