ಬೆಳಗಾವಿ: ಪುನರ್ವಸತಿ ವೇಳೆ ಲಂಚ ಪಡೆದು ಬೇಕಾಬಿಟ್ಟಿ ಪರಿಹಾರ ವಿತರಣೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ ನಾಲ್ವರು ಅಧಿಕಾರಿಗಳಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 70 ಸಾವಿರ ರೂ. ದಂಡ ವಿಧಿಸಿ ಬೆಳಗಾವಿಯ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮೋಹನ ಪ್ರಭು ತೀರ್ಪು ನೀಡಿದ್ದಾರೆ.
2012ರಲ್ಲಿ ಬೆಳಗಾವಿ ಲೋಕಾಯುಕ್ತ ಠಾಣೆಗೆ ಜಿಲ್ಲೆಯ ಸವದತ್ತಿ ತಾಲೂಕಿನ ಕಗದಾಳ ಗ್ರಾಮದ ಹಣಮಪ್ಪ ಮಾದರ ಎಂಬುವವರು ದೂರು ನೀಡಿದ್ದರು. ಪ್ರಕರಣದ ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯ, ನವಿಲುತೀರ್ಥ ಜಲಾಶಯದ ಅಂದಿನ ಸೂಪರಿಂಟೆಂಡೆಂಟ್ ಬಿ.ಪದ್ಮನಾಭ, ನರಗುಂದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಬಿ.ಕವದಿ, ನವಿಲುತೀರ್ಥ ಜಲಾಶಯದ ಎಇಇ ಆನಂದ ಕೇಶವರಾವ್ ಮಿರ್ಜಿ, ಮಲಪ್ರಭ ಬಲದಂಡೆ ಕಾಲುವೆ ನಿರ್ಮಾಣದ ಕಿರಿಯ ಎಂಜಿನಿಯರ್ ಪ್ರಕಾಶ ಹೊಸಮನಿಗೆ ಶಿಕ್ಷೆ ಪ್ರಕಟಿಸಲಾಗಿದೆ.
ಸವದತ್ತಿ ತಾಲೂಕಿನ ಕಗದಾಳ ಗ್ರಾಮದಲ್ಲಿ ಮನೆಗಳು ಜವುಗು ಉಂಟಾಗಿ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಭೂಸ್ವಾಧೀನ ಕಾಯ್ದೆಯಡಿ ನಿವಾಸಿಗಳಿಗೆ ಪುನರ್ವಸತಿಗೆ ಸರ್ಕಾರ ಸೂಚಿಸಿತ್ತು. ಆ ಸಂದರ್ಭದಲ್ಲಿ ಲಂಚ ಕೊಟ್ಟವರಿಗೆ ನಿಯಮ ಉಲ್ಲಂಘಿಸಿ ಹೆಚ್ಚಿನ ಪರಿಹಾರ ಧನ ಮಂಜೂರು ಮಾಡಿ, ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪ ಸಾಬೀತು ಹಿನ್ನೆಲೆಯಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡಲಾಗಿದೆ. ಸರ್ಕಾರದ ಪರ ವಿಶೇಷ ಅಭಿಯೋಜಕ ಪ್ರವೀಣ ಅಗಸಗಿ ವಕಾಲತ್ತು ವಹಿಸಿದ್ದರು.
ಇದನ್ನೂ ಓದಿ | ರಾಜ ಮಾರ್ಗ | ಶಿವಾಜಿಯ ಗುರು ದಾದಾಜಿ ಕೊಂಡದೇವರು ತನ್ನ ಬಲಗೈಗೆ ಶಿಕ್ಷೆ ಕೊಟ್ಟದ್ದು ಯಾಕೆ?