Site icon Vistara News

Acid attack : ಆ್ಯಸಿಡ್‌ ದಾಳಿ ಸಂತ್ರಸ್ತೆಗೆ ಸಿಎಂ ಸಚಿವಾಲಯದಲ್ಲಿ ಉದ್ಯೋಗ ನೀಡಿದ ಸಿದ್ದರಾಮಯ್ಯ

siddaramaiah help acid attack victim

ಬೆಂಗಳೂರು: ಒಂದು ವರ್ಷದ ಹಿಂದೆ ಆ್ಯಸಿಡ್‌ ನಾಗೇಶ (Acid Nagesh) ಎಂಬಾತನಿಂದ ಆ್ಯಸಿಡ್‌ ದಾಳಿಗೆ (Acid attack) ಒಳಗಾಗಿ ಸಂಕಷ್ಟದಲ್ಲಿದ್ದ ಸ್ನಾತಕೋತ್ತರ ಪದವೀಧರ ಮಹಿಳೆಗೆ ಸಿಎಂ ಸಚಿವಾಲಯದಲ್ಲಿ (CM Secretariat) ಉದ್ಯೋಗ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೂಚನೆ ನೀಡಿದ್ದಾರೆ. ತಮ್ಮ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ಮುಖ್ಯಮಂತ್ರಿಗಳು ಸಂತ್ರಸ್ತೆಯ ಅಹವಾಲನ್ನು ಕೇಳಿ ಸ್ಥಳದಲ್ಲೇ ಉದ್ಯೋಗದ ಭರವಸೆ ನೀಡಿದರು.

2022ರ ಏಪ್ರಿಲ್ 28ರಂದು ಆಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ತೆ ಎಂ.ಕಾಂ ಪದವೀಧರೆ ಆಗಿದ್ದಾರೆ. ಆಕೆಯ ಬದುಕಿಗೆ ದಾರಿ ಮಾಡಿಕೊಡಬೇಕು ಎಂದು ತಂದೆ ಮತ್ತು ತಾಯಿಯ ಜತೆ ಜನತಾ ದರ್ಶನಕ್ಕೆ (Janata Darshana) ಬಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.

ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರಲ್ಲೂ ಉದ್ಯೋಗದ ಮನವಿ ಮಾಡಿದ್ದೆವು. ಅವರು ಭರವಸೆ ನೀಡಿದ್ದರು. ಆದರೆ ಉದ್ಯೋಗ ಮಾತ್ರ ಕೊಡಲಿಲ್ಲ ಎಂದು ಅಳಲು ತೋಡಿಕೊಂಡರು. ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿಗಳು ತಮ್ಮ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.‌

2022ರ ಏಪ್ರಿಲ್‌ 28ರ ಘಟನೆಯ ಹಿನ್ನೆಲೆ ಏನು?

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ಕೋಡಿಯಾಳ ಗ್ರಾಮ ನಾಗೇಶನ ಸ್ವಂತ ಊರು. 2011ರಲ್ಲಿ ಕೋಡಿಯಾಳದಲ್ಲಿ ಅರ್ಚನಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದು, ಆ ವಿಚಾರದಲ್ಲಿಯೂ ಗಲಾಟೆ ಆಗಿ ನಂತರ ನಾಗೇಶ ಹಾಗೂ ಅವನ ಅಣ್ಣ ಬೆಂಗಳೂರಿಗೆ ಬಂದರು. ಇಬ್ಬರೂ ಸೇರಿ ಓಂ ಸಾಯಿ ಗಾರ್ಮೆಂಟ್ಸ್ ಆರಂಭಿಸಿದರು. ನಂತರ ಆಂದ್ರಹಳ್ಳಿಯ ಶೆಡ್‌ ಒಂದರಲ್ಲಿ ಅಗರ್‌ಬತ್ತಿ ಫ್ಯಾಕ್ಟರಿಯನ್ನು ಆರಂಭಿಸಿದ್ದರು. ಆಗ ನಾಗೇಶ ವಾಸವಿದ್ದ ಪಕ್ಕದ ಮನೆಯಲ್ಲಿ ಯುವತಿಯ ಕುಟುಂಬ ವಾಸವಾಗಿತ್ತು. ಆ ವೇಳೆಯಲ್ಲಿ ನಾಗೇಶ್‌ ಜತೆ ಚೆನ್ನಾಗಿ ಮಾತನಾಡುತ್ತಿದ್ದು, ಯುವತಿ ಪ್ರೀತಿಸುತ್ತಿದ್ದಾಳೆ ಎಂದುಕೊಂಡಿದ್ದ. ಇದೇ ವೇಳೆ ಆಕೆ ಓದುತ್ತಿದ್ದ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಆಕೆಯ ಜತೆ ಚೆನ್ನಾಗಿದ್ದ ಸುಹಾಸ್ ಎಂಬಾತನಿಗೂ ಹೆದರಿಸಿ ಆಕೆಯ ತಂಟೆಗೆ ಬರದಂತೆ ಹೆದರಿಸಿದ್ದ. ವಿಷಯ ಯುವತಿಯ ಮನೆಯವರಿಗೆ ಗೊತ್ತಾಗಿ ಆಕೆಯ ದೊಡ್ಡಮ್ಮ ನಾಗೇಶ್‌ಗೆ ಬೈದು ಮನೆ ಖಾಲಿ ಮಾಡಿಸಿದ್ದರು.

ಇದನ್ನೂ ಓದಿ | Acid Attack | 16 ದಿನದಲ್ಲಿ 100 ಪೊಲೀಸರಿಗೆ ಕೆಲಸ ಕೊಟ್ಟ ಆ್ಯಸಿಡ್‌ ನಾಗೇಶ್‌

ಯುವತಿ ಇದ್ದ ಏರಿಯಾ ಖಾಲಿ ಮಾಡಿದ ನಂತರ ಆಲ್ಫೈನ್ ಸರ್ವಿಸ್ ಕಂಪನಿಯಲ್ಲಿ ನಾಗೇಶ ಸೇರಿಕೊಂಡಿದ್ದ. ಈ ವೇಳೆಯನ್ನ ಹಲವು ಬಾರಿ ಭೇಟಿ ಮಾಡಿ ಮಾತನಾಡಿಸಲು ಪ್ರಯತ್ನ ಪಟ್ಟರೂ ಯುವತಿ ನಾಗೇಶ್‌ ಜತೆ ಮಾತನಾಡುತ್ತಾ ಇರುತ್ತರಲಿಲ್ಲ. ಆಕೆಯ ಪ್ರತಿ ವರ್ಷ ಹುಟ್ಟುಹಬ್ಬಕ್ಕೂ ವಿಷ್ ಮಾಡುತ್ತಿದ್ದ ಆ್ಯಸಿಡ್ ನಾಗೇಶ್ ಯುವತಿಯಿಂದ ಯಾವುದೇ ರಿಪ್ಲೈ ಬರುತ್ತಿರಲಿಲ್ಲ. ಈ ಮಧ್ಯೆ 2020 ನಾಗೇಶ್‌ ಕೆಲಸ ಬಿಟ್ಟಿದ್ದ.

ಆ್ಯಸಿಡ್ ಮಾಸ್ಟರ್‌ ಪ್ಲ್ಯಾನ್‌

2020ರಲ್ಲಿ ಯುವತಿ ಕಾಲೇಜಿನಲ್ಲಿ ಯಾರನ್ನೋ ಪ್ರೀತಿಸುತ್ತಿದ್ದಾಳೆ ಎಂದು ನಾಗೇಶ್‌ ತಿಳಿದು ಆಕೆಯ ಮೇಲೆ ಆ್ಯಸಿಡ್ ಎರಚಬೇಕು ಎಂದು ನಿರ್ಧಾರ ಮಾಡಿದ್ದ. ಗೂಗಲ್‌ನಲ್ಲಿ ಸರ್ಚ್‌ ಮಾಡಿದಾಗ ಪೀಣ್ಯದ ದೀಪ್ತಿ ಲ್ಯಾಬ್ಸ್ ಕಂಪನಿಯಲ್ಲಿ ಆ್ಯಸಿಡ್ ಸಿಗುತ್ತದೆ ಎಂದು ನಾಗೇಶನಿಗೆ ತಿಳಿದಿತ್ತು. ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿ ಹೆಸರಲ್ಲಿ 9 ಕೆಜಿ ಸಲ್ಫ್ಯೂರಿಕ್ ಆ್ಯಸಿಡ್ ಆರ್ಡರ್ ಮಾಡಿ ಪಡೆದುಕೊಂಡಿದ್ದ. ಖರೀದಿ ಮಾಡಿ ತಂದಿದ್ದ ಆ್ಯಸಿಡ್ ಅನ್ನು ಪಕ್ಕದ ಮನೆಯ ರಾಮಣ್ಣ ಎಂಬುವವರ ಬಳಿ ಇಟ್ಟಿದ್ದ. ಈ ವೇಳೆ ಆ್ಯಸಿಡ್ ಹಾಕುವ ನಿರ್ಧಾರ ಕೈಬಿಟ್ಟಿದ್ದರಿಂದ ಆ ಎಲ್ಲಾ ಆ್ಯಸಿಡ್ ಅನ್ನೂ ರಾಮಣ್ಣ ನಾಶ ಮಾಡಿದ್ದ. ನಂತರ ನಾಗೇಶ್‌ ಯುವತಿ ಮೇಲಿನ ಪ್ರೀತಿಯಿಂದ ಹುಚ್ಚನಂತಾಗಿ ಆಕೆಯನ್ನು ನೋಡದೇ ಇರಲಾರದ ಸ್ಥಿತಿಗೆ ಬಂದಿದ್ದ.

ಇದನ್ನೂ ಓದಿ | Acid Attack | ಬೆಂಗ್ಳೂರ್‌ To ತಿರುವಣ್ಣಾಮಲೈ: ಆ್ಯಸಿಡ್‌ ನಾಗನ Travel History

ಮಾರ್ಚ್‌ ಮೂರನೇ ವಾರದಲ್ಲಿ ಯುವತಿಯ ಅಕ್ಕನಿಗೆ ಮದುವೆ ನಿಶ್ಚಯ ಆದ ವಿಚಾರ ಗೊತ್ತಾಗಿ ನಾಗೇಶ್‌ ಯುವತಿಯನ್ನು ಕೇಳಲು ಹೋಗಿದ್ದ. ಬೇರೆ ಜಾತಿ ಎಂಬ ಕಾರಣಕ್ಕೆ ಮನೆಯವರು ಬೈದು ಕಳಿಸಿದ್ದರು. ಏಪ್ರಿಲ್ 27ರಂದು ಯುವತಿ ಕೆಲಸ ಮಾಡುತ್ತಿದ್ದ ಮುತ್ತೂಟ್ ಫೈನಾನ್ಸ್ ಬಳಿ ಹೋಗಿ ಮದುವೆ ಆಗುವಂತೆ ಆಕೆಗೆ ಮನವಿ ಕೂಡ ನಾಗೇಶ್‌ ಮಾಡಿಕೊಂಡಿದ್ದ. ಮ್ಯಾನೇಜರ್‌ ಬೈದು ಎಚ್ಚರಿಸಿದ್ದರು ಹಾಗೂ ಅಣ್ಣನಿಗೆ ಕುಟುಂಬಸ್ಥರು ಕರೆ ಮಾಡಿ ಬೈಸಿದ್ದರು ಎಂದಿದ್ದ. ನಂತರ ಅವರ ಮನೆಯವರು ಪುನಃ ಬೈದ ಕಾರಣ ಆಕೆಯ ಮೇಲೆ ದ್ವೇಷ ಹೆಚ್ಚಾಗಿ ನನಗೆ ಸಿಗದವಳು ಬೇರೆ ಯಾರಿಗೂ ಸಿಗಬಾರದು ಎಂದು ತೀರ್ಮಾನಿಸಿ ಬೆಳಗ್ಗೆ ಸಿಬಿಜಡ್ ಬೈಕ್‌ಅಲ್ಲಿ ಫ್ಯಾಕ್ಟರಿ ಬಳಿ ಹೋಗಿ 500 ಗ್ರಾಂ ನ 2 ಆ್ಯಸಿಡ್ ಡಬ್ಬ 2 ಹ್ಯಾಂಡ್ ಗ್ಲೌಸ್‌ಗಳನ್ನು ತೆಗೆದುಕೊಂಡು ಬಂದಿದ್ದ.

ಇದನ್ನೂ ಓದಿ | Acid Attack | ಆ್ಯಸಿಡ್‌ ನಾಗನಿಗೆ ಅತಿ ಬುದ್ಧಿವಂತಿಕೆಯೇ ಮುಳುವಾಯ್ತಾ?

ಆ್ಯಸಿಡ್ ಎರಚಿಯೇ ಬಿಟ್ಟ ನಾಗೇಶ್‌

ಯುವತಿ ತಂದೆ ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗುವುದನ್ನ ಕಂಡು ಅವರನ್ನ ನಾಗೇಶ್‌ ಹಿಂಬಾಲಿಸಿ ಆಕೆಯ ತಂದೆ ಡ್ರಾಪ್ ಮಾಡಿ ತೆರಳಿದ ನಂತರ ಫರ್ಸ್ಟ್ ಪ್ಲೋರ್ ಸ್ಟೇರ್ ಕೇಸ್ ಬಳಿ ನಿಂತಿದ್ದಾಗ ನಾಗೇಶ್‌ ಆ್ಯಸಿಡ್ ಡಬ್ಬ ಹಿಡಿದುಕೊಂಡು ಹೋಗಿ ಕೂಡಲೆ ಆಕೆಯ ಮೇಲೆ ಆ್ಯಸಿಡ್ ಎರಚಲು ಆರಂಭಿಸಿದ. ನಂತರ ಆಕೆ ಕಿರುಚಿಕೊಂಡು ಮೆಟ್ಟಿಲು ಇಳಿದುಕೊಂಡು ರ‍್ಯಾಂಪ್‌ ಮೇಲೆ ಕುಳಿತುಕೊಂಡಾಗ ಯುವತಿಯ ತಲೆ, ಬೆನ್ನು, ಕೈ ಮತ್ತು ಕಾಲುಗಳ ಮೇಲೆ ಸುರಿದ. ಈ ವೇಳೆ ನಾಗೇಶನಿಗೂ ಆ್ಯಸಿಡ್ ತಗುಲಿ ಬಲಗೈಗೆ ಸುಟ್ಟ ಗಾಯಗಳಾದವು. ನಂತರ ಅಲ್ಲಿಂದ ಓಡಿ ಹೋದ.

ನಂತರ ಲಗ್ಗೆರೆ ಬಳಿ ಹೋಗಿ ಅಣ್ಣ ರಮೇಶ್ ಬಾಬುಗೆ ಪೋನ್ ಮಾಡಿದ ನಾಗೇಶ್‌, ಆ ಹುಡುಗಿ ಮೇಲೆ ಆ್ಯಸಿಡ್ ಹಾಕಿದ್ದೇನೆ ಎಂದು ತಿಳಿಸಿದ. ಇದಕ್ಕೆ ಕೋಪಗೊಂಡ ಅಣ್ಣ, ಹೋಗಿ ಕೋರ್ಟ್‌ಗೆ ಹಾಗೂ ಪೊಲೀಸರಿಗೆ ಸರೆಂಡರ್‌ ಆಗು ಎಂದು ಹೇಳಿದ್ದಾನೆ. ಲಾಯರ್‌ ಸಹ, ಸ್ಟೇಷನ್‌ಗೆ ಹೋಗಿ ಸರೆಂಡರ್ ಆಗುವಂತೆ ತಿಳಿಸಿದ್ದರು. ಪ್ರಸನ್ನ ಎಂಬ ಮತ್ತೊಬ್ಬ ವಕೀಲರನ್ನ ಭೇಟಿ ಮಾಡಿದಾಗಲೂ ಅವರು ಸರೆಂಡರ್ ಆಗಲು ತಿಳಿಸಿದರು. ಎಫ್ಐಆರ್ ಆಗದೆ ಸರೆಂಡರ್ ಆಗಲು ಸಾಧ್ಯವಿಲ್ಲ, ಪೊಲೀಸ್ ಸ್ಟೇಷನ್‌ಗೆ ಹೋಗುವಂತೆ ನಾಗೇಶ್‌ಗೆ ಹೇಳಿದ್ದರು.

ಪೊಲೀಸ್ ಒಪರೇಷನ್‌ ಸಕ್ಸಸ್‌

ಕೋರ್ಟ್‌ನಿಂದ ಹೊಸಕೋಟೆ ಕಡೆ ಹೊರಟ ನಾಗೇಶ್‌, ನಂತರ ಮೊಬೈಲ್ ಹಾಗೂ ಸಿಮ್ ಕಾರ್ಡ್ ಬೇರ್ಪಡಿಸಿ ಬೇರೆ ಬೇರೆ ಜಾಗದಲ್ಲಿ ಎಸೆದು ಮಾಲೂರಿನಿಂದ ವೇಲೂರು ತಲುಪಿದ. ರಾತ್ರಿ 10.30ರ ವೇಳೆಗೆ ತಿರುವಣ್ಣಮಲೈಗೆ ಹೋಗಿ, ಅರುಣಾಚಲ ದೇವಾಲಯದ ಬಳಿ ಮಲಗಿದ. ಪೊಲೀಸರ ಕೈಗೆ ಸಿಗಬಾರದು ಎಂದು ಕಾವಿ ವೇಷ ಧರಿಸಿಕೊಂಡು ರಮಣ ಆಶ್ರಮದಲ್ಲಿ ಪ್ರತಿದಿನ ಧ್ಯಾನ ಮಾಡಿಕೊಂಡಿದ್ದ. ದೇವಾಲಯದ ಬಳಿ ಸಾರ್ವಜನಿಕರು ನೀಡುತ್ತಿದ್ದ ಆಹಾರ ಸೇವಿಸಿಕೊಂಡು ಇದ್ದ. ಇವಿಷ್ಟೂ ನಾಗೇಶ ನೀಡಿರುವ ಹೇಳಿಕೆ.

ಸತತ 16 ದಿನಗಳ ಕಾಲ ನಾಗೇಶ್‌ ಪೊಲೀಸರನ್ನು ಯಾಮಾರಿಸಿದ್ದ. ಆತನನ್ನು ಹುಡುಕಲು ಪೊಲೀಸರು ಮಾಡಿದ ತಂತ್ರಗಳು ಒಂದೆರಡಲ್ಲ. Acid Attack ಪ್ರಕರಣವನ್ನು ಭೇದಿಸಲು ತಮ್ಮ ಹಳೇ ಬೇಸಿಕ್ ಪೊಲೀಸಿಂಗ್ ಮೊರೆ  ಹೋಗಿ ನಾಗೇಶ್‌ನನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರು ಅದಾಗಲೇ ಎಲ್ಲ ಕಡೆ ಭಿತ್ತಿ ಪತ್ರಗಳನ್ನು ಹಂಚಿಕೊಂಡು ಬಂದಿದ್ದರು. ಹಾಗಾಗಿ ಕಾರಿನ ಚಾಲಕ ನಾಗೇಶನನ್ನು ಗುರುತಿಸಿ ಬಿಟ್ಟಿದ್ದ. ತಕ್ಷಣ ಎಚ್ಚೆತ್ತ ಆತ ಸ್ಥಳೀಯ ಪೊಲೀಸ್‌ ಇನ್‌ಸ್ಪೆಕ್ಟ್‌ರ್‌ಗೆ ಮಾಹಿತಿ ನೀಡಿದ. ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತರುವಾಗ ಪೊಲೀಸರನ್ನು ಯಾಮಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಕಾಲಿಗೆ ಗುಂಡೇಟು ಕೊಟ್ಟ ಪೊಲೀಸರು ಚಿಕಿತ್ಸೆ ಕೊಡಿಸಿ ಈಗ ವಿಚಾರಣೆ ನಡೆಸುತ್ತಿದ್ದಾರೆ.

ಸದ್ಯ ಆರೋಪಿ ಬೆಂಗಳೂರು ಜೈಲಿನಲ್ಲಿದ್ದಾನೆ. ಸಂತ್ರಸ್ತ ಯುವತಿ ಈಗ ಸಂಪೂರ್ಣ ಚೇತರಿಸಿಕೊಂಡಿದ್ದು, ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ನೀಡಲಾಗಿದೆ.

Exit mobile version