ಬೆಂಗಳೂರು: ಸಿಸಿ ಕ್ಯಾಮೆರಾ ಅಳವಡಿಸಿದ್ದ ಕಂಬಕ್ಕೆ ಬಸ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಸೆಕ್ಯೂರಿಟಿ ಗಾರ್ಡ್ (Security Guard) ತಲೆಗೆ ಕಂಬ (Accident News) ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಸೆಕ್ಯೂರಿಟಿ ಗಾರ್ಡ್ ಶಾಂತ ಕುಮಾರ್ ಎಂಬುವವರು ಮೃತಪಟ್ಟಿದ್ದಾರೆ. ಕೆ.ಪಿ ಅಗ್ರಹಾರ ಠಾಣಾ (KP Agrahara Police Station) ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಕೆ.ಪಿ ಅಗ್ರಹಾರ ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರವಾಸಕ್ಕೆ ಹೊರಟಿದ್ದರು. ವಿದ್ಯಾರ್ಥಿಗಳು ಖುಷಿ ಖುಷಿಯಾಗಿ ಬಸ್ ಹತ್ತಿದ್ದರು. ಬಸ್ ಹೊರಡುವಾಗ ಸಿಸಿ ಕ್ಯಾಮೆರಾ ಹಾಕಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಗೇಟ್ ಮುಂಭಾಗದಲ್ಲಿ ಕುಳಿತಿದ್ದ ಸೆಕ್ಯೂರಿಟಿ ಗಾರ್ಡ್ ಶಾಂತ ಕುಮಾರ್ ಮೇಲೆ ಕಂಬ ಬಿದ್ದಿದೆ.
ಕಂಬ ಬಿದ್ದ ರಭಸಕ್ಕೆ ಸೆಕ್ಯೂರಿಟ್ ಗಾರ್ಡ್ ಶಾಂತ ಕುಮಾರ್ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಅಲ್ಲಿದ್ದವರು ಗಾಯಾಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಕೆ.ಪಿ ಅಗ್ರಹಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಾರಿಗೆ ಡಿಕ್ಕಿ ಹೊಡೆದ ಕಾರು ಜಖಂ; ಐವರು ಗಂಭೀರ
ರಾಮನಗರ: ಇಲ್ಲಿನ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ವೇಗವಾಗಿ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಕ್ಕದ ರಸ್ತೆಗೆ ಪಲ್ಟಿ ಆಗಿದೆ.
ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ತೆರಳುವಾಗ ಈ ದುರ್ಘಟನೆ ನಡೆದಿದ್ದು, ಕಾರಿನಲ್ಲಿದ್ದ ಐವರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಂಟೈನರ್
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಶೆಟ್ಟಿಹಳ್ಳಿ ಸಮೀಪದ ಮಾಯಸಂದ್ರ ಕೆರೆಗೆ ನಿಯಂತ್ರಣ ತಪ್ಪಿ ಕಂಟೈನರ್ ಉರುಳಿ ಬಿದ್ದಿದೆ. ಬ್ರಿಡ್ಜ್ ತಡೆಗೋಡೆಗೆ ಡಿಕ್ಕಿ ಹೊಡೆದು ಕಂಟೈನರ್ ಕೆರೆಗೆ ಉರುಳಿದೆ. ಚಾಲಕ ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕ್ರೈನ್ ಮೂಲಕ ಕಂಟೈನರ್ ಮೇಲೆತ್ತುವ ಕಾರ್ಯ ಮುಂದುವರಿದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ