ತುಮಕೂರು: ಒಂದೇ ದಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರ ಸಾವು ಪ್ರಕರಣ ಸಂಬಂಧ ನಿರ್ಲಕ್ಷ್ಯ ಆರೋಪದಲ್ಲಿ ಪಾವಗಡ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ (Pavagada govt hospital) ಆಡಳಿತ ವೈದ್ಯಾಧಿಕಾರಿ, ಅರಿವಳಿಕೆ ತಜ್ಞೆ ಸೇರಿ 7 ಮಂದಿಯ ತಲೆದಂಡವಾಗಿದೆ. ಆಡಳಿತ ವೈದ್ಯಾಧಿಕಾರಿ ವರ್ಗಾವಣೆಗೊಂಡಿದ್ದು, ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಮೂವರು ಸಿಬ್ಬಂದಿ ವಜಾಗೊಂಡಿದ್ದಾರೆ.
ಈ ಬಗ್ಗೆ ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಬಗ್ಗೆ ತುಮಕೂರು ಜಿಲ್ಲಾ ನೋಡಲ್ ಅಧಿಕಾರಿಗಳಾದ SIHWF ಉಪ ನಿರ್ದೇಶಕಿ ಡಾ. ಚಂದ್ರಕಲಾ ಮತ್ತು ಉಪ ನಿರ್ದೇಶಕಿ ಡಾ. ಚಂದ್ರಿಕಾ ಅವರಿಂದ ಪ್ರಾಥಮಿಕ ತನಿಖಾ ವರದಿಯನ್ನು ಪಡೆದು, ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯತೆಯ ಆಧಾರದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಪಾವಗಡ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ಅರಿವಳಿಕೆ ತಜ್ಞರಾದ ಡಾ. ನಮ್ರತಾ ಅವರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಿ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಅದೇ ರೀತಿ ಆಸ್ಪತ್ರೆಯ ಕಾಯಂ ಶುಶ್ರೂಷಕಿಯರಾದ ನಾಗರತ್ನಮ್ಮ ಕೆ., ಮಾರಕ್ಕ ಬಿ. ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಇನ್ನು NHM ವೈದ್ಯರು ಹಾಗೂ ಸಿಬ್ಬಂದಿಯಾದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಪೂಜಾ, ಶುಶ್ರೂಷಣಾ ಅಧಿಕಾರಿ ಪದ್ಮಾವತಿ ಜಿ. ಮತ್ತು OT ತಂತ್ರಜ್ಞ ಕಿರಣ್ ಬಿ.ಆರ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ಆಡಳಿತ ವೈದ್ಯಾಧಿಕಾರಿ ವರ್ಗಾವಣೆ
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಮಕ್ಕಳ ತಜ್ಞರಾದ ಡಾ. ಕಿರಣ್. ಜಿ ಅವರನ್ನು ಬೇರೆಡೆಗೆ ನಿಯೋಜನೆಗೊಳಿಸಿ ಅವರ ಸ್ಥಾನಕ್ಕೆ CHC ಹೊಸಕೋಟೆ ಮಕ್ಕಳ ತಜ್ಞ ಡಾ. ಕಿರಣ್ ಕುಮಾರ್ ಎಂಎನ್. ಅವರನ್ನು ನಿಯೋಜಿಸಲಾಗಿದೆ. ಪಾವಗಡ ಆಸ್ಪತ್ರೆಯ ಪ್ರಭಾರ ಆಡಳಿತ ವೈದ್ಯಾಧಿಕಾರಿಗಳಾಗಿ ಪ್ರಸೂತಿ ತಜ್ಞರಾದ ಡಾ.ಎ.ಎಸ್.ಎಲ್. ಬಾಬು ಅವರನ್ನು ನೇಮಿಸಲಾಗಿದೆ.
ಘಟನೆಯ ಬಗ್ಗೆ ವಿಸ್ತ್ರತ ಉನ್ನತ ಮಟ್ಟದ ತನಿಖೆ ನಡೆಸಲು ಆರೋಗ್ಯ ಮತ್ತು ಕುಟುಂಬ ಸೇವೆಗಳ ನಿರ್ದೇಶಕರಾದ ಡಾ. ಪುಷ್ಪಲತಾ, ಯೋಜನಾ ನಿರ್ದೇಶಕರಾದ ಡಾ. ಶ್ರೀನಿವಾಸ್ ಮತ್ತು ಉಪನಿರ್ದೇಕರಾದ ಡಾ. ಚಂದ್ರಿಕಾ ಅವರನ್ನು ನೇಮಿಸಲಾಗಿದೆ.
ಇದನ್ನೂ ಓದಿ | Road Accident : ಲಾರಿ ಧಾವಂತಕ್ಕೆ ಬೈಕ್ ಪುಡಿಪುಡಿ; ನಡುರಸ್ತೆಯಲ್ಲಿ ನರಳಾಡಿ ಪ್ರಾಣ ಬಿಟ್ಟ ಮೂವರು
ತನಿಖಾ ತಂಡ ಭೇಟಿ ನೀಡಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ರೋಗಿಗಳಿಗೆ ಸೋಂಕು ಹರಡಿರುವುದು ತಿಳಿದುಬಂದಿದೆ. ಶಸ್ತ್ರಚಿಕಿತ್ಸಾ ಕೊಠಡಿ ಧೂಮೀಕರಣ ಮಾಡದಿದ್ದಾಗ ಅಥವಾ ಶಸ್ತ್ರಚಿಕಿತ್ಸೆಗೆ ಬಳಸುವ ಸಲಕರಣೆಗಳನ್ನು ಆಟೋ ಕ್ಲೇವ್ ಮಾಡದೇ ಇದ್ದ ಸಂದರ್ಭದಲ್ಲಿ ಸೋಂಕು ಹರಡುತ್ತದೆ. ಹೀಗಾಗಿ ವೈದ್ಯರು, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮವಾಗಿದೆ.
ಏನಿದು ಪ್ರಕರಣ?
ಸಂತಾನಶಕ್ತಿ ಹರಣ ಸೇರಿ ವಿವಿಧ ಶಸ್ತ್ರಚಿಕಿತ್ಸೆಗೆ (Sterilisation surgery) ಒಳಗಾಗಿದ್ದ ಮೂವರು ಮಹಿಳೆಯರು ಒಂದೇ ವಾರದಲ್ಲಿ (Medical Negligence) ಮೃತಪಟ್ಟಿದ್ದರು. ಮಹಿಳೆಯರ ಸಾವಿಗೆ ಪಾವಗಡ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ರಾಜವಂತಿ ಗ್ರಾಮದ ಅಂಜಲಿ (25), ಬ್ಯಾಡನೂರು ಗ್ರಾಮದ ನರಸಮ್ಮ (40) ಹಾಗೂ ವೀರಲಗೊಂದಿ ಗ್ರಾಮದ ಅನಿತಾ (30) ಎಂಬುವವರು ಮೃತಪಟ್ಟಿದ್ದರು.
ಈ ಮೂವರು ಫೆ.22 ರಂದು ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದರು. ಆ ದಿನವೇ ಅನಿತಾ ಫೆ.22 ರಂದು ಮೃತಪಟ್ಟರೆ, ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಅಂಜಲಿ ಹಾಗೂ ನರಸಮ್ಮ ಎಂಬುವವರು ಫೆ.25ರಂದು ಮೃತಪಟ್ಟಿದ್ದರು. ವೈದ್ಯರ ನಿರ್ಲಕ್ಷ್ಯದಿಂದಲೇ ಮೂವರು ಮಹಿಳೆಯರು ಮೃತಪಟ್ಟಿರುವ ಆರೋಪ ಕೇಳಿ ಬಂದಿತ್ತು. ರೊಚ್ಚಿಗೆದ್ದ ಕುಟುಂಬಸ್ಥರು ಪಾವಗಡ ಪಟ್ಟಣದ ಬಳ್ಳಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು, ಮೃತರ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದರು. ಹೀಗಾಗಿ ಸಿಬ್ಬಂದಿ ವಿರುದ್ಧ ಮೇಲಧಿಕಾರಿಗಳು ಕ್ರಮ ಜರುಗಿಸಿದ್ದಾರೆ.