ಆನೇಕಲ್: ಒರಿಸ್ಸಾದಿಂದ ಬಂದು ಸೆಕ್ಯುರಿಟಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ವ್ಯಕ್ತಿ ಮನೆಯಲ್ಲಿರುವ ವೇಳೆ ಪಕ್ಕದ ಮನೆಯ ಪಿಲ್ಲರ್‌ವೊಂದು ಮನೆ ಮೇಲೆ ಆಕಸ್ಮಿಕವಾಗಿ ಬಿದ್ದ (Accidental death) ಪರಿಣಾಮ ದಾರುಣವಾಗಿ ಮೃತಪಟ್ಟಿದ್ದಾರೆ.
ಗೌರೀನ್ ಶಿಯೋಲ್ ಎಂಬುವವರೇ ಮೃತ ದುರ್ದೈವಿ. ಇವರು ಒಂದು ವರ್ಷದ ಹಿಂದೆ ಒರಿಸ್ಸಾದಿಂದ ಕೆಲಸ ಅರಸಿ ಆನೇಕಲ್ ತಾಲೂಕಿನ ಶೆಟ್ಟಹಳ್ಳಿಗೆ ಬಂದು ವಾಸವಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದ ಗೌರೀನ್ ಶಿಯೋಲ್, ಶುಕ್ರವಾರ ಮನೆಯಲ್ಲಿದ್ದರು.
ಇವರು ಶೀಟ್ ಮನೆಯಲ್ಲಿ ವಾಸವಿದ್ದರು. ಆ ಮನೆಯ ಪಕ್ಕದಲ್ಲಿಯೇ ವಿಶ್ವನಾಥ್ ಎಂಬುವವರು ಮನೆ ನಿರ್ಮಾಣ ಕಾಮಗಾರಿ ಮಾಡುತ್ತಿದ್ದರು. ಮನೆಯ ಮೇಲೆ ನೀರಿನ ಟ್ಯಾಂಕ್ ಇಡುವ ಸಲುವಾಗಿ ಸಿಮೆಂಟ್ ಕಾಂಕ್ರಿಟ್ ಇಟ್ಟಿಗೆಗಳ ಮೂಲಕ ದೊಡ್ಡ ಪಿಲ್ಲರ್ ನಿರ್ಮಾಣ ಮಾಡಿದ್ದರು. ಆದರೆ, ಇದು ಕಳಪೆ ಗುಣಮಟ್ಟದಿಂದ ಕೂಡಿದ್ದರಿಂದ ನಿರ್ಮಾಣ ಹಂತದ ಪಿಲ್ಲರ್ ಪಕ್ಕದ ಮನೆಯ ಶೀಟ್ ಮನೆ ಮೇಲೆ ಬಿದ್ದಿದ್ದು, ಮಲಗಿದ್ದ ಗೌರೀನ್ ಶಿಯೋಲ್ ಅವರ ತಲೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇನ್ನು ಮನೆ ನಿರ್ಮಾಣದ ವೇಳೆ ಮಾಲೀಕ ವಿಶ್ವನಾಥ್ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Shivamogga terror : ಶಿವಮೊಗ್ಗ ಟ್ರಯಲ್ ಬ್ಲಾಸ್ಟ್; NIAಯಿಂದ ಮತ್ತೊಬ್ಬ ವಶಕ್ಕೆ, ಮೂವರ ವಿಚಾರಣೆ