ಬೆಂಗಳೂರು: ಆ್ಯಸಿಡ್ ದಾಳಿಗೆ ಒಳಗಾಗಿ (Acid attack) ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕನಕಪುರದ ಬಾಲಕಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಭೇಟಿ ಮಾಡಿದ್ದಾರೆ. ಬಳಿಕ ಆರೋಗ್ಯ ಸ್ಥಿತಿ ವಿಚಾರಿಸಿ ಕುಟುಂಬಕ್ಕೆ ಹಾಗೂ ಬಾಲಕಿಗೆ ಸಾಂತ್ವನ, ಧೈರ್ಯ ಹೇಳಿದ್ದಾರೆ.
ಬಳಿಕ ಸ್ಥಳೀಯ ಪೊಲೀಸರಿಂದ ಘಟನೆ ಸಂಬಂಧ ಮಾಹಿತಿ ಪಡೆದರು. ಕನಕಪುರದಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಪಾಪಿಯೊಬ್ಬ ಬಾಲಕಿ ಮೇಲೆ ಆ್ಯಸಿಡ್ (Acid attack) ದಾಳಿ ನಡೆಸಿದ್ದ.
ಏನಿದು ಘಟನೆ?
ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಕನಕಪುರ ಬೈಪಾಸ್ ರಸ್ತೆಯ ನಾರಾಯಣಪ್ಪ ಕೆರೆ ಬಳಿ ಫೆ.17ರಂದು ನಡೆದಿತ್ತು. ಆ್ಯಸಿಡ್ ದಾಳಿಯಿಂದ (Acid Attack on Girl) ಬಾಲಕಿಯ ಎಡ ಭಾಗದ ಕಣ್ಣಿಗೆ ಗಂಭೀರ ಗಾಯವಾಗಿ, ದೃಷ್ಟಿ ಸಾಮರ್ಥ್ಯ ಕಡಿತವಾಗಿದೆ.
ಸುಮಂತ್ ಎಂಬಾತ ಬಾಲಕಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿ ಆಗಿದ್ದಾನೆ. ಮಾತನಾಡಬೇಕು ಬಾ ಎಂದು ಬಾಲಕಿಯನ್ನು ಆರೋಪಿ ಕರೆಸಿಕೊಂಡಿದ್ದಾನೆ. ತಮ್ಮನ ಜತೆ ಬೈಪಾಸ್ ರಸ್ತೆಗೆ ಪಿಯುಸಿ ವಿದ್ಯಾರ್ಥಿನಿ ಬಂದಿದ್ದಾಳೆ. ಈ ವೇಳೆ ತನ್ನ ಪ್ರೀತಿ ಒಪ್ಪಿಕೊಳ್ಳುವಂತೆ ಯುವಕ ಸುಮಂತ್ ಒತ್ತಾಯಿಸಿದ್ದಾನೆ. ಆದರೆ, ಪ್ರೀತಿ ಒಪ್ಪಲು ಬಾಲಕಿ ನಿರಾಕರಿಸಿದ್ದರಿಂದ ಮೊದಲೇ ತಂದಿದ್ದ ಆ್ಯಸಿಡ್‌ನಿಂದ ದಾಳಿ ಮಾಡಿದ್ದಾನೆ. ಇದರಿಂದ ಬಾಲಕಿ ಕಣ್ಣಿನ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: Pathaan Movie: ಪಠಾಣ್‌ಗೆ ಕೊನೆಗೂ ಜಯ; ʻಬೇಷರಮ್ ರಂಗ್ʼ ಹಾಡಿನ ನಿರ್ಬಂಧಕ್ಕೆ ಸಲ್ಲಿಸಿದ್ದ ಅರ್ಜಿ ವಜಾ
ಈ ಹಿಂದೆಯೂ ಹಲವು ಬಾರಿ ಬಾಲಕಿಗೆ ಪ್ರೀತಿಸುವಂತೆ ಸುಮಂತ್ ಒತ್ತಾಯಿಸಿದ್ದ ಎನ್ನಲಾಗಿದೆ. ಕನಕಪುರ ಟೌನ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಆ್ಯಸಿಡ್ ದಾಳಿಕೋರನನ್ನು ಪೊಲೀಸರು ಬಂಧಿಸಿ, ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಸಿನಿಮಾ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ