ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಸೋಮವಾರ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದರು. ಇವರಷ್ಟೇ ಅಲ್ಲದೇ ದರ್ಶನ್ ಆಪ್ತ ವಿನೋದ್ ಪ್ರಭಾಕರ್ ಕೂಡ ಸ್ನೇಹಿತರ ಜತೆ ಆಗಮಿಸಿ ಭೇಟಿ ಮಾಡಿದರು.
ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಕಪ್ಪು ಬಣ್ಣದ ಕಿಯಾ ಕಾರಿನಲ್ಲಿ ಆಗಮಿಸಿದ್ದರು. ಮೊದಲು ಜೈಲಿನ ಚೆಕ್ ಪೋಸ್ಟ್ ಸಮೀಪ ಕಾರು ನಿಲ್ಲಿಸಲಾಗಿತ್ತು. ಆಗ ಮಾಧ್ಯಮಗಳ ಕ್ಯಾಮೆರಾ ಕಂಡು ವಿಜಯಲಕ್ಷ್ಮಿ, ವಿನೀಶ್ ವಾಪಸ್ ತೆರಳಿದರು. ನಂತರ ಬೇರೊಂದು ಕಾರಿನಲ್ಲಿ ಜೈಲಿನ ಬಳಿ ಬಂದರು. ಆಗ ಮಾಧ್ಯಮಗಳ ಕಣ್ತಪ್ಪಿಸಿ ಜೈಲಿನ ಒಳಗೆ ದರ್ಶನ್ ಪತ್ನಿ, ಪುತ್ರನನ್ನು ಪೊಲೀಸರು ಕರೆದೊಯ್ದರು.
ಇನ್ನು ಜೈಲಿನಲ್ಲಿದ್ದರೂ ನಟ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನಲಾಗಿದೆ. ಸಾಮಾನ್ಯ ಕೈದಿಗಳನ್ನು ಭೇಟಿಯಾಗಲು ಬಂದರೆ ನೂರೊಂದು ಕಂಡಿಷನ್ಸ್ ವಿಧಿಸುವ ಪೊಲೀಸರು, ಸೆಲೆಬ್ರಿಟಿ, ರಾಜಕಾರಣಿಗಳು, ಬಲಾಢ್ಯರಿಗೆ ರಾಜಾತಿಥ್ಯ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ದರ್ಶನ್ ಮೌನವಾಗಿದ್ರು, ಏನೂ ಮಾತನಾಡಲಿಲ್ಲ: ವಿನೋದ್ ಪ್ರಭಾಕರ್
ದರ್ಶನ್ ಪತ್ನಿ, ಪುತ್ರ ಭೇಟಿ ಮಾಡಿ ಹೊರಟ ಬಳಿಕ, ನಟ ವಿನೋದ್ ಪ್ರಭಾಕರ್ ಅವರು ಸ್ನೇಹಿತರ ಜತೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ನಿರ್ಗಮಿಸಿದರು. ನಂತರ ಮಾತನಾಡಿದ ವಿನೋದ್ ಪ್ರಭಾಕರ್ ಅವರು, ಮೃತ ರೇಣುಕಾ ಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿ ಭಗವಂತ ನೀಡಲಿ. ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದರು.
ದರ್ಶನ್ ಅವರನ್ನು ಭೇಟಿ ಮಾಡಿ ನಾಲ್ಕು ತಿಂಗಳು ಆಗಿತ್ತು. ಅವರ ಹುಟ್ಟುಹಬ್ಬದಂದು ಭೇಟಿ ಮಾಡಿದ್ದೆ. ಮಾಧ್ಯಮಗಳಲ್ಲಿ ಬರುವುದನ್ನು ನೋಡಿ ವಿಚಾರ ತಿಳಿದುಕೊಂಡೆ, ಪೊಲೀಸ್ ಸ್ಟೇಷನ್ ಹತ್ತಿರ ಹೋಗಿ ಭೇಟಿಯಾಗಲು ಪ್ರಯತ್ನಪಟ್ಟೆ, ಆದರೆ ಸಾಧ್ಯವಾಗಿರಲಿಲ್ಲ. ಇಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಭೇಟಿ ಮಾಡಿದ್ದೇನೆ. ದರ್ಶನ್ ಅವರು ಮೌನವಾಗಿದ್ದರು, ಏನ್ ಟೈಗರ್ ಅಂತ ಹೇಳಿದರು ಅಷ್ಟೇ… ಅವರಿಗೆ ಶೆಕ್ ಹ್ಯಾಂಡ್ ಮಾಡಿ ಬಂದೆ ಎಂದು ತಿಳಿಸಿದರು.
ಪ್ರಕರಣದ ಬಗ್ಗೆ ಎಲ್ಲೂ ಪ್ರತಿಕ್ರಿಯಿಸಿಲ್ಲ ಎಂಬ ಬಗ್ಗೆ ಸ್ಪಂದಿಸಿ, ಎಲ್ಲಾ ಕಡೆ ವಿನೋದ್ ಪ್ರಭಾಕರ್ ಪೋಸ್ಟ್ ಮಾಡಿಲ್ಲ, ಮಾತನಾಡಿಲ್ಲ ಎನ್ನುತ್ತಿದ್ದರು. ಪೋಸ್ಟ್ ಹಾಕಿ ಈ ಪ್ರಾಬ್ಲಮ್ ಸರಿಹೋಗುತ್ತೆ ಎಂದರೆ ನಾನೇ ಸಾವಿರ ಪೋಸ್ಟ್ ಹಾಕುತ್ತಿದ್ದೆ. ಈ ಪ್ರಕರಣ ಬಹಳ ಗಂಭೀರವಾಗಿದೆ. ಪೊಲೀಸ್ ತನಿಖೆಯಲ್ಲಿ ಕೇಸ್ ಇದೆ. ಏನು ಮಾತನಾಡಬೇಕು ಎನ್ನುವ ಕ್ಲ್ಯಾರಿಟಿ ನನಗಿಲ್ಲ. ಅದಕ್ಕೆ ಅವರನ್ನು ಭೇಟಿ ಮಾಡುವವರೆಗೆ ಮಾತನಾಡಬಾರದು ಅಂದುಕೊಂಡಿದ್ದೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ, ಎಲ್ಲರಿಗೂ ನ್ಯಾಯ ಸಿಗಲಿ ಎಂದರು.
ನ್ಯೂಸ್‌ನಲ್ಲಿ ನೋಡಿದ ಮೇಲೆ ನನಗೆ ಈ ಪ್ರಕರಣದ ಬಗ್ಗೆ ಗೊತ್ತಾಯ್ತು. ಆವತ್ತು ನನಗೆ ನ್ಯೂಸ್ ನೋಡಿ ಶಾಕ್ ಆಯ್ತು, ರೇಣುಕಾಸ್ವಾಮಿ ಫ್ಯಾಮಿಲಿ ಒಂದು ಕಡೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಇತ್ತ ದರ್ಶನ್ ಕುಟುಂಬದ ಜೊತೆಗೆ ಅಭಿಮಾನಿಗಳು ಕೂಡ ನೋವಿನಲ್ಲಿದ್ದಾರೆ. ಯಾರಿಗೆ ಸಾಂತ್ವನ ಹೇಳಬೇಕು ಅಂತ ತಿಳಿಯಲಿಲ್ಲ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಾಗಿ ಮಾತನಾಡಲು ಆಗುತ್ತಿಲ್ಲ. ದರ್ಶನ್ ಭೇಟಿಗೆ ಹೋದಾಗ ಸಾಕಷ್ಟು ಮಂಕಾಗಿದ್ದರು. ಅವರ ಮುಖ ನೋಡಿಕೊಂಡು ಬರಲು ಹೋಗಿದ್ದೆ. ಒಂದು ಕ್ಷಣ ಅವರ ಮುಖ ನೋಡಿ ಶೇಕ್ ಹ್ಯಾಂಡ್ ಮಾಡಿ ಬಂದೆ. ಎಲ್ಲರಿಗೂ ಭಗವಂತ ಒಳ್ಳೆಯದನ್ನ ಮಾಡಲಿ. ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುವುದು ಕಾನೂನಿನಲ್ಲಿದೆ, ನನ್ನ ಪ್ರಕಾರ ಎಲ್ಲರಿಗೂ ಒಳ್ಳೆಯದು ಆಗುತ್ತದೆ ಎಂದು ಹೇಳಿದರು.
ದರ್ಶನ್ ಭೇಟಿಗೆ ಬಂದ ಮಂಗಳಮುಖಿ
ಆರೋಪಿ ನಾಗರಾಜ್ ಭೇಟಿ ಮಾಡಲು ಮಂಗಳಮುಖಿ ನಕ್ಷತ್ರಾ ಎಂಬುವವರು ಆಗಮಿಸಿದ್ದರು. ನಾಗರಾಜ್ ಭೇಟಿ ಮಾಡಿದ ಬಳಿಕ ಮಾತನಾಡಿದ ನಮ್ಮನೆ ಸುಮ್ಮನೆ ಆಶ್ರಮದ ಟ್ರಸ್ಟಿ ನಕ್ಷತ್ರಾ, ದರ್ಶನ್ ಭೇಟಿಯಾಗೋಕೆ ಆಗಲಿಲ್ಲ. ದರ್ಶನ್ ಸ್ನೇಹಿತ ನಾಗರಾಜ್ ಭೇಟಿಯಾದೆ. ನಮ್ಮ ಟ್ರಸ್ಟ್‌ಗೆ ಸಾಕಷ್ಟು ಸಹಾಯ ಮಾಡಿದ್ದರು. ಮಾನವೀಯತೆ ದೃಷ್ಟಿಯಿಂದ ಭೇಟಿ ಆಗಲು ಬಂದಿದ್ದೆ. ಕೇವಲ ಎರಡು ನಿಮಿಷ ಅಷ್ಟೇ ಮಾತನಾಡಲು ಬಿಟ್ಟಿದ್ದರು. ಜಾಸ್ತಿ ಏನೂ ಮಾತಾಡೋಕೆ ಆಗಲಿಲ್ಲ. ನಮ್ಮದೊಂದು ಬಿಲ್ಡಿಂಗ್ ವಿಚಾರವಿತ್ತು, ಅದಷ್ಟೇ ಮಾತಾಡಿದೆವು. ಅವರು ಆರಾಮಾಗಿಯೇ ಮಾತನಾಡಿದರು ಎಂದು ಹೇಳಿದರು.
ಆಶ್ರಮದ ಕಟ್ಟಡ ನಿರ್ಮಾಣಕ್ಕೆ ನಟ ದರ್ಶನ್ ಆರ್ಥಿಕ ನೆರವು ನೀಡಿದ್ದಾರೆ. ಅವರು ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ನಮಗೆ ಅನ್ನ ನೀಡಿದ್ದಾರೆ, ಹಾಗಾಗಿ ಭೇಟಿಗೆ ಬಂದಿದ್ದೆ. ಅವಕಾಶ ಸಿಕ್ಕರೆ ನಟ ದರ್ಶನ್‌ರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.