Site icon Vistara News

Acid Attack | ಇಲ್ಲಿದೆ, ಆ್ಯಸಿಡ್ ನಾಗನ ತಪ್ಪೊಪ್ಪಿಗೆ ಹೇಳಿಕೆ!

Acid Attack

ಅಭಿಷೇಕ್‌ ಜೈಶಂಕರ್‌, ಬೆಂಗಳೂರು

ಆ ಘಟನೆ ಹೆಣ್ಣು ಮಕ್ಕಳನ್ನು ಆತಂಕಕ್ಕೆ ತಂದುಬಿಟ್ಟಿತ್ತು. ಬೆಂಗಳೂರಿನಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಆ್ಯಸಿಡ್ ದಾಳಿ (Acid Attack) ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಪ್ರೀತಿ ಮಾಡಲು ಒಲ್ಲೆಯೆಂದವಳ ಮೇಲೆ ಆ್ಯಸಿಡ್ ಹಾಕಿದ್ದು ಯಾಕೆ ಎಂದು ಪೊಲೀಸರ ಮುಂದೆ ಆರೋಪಿ ನೀಡಿದ ಸ್ಟೇಟ್‌ಮೆಂಟ್‌ ಕಾಪಿಯ ಪಿನ್ ಟು ಪಿನ್ ಮಾಹಿತಿ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. ಆ ಕುರಿತ ವಿವರ ಇಲ್ಲಿದೆ.

ಆ್ಯಸಿಡ್ ನಾಗನಿಗಿತ್ತು ಮತ್ತೊಂದು ಲವ್!

ಮೊದಲ ಲವ್ ಬ್ರೇಕಪ್ ಆಗಿ ಜಗಳವಾಗಿದ್ದಕ್ಕೆ ದೇವದಾಸ್ ಆಗಿದ್ದನಂತೆ ನಾಗ. ಇದೇ ವಿಷಯಕ್ಕೆ ಕಿರಿಕ್ ನಡೆದು ಮನೆ ಬಿಟ್ಟು ಅಣ್ಣನ ಮನೆ ಸೇರಿದ್ದ ನಾಗ. ತಮ್ಮ ಹಾಳಾಗಬಾರದು ಎಂದು ತನ್ನ ಮನೆಯಲ್ಲಿ ಆಶ್ರಯ ನಿಡಿದ್ದ ಸಹೋದರ. ಮೊದಲ ಪ್ರೀತಿಯ ಗುಂಗಿನಿಂದ ಹೊರಬರಲು ಒದ್ದಾಡುತ್ತಿದ್ದ ನಾಗನಿಗೆ ಬ್ರೇಕ್ ನೀಡಿದ್ದೇ ಆ ಯುವತಿ.

ಆಕೆಯನ್ನು ನೋಡಿದ್ದೆ ತಡ ನಾಗನ ಮನಸ್ಸಲ್ಲಿ ಪ್ರೀತಿಯ ಮೊಳಕೆ ಒಡೆದಿದೆ. ಮೊಳಕೆಯೊಡೆದ ಪ್ರೀತಿ ಕೈ ತಪ್ಪಬಾರದು, ಮತ್ತೊಬ್ಬಾಕೆಯೂ ಕೈ ಕೊಡಬಾರದು. ಏನೇ ಆಗಲಿ ಎರಡನೇ ಪ್ರೀತಿ ಕಳೆದು ಕಳೆದುಕೊಳ್ಳಬಾರದೆಂದು ಅಚಲವಾದ ನಿರ್ಧಾರಕ್ಕೆ ಬಂದಿದ್ದ ನಾಗ! ಅಷ್ಟೇ ಏಕೆ? ತನಗೆ ಸಿಗದವಳು ಬೇರೆಯವರಿಗೂ ಸಿಗಬಾರದು ಎಂಬುದನ್ನು ನಿರ್ಧರಿಸಿದ್ದ! ಇದರ ಮಧ್ಯೆ ಮೊದಲು ಕ್ಲೋಸ್ ಆಗಿದ್ದ ಸಂತ್ರಸ್ತೆ ನಾಗನಿಂದ ದೂರವಾಗಿದ್ದೇಕೆ? ಬಂಧಿತನಾದ ನಾಗ ಪೊಲೀಸರ ಮುಂದೆ ಹೇಳಿದ್ದೇನು? ನಾಗನ ತಪ್ಪೊಪ್ಪಿಗೆ ವರದಿಯಲ್ಲಿ ಏನಿದೆ?

ನಾಗೇಶ್ ಅಲಿಯಾಸ್‌ ಆ್ಯಸಿಡ್ ನಾಗನ ಸ್ವ ಇಚ್ಛಾ ಹೇಳಿಕೆ

ನನ್ನ ಹೆಸರು ನಾಗೇಶ್ ಕುಮಾರ್. ಕೃಷ್ಣಪ್ಪ ಹಾಗೂ ಚಿನ್ನಮ್ಮ ನನ್ನ ತಂದೆ – ತಾಯಿ. ನಾನು ಒಂ ಸಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದೆ. ನಂತರ ಹೊಸೂರಿನಲ್ಲಿ ನನ್ನ ವಿದ್ಯಾಭ್ಯಾಸ ಮುಂದುವರೆಸಿದ್ದೆ.

2018ರಿಂದ 2013ರಲ್ಲಿ Edu comp ಎಂಬ ಕಂಪನಿಯಲ್ಲಿ ಝೋನಲ್ ಕೋ ಆರ್ಡಿನೇಟರ್ ಆಗಿ ಕೆಲಸಕ್ಕೆ ಸೇರಿಕೊಂಡೆ .ಇಲ್ಲಿ ಕೆಲಸ ನಿರ್ವಹಿಸುವಾಗ ಊರಿನಲ್ಲಿ ನಾನು ಪ್ರೀತಿ ಮಾಡುತ್ತಿದ್ದ ಅರ್ಚನಾ ಎಂಬ ಹುಡುಗಿಯ ವಿಚಾರಕ್ಕೆ ಗಲಾಟೆಯಾಗಿ ಅವರ ಮನೆಯವರು ನನ್ನ ವಿರುದ್ಧ ಬಾಗಲೂರಿನಲ್ಲಿ 2011ರಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ಬಂದು ಅಣ್ಣ ರಮೇಶ್ ಬಾಬು ಮನೆಯಲ್ಲಿ ನೆಲೆಸಿದ್ದೇನೆ. ನಂತರ ಆಂದ್ರಳ್ಳಿಯ ಶೆಡ್ ನಲ್ಲಿ ನಾನು ಅಗರಬತ್ತಿ ಫ್ಯಾಕ್ಟರಿ ಮಾಡಿದ್ದೆ. ಆ ಸಮಯದಲ್ಲಿ ಆಕೆ ಪಿಯೂಸಿ ಓದುತ್ತಿದ್ದಳು . ನನಗೆ ಆಕೆಯ ಪರಿಚಯವಾಗಿ ನಂತರ ನನ್ನೊಂದಿಗೆ ಬಹಳ ಆತ್ಮೀಯವಾಗಿ ಮಾತನಾಡತೊಡಗಿದಳು. ‌ನಂತರ ಆಕೆ ಈಸ್ಟ್ ವೆಸ್ಟ್‌ ಕಾಲೇಜಿನಲ್ಲಿ ಬಿಕಾಂ ಸೇರಿಕೊಂಡಳು. ನಂತರದ ದಿನದಲ್ಲಿ ನನ್ನನ್ನ ಅವಾಯ್ಡ್ ಮಾಡುತ್ತಾ ಬಂದಳು. ಆದರೆ ನಾನು ಆಕೆಯನ್ನ ತುಂಬಾ ಪ್ರೀತಿಸಲು ಶುರು ಮಾಡಿದ್ದೆ.

ಪ್ರೀತ್ಸೆ ಪ್ರೀತ್ಸೆ ಎಂದು ಬೆನ್ನು ಬಿದ್ದಿದ್ದ ಪಾಗಲ್ ಪ್ರೇಮಿ

2016ರಲ್ಲಿ ಆಕೆಯನ್ನು ನೋಡಬೇಕೆಂದಾಗ ಹಿಂಬಾಲಿಸಿಕೊಂಡು ಹೋಗಿ ಬರುವುದು ಮಾಡುತ್ತಿದ್ದೆ. 2016ರಲ್ಲಿ ಆಕೆಯ ಕ್ಲಾಸ್ ಮೇಟ್ ಸುಹಾಸ್ ಎಂಬುವನನ್ನು ಪರಿಚಯ ಮಾಡಿಕೊಂಡು ಆಕೆಯನ್ನ ಪ್ರೀತಿಸುವುದಾಗಿ ಹೇಳಿದೆ. ನಂತರ ನಾನು ಆಕೆಯನ್ನು ಮದುವೆ ಮಾಡಿಕೊಡುವಂತೆ ಅವರ ಸಂಬಂಧಿಕರಿಗೆ ಕೇಳಿದಾಗ ಅವರು ಗಲಾಟೆ ಮಾಡಿದ್ದರು. ಇದರಿಂದ ನನ್ನ ಅಣ್ಣ ರಮೇಶ್ ಬಾಬುಗೆ ಬೇಜಾರಾಯ್ತು. ಹೀಗಾಗಿ ನನ್ನ ಅಣ್ಣ ಕೂಡ ನೀನು ನನ್ನ ಮರ್ಯಾದೆ ತೆಗೆಯುತ್ತಿಯಾ ಎಂದು ಹೊಡೆದು ಆಕೆಯ ವಿಚಾರಕ್ಕೆ ಮನೆ ಖಾಲಿ ಮಾಡಿಸಿದ್ದ.

ಇದನ್ನೂ ಓದಿ | Acid Attack | ಆ್ಯಸಿಡ್ ಸಂತ್ರಸ್ತೆಗೆ ಕಿಚ್ಚ ಸುದೀಪ್‌ ನೋಡುವ ಬಯಕೆ

ಆಕೆಯನ್ನ ಚೆನ್ನಾಗಿ ನೋಡ್ಕೊಳ್ತಿನಿ ಎಂದು ಮಾತು ಕೊಟ್ಟಿದ್ದ ನಾಗ!

ಏಪ್ರಿಲ್ ಮೊದಲ ವಾರದಲ್ಲಿ ಆಕೆಯ ಅಕ್ಕನ ಮದುವೆ ಎಂದು ತಿಳಿಯಿತು. ಆಗ ಆಕೆಯ ಚಿಕ್ಕಪ್ಪ ಸುಂದರೇಶ್‌ನನ್ನು ಭೇಟಿಯಾಗಿ ನಾನು ಆಕೆಯನ್ನ ಪ್ರೀತಿಸುವುದಾಗಿ ಹೇಳಿದೆ. ಆಗ ಸುಂದರೇಶ್‌, ನಿಮ್ಮ ಜಾತಿ ಬೇರೆ ನಮ್ಮ ಜಾತಿ ಬೇರೆ ನೋಡೋಣ ಎಂದರು. ನಂತರ ಅದೇ ದಿನ ರಾತ್ರಿ ಸುಂದರೇಶ್‌ಗೆ ಕರೆ ಮಾಡಿ, ಆಕೆಗೆ ಒಳ್ಳೆ ಕೆಲಸ ಕೊಡಿಸುತ್ತೀನಿ, ಆಕೆಯನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಮದುವೆ ಮಾಡಿಸಿ ಎಂದು ಹೇಳಿದ್ದೆ. ಆಗ ಹುಡುಗಿಗೆ ಇಷ್ಟವಿಲ್ಲದ ಮೇಲೆ ಏನೂ ಮಾತನಾಡಿ ಪ್ರಯೋಜನ ಇಲ್ಲ ಎಂದು ಹೇಳಿ ಅವರು ಫೋನಿಟ್ಟರು.

ಆ್ಯಸಿಡ್ ಇಟ್ಟುಕೊಂಡು ಮನವೊಲಿಸಲು ಯತ್ನಿಸುತ್ತಿದ್ದ ನಾಗ

ಸ್ವಲ್ಪ ದಿನದ ಬಳಿಕ ನನಗೆ ಆಕೆ ಕಾಲೇಜಿನಲ್ಲಿ ಯಾವುದೋ ಹುಡುಗನನ್ನ ಪ್ರೀತಿಸುತ್ತಿರುವ ವಿಚಾರ ಗೊತ್ತಾಗಿ ನಾನು ಆಕೆಗೆ ಆ್ಯಸಿಡ್ ಹಾಕಲು ನಿರ್ಧರಿಸಿದ್ದೆ. ನಂತರ ‌nagesh.alpineservice@gmail .com ಮೇಲ್ ಐಡಿಯನ್ನ ಕ್ರಿಯೇಟ್ ಮಾಡಿ ದೀಪ್ತಿ ಲ್ಯಾಬ್ಸ್ ನವರು ಪರಿಚಯವಿದ್ದರಿಂದ 9 ಕೆಜಿ ಸಲ್ಪ್ಯೂರಿಕ್ ಆ್ಯಸಿಡ್ ಅನ್ನು ಖರೀದಿ ಮಾಡಿ ಖುದ್ದು ನಾನೆ ಅದನ್ನ ತೆಗೆದುಕೊಂಡು ಬಂದು ಮನೆಯಲ್ಲಿಟ್ಟುಕೊಂಡೆ .‌ ಆ ಸಮಯದಲ್ಲೇ ಆ್ಯಸಿಡ್ ಹಾಕಬೇಕೆಂದು ನಿರ್ಧರಿಸಿದೆ. ಆದರೆ ದುಡುಕುವುದು ಬೇಡ, ಸ್ವಲ್ಪ ದಿನ ಕಾಯೋಣ. ಆದಷ್ಟು ಆಕೆಯ ಮನವೊಲಿಸೋಣ ಎಂದು ಸುಮ್ಮನಿದ್ದೆ. ಮತ್ತೊಮ್ಮೆ ಮನವೊಲಿಸಲು ಹೋದಾಗ ಆಕೆ ಮತ್ತೆ ನಿರಾಕರಿಸಿ ನೀನು ನನ್ನ ಅಣ್ಣನ ತರ ಎಂದಿದ್ದಳು. ಮತ್ತೆ ಮತ್ತೆ ನನಗೆ ತೊಂದರೆ ಕೊಡಬೇಡ ಎಂದು ಬೈದಿದ್ದಳು. ಹೀಗಾಗಿ ನಾನು ಆಕೆಗೆ ಆ್ಯಸಿಡ್ ಹಾಕಲೇಬೇಕು ಎಂದು ನಿರ್ಧರಿಸಿದೆ. ‌

ಶಿವಕುಮಾರ್ ಎಂಬುವವರ ಮುಖಾಂತರ 1.04 ಲಕ್ಷ ರೂ. ಪಡೆದು ಆಸಿಡ್ ತೆಗೆದುಕೊಂಡು ಬೈಕ್‌ನಲ್ಲಿ ಆಕೆಯನ್ನ ಹಿಂಬಾಲಿಸಿಕೊಂಡು ಹೋಗಿದ್ದೆ. ಆಕೆಯ ತಂದೆ ಪ್ರೇಮಾಳನ್ನ ಆಕೆಯ ಕಚೇರಿಗೆ ಡ್ರಾಪ್ ಮಾಡಿ ಹೋದ ಬಳಿಕ ನನ್ನ ಬೈಕನ್ನು ಗಂಗಾಧರಪ್ಪ ಬಿಲ್ಡಿಂಗ್ ಬಳಿ‌ ನಿಲ್ಲಿಸಿ ಹ್ಯಾಂಡ್ ಗ್ಲೌಸ್ ಹಾಕಿ ಆಕೆಯ ಮೈಮೇಲೆ ಆ್ಯಸಿಡ್ ಎರಚಿದೆ. ಆಕೆ ಕಿರುಚುತ್ತಿದ್ದಂತೆ ನಾನು ಬಾಟಲ್ ಅಲ್ಲೆ ಬಿಸಾಕಿ, ಗಂಗಾಧರಪ್ಪ ಬಿಲ್ಡಿಂಗ್ ಬಳಿ ಇರುವ ನನ್ನ ಬೈಕ್‌ನಲ್ಲಿ ಪರಾರಿಯಾದೆ.

ಇದನ್ನೂ ಓದಿ | ಆ್ಯಸಿಡ್ ದಾಳಿ ಕ್ರೂರಿಗಳ ವಿರುದ್ಧ ಬರಲಿದೆ ಹೊಸ ಕಾನೂನು ಅಸ್ತ್ರ

ಶರಣಾಗಲು ಕಂಡ ಕಂಡ ವಕೀಲರ ಕಾಲಿಗೆ ಬಿದ್ದಿದ್ದ ಆರೋಪಿ!

ಲಗ್ಗೆರೆ ಬಳಿ ಬೈಕಲ್ಲಿ ಹೋಗುವಾಗ ನನ್ನ ಮೊಬೈಲ್ ನಿಂದ ಅಣ್ಣನ ನಂಬರಿಗೆ ಕರೆ ಮಾಡಿ ಆಕೆಗೆ ಆ್ಯಸಿಡ್ ಹಾಕಿದಿನಿ ಕೋರ್ಟ್‌ಗೆ ಸರೆಂಡರ್‌ ಆಗುತ್ತೇನೆ, ಅಮ್ಮನನ್ನ ಎಲ್ಲಿಗಾದರೂ ಕರೆದುಕೊಂಡು ಹೋಗು ಎಂದು ಹೇಳಿ ಫೋನ್ ಕಟ್ ಮಾಡಿದ್ದೆ . ನಂತರ ಸರೆಂಡರ್ ಆಗಲು ಮ್ಯಾಜಿಸ್ಟ್ರೇಟ್ ಕೋರ್ಟ್ ಹತ್ರ ಬರುವಾಗ ಮಾರ್ಗ ಮಧ್ಯೆ ಬೈಕ್‌ ಹಿಂಬದಿ ಬಾಕ್ಸ್ನಲ್ಲಿದ್ದ ಮತ್ತೊಂದು ಆ್ಯಸಿಡ್ ಬಾಟಲ್‌ ಬಿಸಾಕಿದ್ದೆ. ‌ ನಂತರ ಸ್ನೇಹಿತರಾದ ಸುಭಾಷ್ ಹಾಗು ಸತೀಶ್‌ಗೆ ಕರೆ ಮಾಡಿ ನಡೆದ ಘಟನೆ ವಿವರಿಸಿ ನಾನು ಕೋರ್ಟ್‌ಗೆ ಸರೆಂಡರ್ ಆಗಲು ಹೋಗುತ್ತಿರುವುದಾಗಿ ಹೇಳಿದ್ದೆ.

ನನ್ನ ಸ್ನೇಹಿತರು ಕೋರ್ಟ್ ಬೇಡ, ಪೊಲೀಸ್ ಠಾಣೆಗೆ ಸರೆಡರ್ ಆಗಲು ಹೇಳಿದ್ದರು. ಪೊಲೀಸರ ಭಯ ಇದ್ದ ಹಿನ್ನೆಲೆಯಲ್ಲಿ ‌ ನ್ಯಾಯಾಲದಲ್ಲಿ ಸರೆಂಡರ್ ಆಗುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದೆ. ನಂತರ ಬೈಕನ್ನು ಕೋರ್ಟ್ ಬಳಿ ನಿಲ್ಲಿಸಿ ವಕೀಲರ ಬಳಿ ಸರೆಂಡರ್ ಮಾಡಿಸಲು ಹೇಳಿದೆ. ಹೀಗೆ ನಾಲ್ಕೈದು ಜನ ವಕೀಲರಲ್ಲಿ ಕೇಳಿದೆ. ಅವರಲ್ಲಿ ಒಬ್ಬರು ಎಫ್ ಐ ಆರ್ ದಾಖಲಾಗುವವರೆಗೂ ಸರೆಂಡರ್ ಆಗೋಕೆ ಆಗಲ್ಲ. ನೀನು ಪೊಲೀಸ್ ಠಾಣೆಗೆ ಹೋಗಿ ಸರೆಂಡರ್ ಆಗು ಎಂದಿದ್ದರು . ಪೊಲೀಸರ ಭಯ ಇದ್ದ ಕಾರಣ ಬಾಡಿಗೆ ಆಟೋದಲ್ಲಿ ಅಲ್ಲಿಂದ ಹೊರಟುಬಿಟ್ಟೆ.
ಪೊಲೀಸರಿಗೆ ಸಿಗಬಾರದು ಎಂದು ಸನ್ಯಾಸಿಯಾದ ನಾಗ

ನೇರವಾಗಿ ಹೊಸಕೋಟೆಗೆ ಹೋಗಿದ್ದೆ. ಟೋಲ್ ಬಳಿ ಸಿಮ್ ಹಾಗೂ ಮೊಬೈಲನ್ನು ಬೇರೆ ಬೇರೆ ಮಾಡಿ ಎಸೆದಿದ್ದೆ. ನಂತರ ಹೊಸಕೋಟೆಯಿಂದ ಮಾಲೂರಿಗೆ ಹೋಗಿ ಅಲ್ಲಿಂದ ಬಸ್‌ನಲ್ಲಿ ವೇಲೂರಿಗೆ ತೆರಳಿದೆ. ಅಲ್ಲಿಂದ ತಿರುವಣ್ಣಾಮಲೈಯಲ್ಲಿ ಪಂಚೆ, ಶಲ್ಯ ಖರೀದಿ ಮಾಡಿ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಮಲಗಿದೆ. ರಾತ್ರಿ ಸೊಳ್ಳೆ ಹೆಚ್ಚಿದ್ದರಿಂದ ನಿದ್ದೆ ಬಾರದೆ ಬೆಟ್ಟವನ್ನು ಪ್ರದಕ್ಷಿಣೆ ಮಾಡುವಾಗ ಒಂದು ಕಲ್ಯಾಣಿ ಸಿಕ್ಕಿತ್ತು. ಅದರ ಬಳಿ ಹೋಗಿ ನನ್ನ ಬಟ್ಟೆ ಬಿಸಾಕಿ ಪಂಚೆ, ಶಲ್ಯ ಹಾಕಿದೆ. ಯಾವುದೇ ಕಾರಣಕ್ಕೂ ಪೊಲೀಸರಿಗೆ ಸಿಗಬಾರದು, ಸನ್ಯಾಸಿಯಾದರೆ ಯಾರಿಗೂ ಗೊತ್ತಾಗಲ್ಲ ಎಂದು ಸನ್ಯಾಸಿ ವೇಷದಲ್ಲಿಯೆ ಉಳಿದುಕೊಳ್ಳಲು ನಿರ್ಧರಿಸಿದ್ದೆ.

ಪ್ರತಿ ದಿನ ಸಿಂಗಂ ಕೊಳಂ ಎಂಬ ಕಲ್ಯಾಣಿಯಲ್ಲಿ ಸ್ನಾನ ಮಾಡಿ ರಮಣ ಆಶ್ರಮದಲ್ಲಿ ಪ್ರತಿದಿನ ಧ್ಯಾನ ಮಾಡಿಕೊಂಡು ಇದ್ದೆ. ಆಶ್ರಮದವರು ಹಾಗೂ ಸಾರ್ವಜನಿಕರು ನೀಡುವ ಆಹಾರವನ್ನು ತಿಂದು ಕಾಲ ಕಳೆಯುತ್ತಿದ್ದೆ. 13-5-2022ರಂದು ನಾನು ಊಟ ಮಾಡಿಕೊಂಡು ಮದ್ಯಾಹ್ನ 4.30‌ಕ್ಕೆ ರಮಣ ಆಶ್ರಮದಲ್ಲಿ ಧ್ಯಾನ ಮಾಡಿ ಈಚೆಗೆ ಬಂದಾಗ ಮಫ್ತಿಯಲ್ಲಿದ್ದ ಪೊಲೀಸರು ನನ್ನನ್ನ ಹಿಡಿದುಕೊಂಡರು. ನಂತರ ಖಾಸಗಿ ವಾಹನದಲ್ಲಿ ನನ್ನನ್ನು ಕರೆದುಕೊಂಡು ಹೋದರು.

ಬಹಿರ್ದೆಸೆ ಎಂದು ಹೇಳಿ ತಪ್ಪಿಸಿಕೊಳ್ಳಲು ಯತ್ನ, ಕಾಲಿಗೆ ಗುಂಡು

ಮೊದಲೇ ಪೊಲೀಸರ ಭಯ ಇದ್ದಿದ್ದರಿಂದ ಬೆಂಗಳೂರು ಕಡೆ ಹೊರುಡುವಾಗ ಪೊಲೀಸರಿಂದ ತಪ್ಪಿಸಿಕೊಳ್ಳಬೇಕೆಂದು ಮನಸ್ಸಿನಲ್ಲಿಯೇ ತೀರ್ಮಾನಿಸಿದ್ದೆ. ಆದರೆ ಪೊಲೀಸರು ಬಹಳ ಜಾಗರೂಕವಾಗಿ ನಿಗಾವಹಿಸಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಯೋಚನೆ ಮಾಡಿ ನೈಸ್ ಮಾರ್ಗವಾಗಿ ಬರುವಾಗ ಮಲ ವಿಸರ್ಜನೆ ಮಾಡಬೇಕು ಎಂದು ಕೇಳಿದಾಗ ಅವರು ವಾಹನವನ್ನ ನಿಲ್ಲಿಸಿ ನನ್ನ ಜತೆ ಒಬ್ಬ ಸಿಬ್ಬಂದಿಯನ್ನ ಕಳಿಸಿ ಕೊಟ್ಟರು .

ನಾನು‌ ಮಲ ವಿಸರ್ಜನೆ ಮಾಡುವಂತೆ ನಟಿಸಿ ಕಲ್ಲಿನಿಂದ ಹಲ್ಲೆ ಮಾಡಿ ಸಿಬ್ಬಂದಿಯನ್ನ ನೂಕಿ ಅಲ್ಲಿಂದ ಪರಾರಿಯಾಗಲು ಮುಂದಾದೆ. ಓಡುವಾಗ ಪೊಲೀಸ್ ಇನ್ಸ್‌ಪೆಕ್ಟರ್‌ ಓಡದಂತೆ ಹೇಳಿದರು. ಗಾಳಿಯಲ್ಲಿ ಗುಂಡು ಹಾರಿಸಿದಾಗ ಭಯದಿಂದ‌ ಮತ್ತೆ ಅವರ ಮೇಲೆ ಕಲ್ಲನ್ನು ಎಸೆದು ಓಡುವಾಗ ನನ್ನ ಬಲಗಾಲಿಗೆ ಗುಂಡು ಬಿದ್ದ ಹಿನ್ನೆಲೆಯಲ್ಲಿ ನಾನು ಕೆಳಗೆ ಕುಸಿದು ಬಿದ್ದೆ. ನಂತರ ರಾಜರಾಜೇಶ್ವರಿ ಆಸ್ಪತ್ರೆಗೆ ನನ್ನನ್ನ ಕರೆದೊಯ್ದು ಚಿಕಿತ್ಸೆ ನೀಡಿದರು. ಮತ್ತೆ ಬಿಜಿಎಸ್ಗೆ ಕರೆದೊಯ್ದರು. ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು.

ಯಾಕಪ್ಪ ಹೀಗೆಲ್ಲಾ ಮಾಡಿದೆ ಪ್ರೀತಿಸಿದವಳು ಚೆನ್ನಾಗಿರಬೇಕು ಅಲ್ವಾ ಅಂದರೆ ಆತ ಈಗ ಹೇಳೋದೆ ಬೇರೆ!

ʻತಪ್ಪು ಮಾಡಿಬಿಟ್ಟೆ ಸರ್. ಆಸಿಡ್ ಹಾಕಿ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ. ಆದರೆ ಅದ್ಯಾಕೋ ಮನಸ್ಸು ಆಗಲಿಲ್ಲ. ಹಾಗಾಗಿ ಸನ್ಯಾಸಿಯಾಗುವ ಚಿಂತನೆ ಮಾಡಿದೆ ಎನ್ನುತ್ತಾನೆ. ಅದೇನೆ ಇರಲಿ. ತನ್ನ ಹುಚ್ಚಾಟಕ್ಕೆ ಅಮಾಯಕ ಯುವತಿಯೊಬ್ಬಳ ಬಾಳಲ್ಲಿ ಆಟವಾಡಿದವನೀಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ!

ಇದನ್ನೂ ಓದಿ | ಆ್ಯಸಿಡ್ ಕೇಸ್‌ ಪ್ರಕರಣ, ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು

Exit mobile version