ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿಗೆ (Parappana Agrahara Jail) ಮೊಬೈಲ್ ಹಾಗೂ ಮಾದಕ ವಸ್ತು ಸಾಗಾಟಕ್ಕೆ (Drug trafficking) ಪೊಲೀಸರೇ ಸಾಥ್ ನೀಡಿದ್ದು, ಇದೀಗ ಪೊಲೀಸ್ ಸಿಬ್ಬಂದಿ ಸೇರಿ ಆರೋಪಿಗಳ ಬಂಧನವಾಗಿದೆ. ಆರೋಪಿಗಳಿಂದ 8 ಮೊಬೈಲ್ ಹಾಗೂ 57 ಗ್ರಾಂ ಬ್ರೌನ್ ಶುಗರ್ ಜಪ್ತಿ ಮಾಡಲಾಗಿದೆ.
ತೊಡೆ ಸಂದಿಯಲ್ಲಿತ್ತು ಬ್ರೌನ್ ಶುಗರ್, ಮೊಬೈಲ್
ಪೊಲೀಸರು ವಿಚಾರಣೆಗಾಗಿ ಕೈದಿಗಳಾದ ಗಿರೀಶ್ ಮತ್ತು ರಾಮ್ ಭವನ್ ಎಂಬುವವರನ್ನು ಕೋರ್ಟ್‌ಗೆ ಕರೆದುಕೊಂಡು ಹೋಗಿದ್ದರು. ಕೋರ್ಟ್‌ನಿಂದ ಮರಳಿ ಜೈಲಿಗೆ ವಾಪಸ್ ಬಂದಾಗ, ತಪಾಸಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ತೊಡೆ ಸಂದಿಯಲ್ಲಿ ಮೊಬೈಲ್ ಹಾಗೂ ಬ್ರೌನ್ ಶುಗರ್ ಬಚ್ಚಿಟ್ಟಿದ್ದು ಬೆಳಕಿಗೆ ಬಂದಿದೆ. ತೊಡೆಯ ಭಾಗದಲ್ಲಿ ಕಪ್ಪು ಬಣ್ಣದ ಟೇಪ್‌ನಿಂದ ಮೊಬೈಲ್‌ಗಳನ್ನು ಸುತ್ತಿಕೊಂಡಿದ್ದರು.
ಪೊಲೀಸರ ಕಳ್ಳಾಟ
ಕೂಡಲೇ ಗಿರೀಶ್ ಮತ್ತು ರಾಮ್ ಭವಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಜೈಲು ಸಿಬ್ಬಂದಿಯ ಕಳ್ಳಾಟವೂ ಬಯಲಾಗಿದೆ. ಆರೋಪಿ ಗಿರೀಶ್ ಕೋರ್ಟ್‌ಗೆ ಹೋಗಿ ವಾಪಸ್ ಬರುವಾಗ ಸ್ನೇಹಿತರನ್ನು ಸಂಪರ್ಕ ಮಾಡಿದ್ದ. ಇದಕ್ಕೆ ಪೊಲೀಸ್ ಸಿಬ್ಬಂದಿ ಸಾಥ್ ನೀಡಿದ್ದರು ಎನ್ನಲಾಗಿದೆ. ಪೊಲೀಸ್ ಸಿಬ್ಬಂದಿಯಾದ ವೆಂಕಟೇಶ್ ಹಾಗೂ ಉಮೇಶ್, ಅನ್ವರ್ ಜಿಮ್ನಾ, ಲಕ್ಕಪ್ಪ ತಲವಾರ್ ಎಂಬುವವರು ಆರೋಪಿಗಳನ್ನು ಕರೆದೊಯ್ದಿದ್ದರು. ಇವರ ಪೈಕಿ ಸಿಬ್ಬಂದಿ ಉಮೇಶ್ ಕೈದಿಗಳ ಜತೆ ಶಾಮೀಲಾಗಿರುವುದು ತಿಳಿದು ಬಂದಿದೆ.
ಮೊಬೈಲ್, ಡ್ರಗ್ಸ್ ಕೊಟ್ಟವರಿಗಾಗಿ ಹುಡುಕಾಟ
ಆರೋಪಿ ಗಿರೀಶ್ ಕೊಲೆ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಈ ರಾಮ್ ಭವನ್ ಪೋಕ್ಸೋ ಕೇಸ್‌ನಲ್ಲಿ ಜೈಲು ಪಾಲಾಗಿದ್ದರು. ವಿಚಾರಣೆಗೆಂದು ಬೆಂಗಳೂರಿನ ಸಿವಿಲ್ ಕೋರ್ಟ್‌ಗೆ ಕರೆ ತಂದಾಗ, ಗಿರೀಶ್‌ಗೆ ಆತನ ಸ್ನೇಹಿತರು ಮೊಬೈಲ್ ಹಾಗೂ ಮಾದಕ ವಸ್ತುಗಳನ್ನು ನೀಡಿದ್ದರು. ರಾಮ್ ಭವನ್‌ಗೆ ಆತನ ಪ್ರೇಯಸಿ ಮೊಬೈಲ್ ನೀಡಿದ್ದಳು ಎನ್ನಲಾಗಿದೆ. ಸದ್ಯ, ಕೈದಿಗಳಿಗೆ ಮೊಬೈಲ್, ಮಾದಕ ವಸ್ತು ನೀಡಿದವರಿಗಾಗಿ ಪೊಲೀಸರು ಹುಡುಕಾಟವನ್ನು ನಡೆಸುತ್ತಿದ್ದಾರೆ. ಜತೆಗೆ ಜೈಲಿನ ಇನ್ನಿತರ ಕೈದಿಗಳಾದ ನದಿಮ್, ಮುನಿರಾಜುರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: Assembly Session: ಡ್ರೈವರ್ ಆತ್ಮಹತ್ಯೆ ಯತ್ನ ವಿಷಯದಲ್ಲಿ ರಾಜಕೀಯ ಹಗ್ಗಜಗ್ಗಾಟ: ಸರ್ಕಾರದ ವಿರುದ್ಧ ಮುಗಿಬಿದ್ದ BJP-JDS
ಜೈಲಿನಲ್ಲಿ ಮೊಬೈಲ್ ಮಾರಾಟಕ್ಕೀಳಿದ ಆರೋಪಿಗಳು
ಜೈಲಿನಲ್ಲಿದ್ದುಕೊಂಡೇ ಕೈದಿ ಗಿರೀಶ್ ಮೊಬೈಲ್ ಮಾರಾಟಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಕಡಿಮೆ ದರದ ಮೊಬೈಲ್ ಅನ್ನು ಹೊರಗಿನಿಂದ ತಂದು ಜೈಲಿನಲ್ಲಿ ದುಬಾರಿ ಬೆಲೆಗೆ ಮಾರಾಟ ಸಂಚು ರೂಪಿಸಿದ್ದ. ಆರೋಪಿ ಗಿರೀಶ್ ಜತೆ ಅಭಿಗೌಡ ಹಾಗೂ ರಕ್ಷಿತ್ ಗೌಡ ಕೈಜೋಡಿಸಿದ್ದರು.
ಕೊಲೆ ಪ್ರಕರಣ, ಅತ್ಯಾಚಾರ ಕೇಸ್ ಸೇರಿದಂತೆ ಬೇರೆ ಬೇರೆ ಪ್ರಕರಣದಲ್ಲಿ ಪರಪ್ಪನ ಜೈಲು ಸೇರಿದ ಈ ಮೂವರು ಸ್ನೇಹಿತರಾಗಿದ್ದರು. ಅಭಿಗೌಡ, ರಕ್ಷಿತ್ ಗೌಡ ಮತ್ತು ಗಿರೀಶ್ ಜೈಲಿನಲ್ಲಿ ಇದ್ದುಕೊಂಡು, ಸಂತು ಎಂಬಾತನಿಂದ ಮೊಬೈಲ್ ಖರೀದಿ ಮಾಡಿಸಿದ್ದರು. ಬಳಿಕ ಕಾರ್ತಿಕ್ ಹಾಗೂ ಚಾಯಿ ಎಂಬುವರ ಮೂಲಕ ಮೊಬೈಲ್ ಗಿರೀಶ್‌ಗೆ ನೀಡಿದ್ದರು. ಆದರೆ ತಪಾಸಣೆ ವೇಳೆ ಗಿರೀಶ್ ಸಿಕ್ಕಿ ಹಾಕಿಕೊಂಡಿದ್ದ. ಸದ್ಯ ಪ್ರಕರಣ ದಾಖಲಾದ ಬಳಿಕ ಅಭಿಗೌಡ ಬಂಧವಾಗಿದ್ದರೆ, ತಪ್ಪಿಸಿಕೊಂಡಿರುವ ರಕ್ಷಿತ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ