Site icon Vistara News

Chetan Ahimsa: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಟ ಚೇತನ್ ಆಗ್ರಹ; ಆ.28ಕ್ಕೆ ಕಾಂಗ್ರೆಸ್ ಹಠಾವೋ, ದಲಿತ ಬಚಾವೋ ಹೋರಾಟ

Actor Chetan Ahimsa

ಚಿಕ್ಕಬಳ್ಳಾಪುರ: ದಲಿತರು, ಶೋಷಿತರಿಗೆ ನ್ಯಾಯ ಒದಗಿಸುತ್ತೇವೆ ಎಂದು ಬಣ್ಣದ ಬಣ್ಣದ ಮಾತುಗಳನ್ನಾಡುತ್ತಾರೆ. ನಾನು ಬಸವ ಅನುಯಾಯಿ, ಅಂಬೇಡ್ಕರ್ ವಾದಿ ಎನ್ನುತ್ತಾರೆ. ಸಿದ್ದರಾಮಯ್ಯ ಟೋಕನಿಸಂ ರೀತಿ ಸಾಂಕೇತಿಕವಾಗಿ ಮಾತನಾಡುತ್ತಾರೆ. ಆದರೆ ಅಂಬೇಡ್ಕರ್, ಬಸವಣ್ಣನವರ ತತ್ವದ ವಿರುದ್ಧವಾಗಿದ್ದಾರೆ. ಮಾಡಬೇಕಾದುದನ್ನೆಲ್ಲ ಮಾಡುತ್ತಿಲ್ಲ, ಮಾಡಬಾರದ್ದನ್ನು ಮಾಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ನಟ ಚೇತನ್ ಅಹಿಂಸಾ (Actor Chetan Ahimsa) ಆಗ್ರಹಿಸಿದ್ದಾರೆ.

ಕರ್ನಾಟಕ ಅಹಿಂದ ಸಂಘಟನೆಯ ಒಕ್ಕೂಟದಿಂದ ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಹಾಗೂ ಆದಿವಾಸಿಗಳ 25 ಸಾವಿರ ಕೋಟಿ ಹಣಕ್ಕೆ ತೇಪೆ ಹಚ್ಚುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ದುರ್ಬಳಕೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇನ್ನು ಆದಿವಾಸಿ ವಿರೋಧಿ, ದಲಿತ ವಿರೋಧಿ ಧೋರಣೆ ಗಟ್ಟಿಗೊಳಿಸುತ್ತಿದ್ದಾರೆ. ಹೀಗಾಗಿ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಇದೇ ವಿಚಾರದಲ್ಲಿ ಖಂಡಿಸಿದ್ದೇನೆ, ಜೈಲಿಗೂ ಹೋಗಿಬಂದಿದ್ದೇನೆ. ಬಿಜೆಪಿಯ ಕೋಮುವಾದವನ್ನ ನಾವು ಒಪ್ಪಲ್ಲ. ಅಸಮಾನತೆ ತೋರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಪಕ್ಷಗಳನ್ನು ವಿರೋಧಿಸುತ್ತೇನೆ. ಯಾರು ಉತ್ತಮ ಆಡಳಿತ ಕೊಡುತ್ತಾರೋ ಅವರಿಗೆ ಬೆಂಬಲ ಕೊಡುತ್ತೇನೆ. ನಟ ಚೇತನ್ ಹೇಳಿಕೆ..

ಇದನ್ನೂ ಓದಿ | CLP Meeting: ಆ.22ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ

ಬೇರೆಯವರಿಗೆ ಅವಕಾಶ ನೀಡಲಿ

ಸಿಎಂ ಸಿದ್ದರಾಮಯ್ಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಚೇತನ್‌ ಅಹಿಂಸಾ ಅವರು, ಕಳೆದ ಒಂದು ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಜನರನ್ನು ವಿಫಲಗೊಳಿಸಿದ್ದಾರೆ.
ಬಡವರು, ದಲಿತರು, ಆದಿವಾಸಿಗಳು, ರೈತರು, ಕನ್ನಡ ಹಕ್ಕುಗಳು, ಭ್ರಷ್ಟಾಚಾರ ವಿರೋಧಿ ಮತ್ತು ಇನ್ನೂ ಹೆಚ್ಚಿನವರಿಗೆ ನೋವುಂಟು ಮಾಡುವ ನೀತಿಗಳನ್ನು ಸಕ್ರಿಯವಾಗಿ ತರುವ ಮೂಲಕ ಅವರು ಈಗಾಗಲೇ ಅನ್ಯಾಯದ ವ್ಯವಸ್ಥೆಯನ್ನು ಹೆಚ್ಚು ಅನ್ಯಾಯದಂತೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ 6 + ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದ್ದಾರೆ. ಅವರು ರಾಜೀನಾಮೆ ನೀಡಲಿ ಮತ್ತು ಬೇರೆಯವರಿಗೆ ಅವಕಾಶ ನೀಡಲಿ ಎಂದು ಒತ್ತಾಯಿಸಿದ್ದಾರೆ.

ಆ.28ರಂದು ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಹಠಾವೋ, ದಲಿತ ಬಚಾವೋ ಹೋರಾಟ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆ.28ರಂದು ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಹಠಾವ್ ದಲಿತ್ ಬಚಾವೋ ಬೃಹತ್ ಪ್ರತಿಭಟನೆಯನ್ನು ಕಾರ್ಯಕ್ರಮ ನಡೆಯಲಿದೆ. ಕಾಂಗ್ರೆಸ್ ಅಳಿಸಿ, ದಲಿತರನ್ನು ಉಳಿಸಿ ಎಂಬ ಘೋಷವಾಕ್ಯದಡಿ ಬೃಹತ್ ಪ್ರತಿಭಟನೆ ಮಾಡುತ್ತಿದ್ದು, ದಲಿತ ವಿರೋಧಿಗಳಾದರೆ, ಕಾಂಗ್ರೆಸ್ ಆಗಲಿ ಬಿಜೆಪಿ ಆಗಲಿ, ಜೆಡಿಎಸ್ ಆಗಲಿ ಅವರನ್ನೂ ವಿರೋಧಿಸುತ್ತೇವೆ. ಎಲ್ಲಾ ಸಮಾನತಾವಾದಿಗಳು ನಮ್ಮೊಂದಿಗೆ ಸೇರಬೇಕು ಎಂದು ನಟ ಚೇತನ್‌ ಹೇಳಿದರು.

Exit mobile version