Site icon Vistara News

ಬೆಳಗಾವಿ ಅಧಿವೇಶನ | ಒಂದು ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

border-dispute-Karnataka assembly passes resolution agaisnt maharashtra govt

ಬೆಳಗಾವಿ ಸುವರ್ಣಸೌಧ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಅತ್ಯಗತ್ಯವಿರುವ ಸುಮಾರು 1 ಲಕ್ಷ ಹುದ್ದೆಗಳ ಭರ್ತಿಗೆ ಪ್ರಸಕ್ತ ವರ್ಷದಲ್ಲಿಯೇ ಕ್ರಮವಹಿಸಲಾಗುವುದು. ಈಗಾಗಲೇ 11 ಸಾವಿರ ಸಫಾಯಿ ಕರ್ಮಚಾರಿಗಳ ನೇಮಕಾತಿಯಾಗಿದೆ. 12 ಸಾವಿರ ಸಫಾಯಿ ಕರ್ಮಚಾರಿಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನ ಪರಿಷತ್ತಿನಲ್ಲಿ ಕಲಾಪದಲ್ಲಿಂದು ಸದಸ್ಯರಾದ ಸಿ ಎನ್ ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸುತ್ತ ಮುಖ್ಯಮಂತ್ರಿಗಳು ಈ ಮಾಹಿತಿ ನೀಡಿದರು. ರಾಜ್ಯದಲ್ಲಿ ಒಟ್ಟು 7 ಲಕ್ಷ 60 ಸಾವಿರ ಮಂಜೂರಾಗಿವೆ. ಇದರಲ್ಲಿ 5 ಲಕ್ಷ 11 ಸಾವಿರ ಹುದ್ದೆಗಳಲ್ಲಿ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಸುಮಾರು 2 ಲಕ್ಷ 50 ಸಾವಿರ ಹುದ್ದೆಗಳು ಖಾಲಿ ಇವೆ. ರಾಜ್ಯದಾದ್ಯಂತ ವಿವಿಧ ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳ ಪೈಕಿ ಶೇ.34 ರಷ್ಟು ಹುದ್ದೆಗಳು ಖಾಲಿ ಇವೆ. ಆದಾಗ್ಯೂ, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಖಾಲಿಯಿರುವ ಹುದ್ದೆಗಳಲ್ಲಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ದೈನಂದಿನ ನಿರ್ವಹಿಸಲು ವ್ಯವಸ್ಥೆ ಕೆಲಸ-ಕಾರ್ಯಗಳನ್ನು ನಿರ್ವಹಿಸಲು ಮಾಡಲಾಗಿರುತ್ತದೆ. ಇದರಿಂದಾಗಿ ಸಾರ್ವಜನಿಕರ ಕೆಲಸ-ಕಾರ್ಯಗಳು ವಿಳಂಬವಾಗುತ್ತಿರುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

82,700 ಹುದ್ದೆಗಳ ಹೊರಗುತ್ತಿಗೆ ಭರ್ತಿಗೆ ಕ್ರಮ

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್-ಸಿ ವೃಂದದ ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಮತ್ತು ವಾಹನ ಚಾಲಕರು ಹಾಗೂ ಗ್ರೂಪ್-ಡಿ ವೃಂದದಲ್ಲಿನ ಖಾಲಿ ಹುದ್ದೆಗಳಿಗೆ ಎದುರಾಗಿ ಹೊರಗುತ್ತಿಗೆ ಆಧಾರದ ಮೇರೆಗೆ ಸುಮಾರು 82,700 ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಕಾಡಾನೆ ದಾಳಿಗೆ ಬಲಿಯಾದವರ ಕುಟುಂಬಕ್ಕೆ ಇನ್ನು 15 ಲಕ್ಷ ರೂ. ಪರಿಹಾರ, 3 ಜಿಲ್ಲೆಯಲ್ಲಿ ಟಾಸ್ಕ್‌ಫೋರ್ಸ್‌

Exit mobile version