Site icon Vistara News

Acid attack: ನಾಯಿ ಬೊಗಳಿದ್ದಕ್ಕೆ ಮಾಲೀಕನಿಗೆ ಆ್ಯಸಿಡ್‌ ಎರಚಿದ ದುರುಳ

Man throws acid on owner for barking dog

ಚಿಕ್ಕಮಗಳೂರು: ಸಾಕು ನಾಯಿಯೊಂದು ಒಂದೇ ಸಮನೇ ಬೊಗಳತ್ತಿತ್ತು. ಶ್ವಾನದ ಮಾಲೀಕರು ಹಲವಾರು ಬಾರಿ ಗದರಿಸಿದರೂ ಸುಮ್ಮನಾಗಲಿಲ್ಲ. ಇದರಿಂದ ಸಿಟ್ಟಿಗೆದ್ದ ಶ್ವಾನದ ಮಾಲೀಕರು ಬೈಯಲು ಶುರು ಮಾಡಿದ್ದರು. ಇದೇ ವೇಳೆ ಅಲ್ಲಿದ್ದ ಪಕ್ಕದ ಮನೆಯವ ತನಗೆ ಬೈಯುತ್ತಿದ್ದಾರೆ ಎಂದು ಭಾವಿಸಿ, ಏಕಾಏಕಿ ಆ್ಯಸಿಡ್‌ (Acid attack) ಅನ್ನು ಮುಖಕ್ಕೆ ಎರಚಿದ್ದಾನೆ.

ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜೇಮ್ಸ್ ಎಂಬಾತ ಸುಂದರ್‌ ರಾಜ್‌ ಅವರಿಗೆ ಆ್ಯಸಿಡ್‌ ದಾಳಿ ನಡೆಸಿದವನು. ಈ ಜೇಮ್ಸ್‌ ಹಾಗೂ ಸುಂದರ್‌ ರಾಜ್‌ ನೆರೆಮನೆಯವರಾದರೂ ಇವರ ಬಾಂಧವ್ಯ ಅಷ್ಟಕಷ್ಟೇ ಇತ್ತು. ಸುಂದರ್‌ ರಾಜ್‌ ಅವರ ಮನೆಯ ಆವರಣಲ್ಲಿ ಕಟ್ಟಿಹಾಕಿದ್ದ ಶ್ವಾನವು ಬೊಗಳುತ್ತಿತ್ತು, ಹೀಗಾಗಿ ಶ್ವಾನಕ್ಕೆ ಬೈಯುತ್ತಿದ್ದರು. ಆಗ ಎದುರಿಗೆ ಬಂದ ಜೇಮ್ಸ್‌ ನಾಯಿ ಹೆಸರಿನಲ್ಲಿ ತನಗೆ ಬೈಯುತ್ತಿದ್ದಾರೆ ಎಂದು ಭಾವಿಸಿದ್ದ. ಸುಂದರಾಜ್‌ ಮೇಲಿನ ಸಿಟ್ಟಿಗೆ ಆ್ಯಸಿಡ್‌ ದಾಳಿ ಮಾಡಿದ್ದಾನೆ.

ಆ್ಯಸಿಡ್‌ ದಾಳಿಗೊಳಗಾಗಿರುವ ಸುಂದರರಾಜ್ ಪರಿಸ್ಥಿತಿ ಗಂಭೀರವಾಗಿದೆ. ಎಡಗಣ್ಣಿಗೆ ಗಂಭೀರ ಗಾಯವಾಗಿದ್ದು, ಕಣ್ಣಿನ ಪದರ ಬದಲಿಸುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಗಾಯಾಳು ಸುಂದರ್ ರಾಜ್ ಶಿವಮೊಗ್ಗದ ಮೆಗ್ಹಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಜೇಮ್ಸ್ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Cyber crime : ಹೈಕೋರ್ಟ್‌ ಲೈವ್‌ ಸ್ಟ್ರೀಮಿಂಗ್‌ನಲ್ಲಿ ಹರಿದಾಡಿದ ಅಶ್ಲೀಲ ದೃಶ್ಯ!

ಶ್ವಾನದ ವಿಚಾರದಲ್ಲಿ ಗಲಾಟೆ; ಮಹಿಳೆಯ ಕಪಾಳಕ್ಕೆ ಹೊಡೆದ ನಿವೃತ್ತ ಐಎಎಸ್ ಅಧಿಕಾರಿ

ನೋಯ್ಡಾ: ಸಾಕುನಾಯಿಯನ್ನು ಲಿಫ್ಟ್‌ನಲ್ಲಿ ಒಯ್ದ ಹಿನ್ನೆಲೆಯಲ್ಲಿ ಮಹಿಳೆ ಮತ್ತು ನಿವೃತ್ತ ಐಎಎಸ್ ಅಧಿಕಾರಿಯೊಬ್ಬನ ನಡುವೆ ವಾಗ್ವಾದ ನಡೆದಿದ್ದು, ಅಧಿಕಾರಿ ಮಹಿಲೆಗೆ ಕಪಾಳಮೋಕ್ಷ ಮಾಡಿದ ಘಟನೆ ನೋಯ್ಡಾದಲ್ಲಿ ನಡೆದಿದೆ. ವಾಗ್ವಾದ ತಾರಕಕ್ಕೇರಿ ಆರ್.ಪಿ.ಗುಪ್ತಾ ಮಹಿಳೆಗೆ ಹೊಡೆದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸದ್ಯ ವಿಡಿಯೊ ವೈರಲ್‌ (Viral Video) ಆಗಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಡಿಯೊದಲ್ಲೇನಿದೆ?

ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಆರ್.ಪಿ.ಗುಪ್ತಾ ಮತ್ತು ಮಹಿಳೆಯ ನಡುವಿನ ಹೊಡೆದಾಟದ ದೃಶ್ಯ ಸೆರೆಯಾಗಿದೆ. ಶ್ವಾನವನ್ನು ಲಿಫ್ಟ್‌ನಲ್ಲಿ ಕರೆ ತಂದಿರುವುದಕ್ಕೆ ಗುಪ್ತಾ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕುಪಿತರಾದ ಮಹಿಳೆ ವಾಗ್ವಾದಕ್ಕಿಳಿದರು. ಇಡೀ ಘಟನೆಯನ್ನು ರೆಕಾರ್ಡ್ ಮಾಡಲು ಗುಪ್ತಾ ಮುಂದಾದಾಗ ಮಹಿಳೆ ತಡೆಯಲು ಯತ್ನಿಸುತ್ತಾರೆ. ಮೊಬೈಲ್‌ ಕಸಿದುಕೊಳ್ಳಲು ಆ ಮಹಿಳೆ ಮುಂದಾದಾಗ ಗುಪ್ತಾ ರೋಷದಿಂದ ಆಕೆಯ ಕೆನ್ನೆಗೆ ಹೊಡೆಯುತ್ತಾರೆ. ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಮಹಿಳೆ ಕೂಡ ತನ್ನ ಕೈಯನ್ನು ಅಡ್ಡ ಹಿಡಿಯುವುದು ವಿಡಿಯೊದಲ್ಲಿ ಕಾಣಬಹುದು. ಬಳಿಕ ಆ ಮಹಿಳೆಯ ಪತಿ ಸ್ಥಳಕ್ಕೆ ಆಗಮಿಸಿ ಗುಪ್ತಾ ಅವರನ್ನು ಥಳಿಸಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ.

ಗೌತಮ್ ಬುದ್ಧ ನಗರ್‌ನ ಪೊಲೀಸ್ ಕಮಿಷನರೇಟ್ ಈ ವಿವಾದದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿವರ ನೀಡಿದೆ. ಶ್ವಾನವನ್ನು ಲಿಫ್ಟ್‌ನಲ್ಲಿ ಕರೆದೊಯ್ಯುವ ವಿಚಾರದಲ್ಲಿ ವಿವಾದ ಆರಂಭವಾಯಿತು. ವಾಗ್ವಾದ ಆರಂಭವಾಗಿ ಎರಡೂ ಕಡೆಯವರಿಂದ ಪರಸ್ಪರ ಹಲ್ಲೆ ನಡೆದಿದೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

“ಜಗಳ ನಡೆದ ಎರಡೂ ಕಡೆಯವರ ಜತೆ ಚರ್ಚೆ ನಡೆಯುತ್ತಿದೆ. ನೋಯ್ಡಾ ಮಾಯಾ ಪೊಲೀಸ್ ಠಾಣೆಯ ಉಸ್ತುವಾರಿ ಮಾತುಕತೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಎರಡೂ ಕಡೆಯವರ ಮಧ್ಯೆ ಜಗಳ ನಡೆದಿದೆ, ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಲಾಗುತ್ತಿದೆ. ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಪೋಸ್ಟ್‌ ತಿಳಿಸಿದೆ.

ಘಟನೆಯ ಹಿನ್ನಲೆ

ಪೊಲೀಸರ ಪ್ರಕಾರ, ಗುಪ್ತಾ ತಮ್ಮ ಫ್ಲ್ಯಾಟ್‌ಗೆ ಹೋಗಲು ಲಿಫ್ಟ್‌ ಒಳಗೆ ಪ್ರವೇಶಿಸಿದಾಗ, ಮಹಿಳೆಯೊಬ್ಬರು ಸಾಕುನಾಯಿಯೊಂದಿಗೆ ನಿಂತಿದ್ದರು. ಬಾಯಿಗೆ ಕವಚ ಹಾಕದಿರುವುದನ್ನು ಗಮನಿಸಿದ ಗುಪ್ತಾ ಶ್ವಾನವನ್ನು ಲಿಫ್ಟ್‌ನಲ್ಲಿ ಕರೆದೊಯ್ಯದಂತೆ ಮಹಿಳೆ ಬಳಿ ಹೇಳಿದರು. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಾಯಿ ಕಡಿತ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ನಿಯಮಗಳನ್ನು ಜಾರಿಗೆ ತರಲಾಗಿದೆ. ಆದಾಗ್ಯೂ ಹಲವರು ಈ ನಿಯಮಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಕಾನೂನು ಏನು ಹೇಳುತ್ತದೆ?

ಸಾಕು ಪ್ರಾಣಿ ನಿಯಮದ ಪ್ರಕಾರ ನಾಯಿಯನ್ನು ನೋಂದಣಿ ಮಾಡಿಸದಿದ್ದರೆ ಅದರ ಮಾಲೀಕರು 500 ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ನೋಯ್ಡಾ ಪ್ರಾಧಿಕಾರದ ಒಸಿಡಿ(OSD) ಇಂದು ಪ್ರಕಾಶ್ ಸಿಂಗ್ ಹೇಳುತ್ತಾರೆ. ʼʼಕಳೆದ ವರ್ಷದ ಡಿಸೆಂಬರ್‌ನಲ್ಲಿ ನಿಯಮ ಜಾರಿಗೆ ತರಲಾಗಿದ್ದು, ಆ ಪ್ರಕಾರ ಎಲ್ಲರೂ ತಮ್ಮ ಸಾಕುಪ್ರಾಣಿಗಳನ್ನು ನೋಂದಾಯಿಸಬೇಕು. ಮಾರ್ಚ್ 30, 2023ರ ನಂತರ ಸಾಕುಪ್ರಾಣಿಗಳನ್ನು ನೋಂದಾಯಿಸದಿದ್ದರೆ 500 ರೂ.ಗಳ ದಂಡ ವಿಧಿಸಲಾಗುತ್ತದೆʼʼ ಎಂದು ತಿಳಿಸಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಶ್ವಾನದ ನೋಂದಣಿಯಾಗಿದೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version