ಮಂಡ್ಯ/ಮಂಗಳೂರು: ಮಂಡ್ಯ ರೈಲ್ವೆ ನಿಲ್ದಾಣದ (Mandya Railway Station) ಬಳಿ ನಡೆದ ಭೀಕರ ಅಪಘಾತದಲ್ಲಿ (Accident) ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಹಳಿ ದಾಟಲು ಹೋದ ವೃದ್ಧೆ (65) ವಂದೇ ಭಾರತ್ ರೈಲಿಗೆ (Vande Bharat Train) ಸಿಲುಕಿ ಪ್ರಾಣಬಿಟ್ಟಿದ್ದಾರೆ.
ವೃದ್ಧೆ ಹಳಿ ದಾಟುವ ಧಾವಂತದಲ್ಲಿದ್ದರು ಎನ್ನಲಾಗಿದೆ. ವಂದೇ ಭಾರತ್ ರೈಲು ವೇಗವಾಗಿ ಇದ್ದ ಕಾರಣ ಡಿಕ್ಕಿ ಹೊಡೆದ ರಭಸಕ್ಕೆ ದೇಹವು ಛಿದ್ರ ಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿತ್ತು. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಗುರುತು ಪತ್ತೆಯಾಗಿಲ್ಲ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲಿಗೆ ಸಿಲುಕಿ ಜಾನುವಾರುಗಳ ಸಾವು
ಮಂಗಳೂರು ಹೊರವಲಯದ ಜೋಕಟ್ಟೆ ಅಂಗರಗುಂಡಿ ಎಂಬಲ್ಲಿ ಗೂಡ್ಸ್ ರೈಲಿಗೆ ಸಿಲುಕಿ 15ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆಗೆ ಗೂಡ್ಸ್ ರೈಲು ಬರುತ್ತಿತ್ತು. ಈ ವೇಳೆ ರೈಲು ಡಿಕ್ಕಿಯಾಗಿ ಜಾನುವಾರುಗಳು ಮೃತಪಟ್ಟಿವೆ. ರೈಲು ಬರುವಾಗ ಭಯಗೊಂಡ ಜಾನುವಾರುಗಳು ರೈಲ್ವೆ ಬ್ರಿಡ್ಜ್ ಮೇಲೆ ಓಡಿವೆ. ಕದ್ರಿ ಅಗ್ನಿಶಾಮಕ ದಳದವರು ಮೂರು ಎಮ್ಮೆಗಳನ್ನು ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ರೈಲ್ವೆ ಹಾಗೂ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Drowned in river: ಆಟವಾಡುತ್ತಾ ಕೆರೆ ಬಳಿ ಹೋದ ಬಾಲಕ; ನೀರಲ್ಲಿ ಮುಳುಗಿ ದಾರುಣ ಸಾವು
ಹೊತ್ತಿ ಉರಿದ ಹಾರ್ಡ್‌ವೇರ್ ಮಳಿಗೆ
ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದ ಗೋಣಿಕೊಪ್ಪ ಬಳಿಯ ನಂದಿ ಪೈಂಟ್ ಆ್ಯಂಡ್ ಹಾರ್ಡ್‌ವೇರ್ ಮಳಿಗೆಯಲ್ಲಿ ಅಗ್ನಿ ಅವಘಡ ನಡೆದಿದೆ. ಕಳೆದ ಭಾನುವಾರ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ ಆಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.