ಬೆಂಗಳೂರು: ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಬಂಧಿತರಾಗಿದ್ದ ನಟ ಚೇತನ್ ಅಹಿಂಸಾ (Actor Chetan Ahimsa) ಅವರಿಗೆ ಬೆಂಗಳೂರಿನ 32ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಗುರುವಾರ ರಾತ್ರಿ ಚೇತನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
25 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಭದ್ರತೆ ಮೇರೆಗೆ ಜಾಮೀನು ನೀಡಲು ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜೆ. ಲತಾ ಅವರು ಆದೇಶ ಹೊರಡಿಸಿದ್ದಾರೆ. ಹಿಂದುತ್ವ, ರಾಮಮಂದಿರ ಕುರಿತು ಆಕ್ಷೇಪಾರ್ಹವಾಗಿ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಶಿವಕುಮಾರ್ ಎಂಬುವರು ದೂರು ನೀಡಿದ ಕಾರಣ ಮಾರ್ಚ್ 21ರಂದು ಚೇತನ್ ಅವರನ್ನು ಬಂಧಿಸಲಾಗಿತ್ತು.
ಚೇತನ್ ಟ್ವೀಟ್ ಮಾಡಿದ್ದೇನು?
ಚೇತನ್ ಅವರು ಹಿಂದುವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎಂದು ಹೇಳಿ ಪೋಸ್ಟ್ ಮಾಡಿದ್ದರು.
ಸಾವರ್ಕರ್ ಹೇಳಿಕೆ: ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ‘ರಾಷ್ಟ್ರ’ ಪ್ರಾರಂಭವಾಯಿತು- ಇದು ಒಂದು ಸುಳ್ಳು, 1992ರಲ್ಲಿ: ಬಾಬರಿ ಮಸೀದಿ ‘ರಾಮನ ಜನ್ಮ ಭೂಮಿ’ -> ಇದು ಒಂದು ಸುಳ್ಳು, ಈಗ 2023ರಲ್ಲಿ: ಉರಿಗೌಡ ಮತ್ತು ನಂಜೇ ಗೌಡರು ಟಿಪ್ಪುವನ್ನು ಕೊಂದರು -> ಇದೂ ಕೂಡ ಒಂದು ಸುಳ್ಳು ಎಂಬುದಾಗಿ ನಟ ಚೇತನ್ ಟ್ವೀಟ್ ಮಾಡಿದ್ದರು.
ಸದಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ನಟ ಚೇತನ್ ಅವರ ಟ್ವೀಟ್‌ಗೆ ರಾಜ್ಯಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು. ಹೀಗೆ ವಿವಾದಾತ್ಮಕ ಹೇಳಿಕೆ ನೀಡಿ ಇದಕ್ಕೂ ಮೊದಲು ಕೂಡ ಅವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: Actor Chetan Ahimsa : ಹಿಂದು ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್; ನಟ ಚೇತನ್ ಅಹಿಂಸಾ ಅರೆಸ್ಟ್