Site icon Vistara News

Actor Darshan: ದರ್ಶನ್‌ಗಿಲ್ಲ ಮನೆಯೂಟ ತಿನ್ನೋ ಭಾಗ್ಯ; ಅರ್ಜಿ ವಿಚಾರಣೆ ಜು.29ಕ್ಕೆ ಮುಂದೂಡಿಕೆ

Actor Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ದರ್ಶನ್‌ಗೆ ಮತ್ತೆ ಜೈಲೂಟವೇ ಗತಿಯಾಗಿದೆ. ಯಾಕೆಂದರೆ, ಮನೆ ಊಟಕ್ಕೆ ಅವಕಾಶ ಕೋರಿ ದರ್ಶನ್ ಸಲ್ಲಿಸಿದ್ದ ರಿಟ್ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ. ಮನೆ ಊಟಕ್ಕೆ ಅವಕಾಶ ಕಲ್ಪಿಸಲು ಕೇಂದ್ರ ಕಾರಾಗೃಹ ಮೇಲ್ವಿಚಾರಕರಿಗೆ ನಿರ್ದೇಶಿಸಬೇಕು ಎಂದು ದರ್ಶನ್‌ (Actor Darshan) ಕೋರಿದ್ದ ಅರ್ಜಿ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಲಾಗಿದೆ.

ದರ್ಶನ್ ಪರ ವಕೀಲ ಫಣೀಂದ್ರ ವಾದ ಮಂಡಿಸಿ, ವಿಚಾರಣಾಧೀನ ಕೈದಿಗಳಿಗೆ ಖಾಸಗಿ ಸೋರ್ಸ್‌ನಿಂದ ಅಗತ್ಯ ವಸ್ತುಗಳನ್ನು ಪಡೆಯಲು ಅವಕಾಶವಿದೆ. ಕಾರಗೃಹ ಕಾಯ್ದೆಯಲ್ಲಿ ಅದಕ್ಕೆ ಅವಕಾಶ ಇದೆ. ವಿಚಾರಣಾಧಿನ ಕೈದಿ, ಶಿಕ್ಷೆಗೆ ಗುರಿಯಾಗದ ಕೈದಿಗೂ ಮನೆಯ ಊಟ, ಹಾಸಿಗೆ ನೀಡಲು ಜೈಲು ಮ್ಯಾನ್ಯುಯಲ್‌ನಲ್ಲಿ ಅವಕಾಶ ಇದೆ ಎಂದು ಹೇಳಿದರು.

ಊಟವನ್ನು ಸ್ನೇಹಿತರು, ಕುಟುಂಬಸ್ಥರ ಬಳಿ ಪಡೆಯಲು ಜೈಲ್ ಎಸ್ಪಿ, ಐಜಿಪಿ ಚೆಕ್ ಮಾಡಬೇಕು ಅಂತ ನಿಯಮ ಇದೆ. ಅದಲ್ಲದೇ ಆ ಆಹಾರದಿಂದ ತೊಂದರೆಯಾದರೆ ಅದಕ್ಕೆ ಅವರೇ ಕಾರಣ ಇರುತ್ತಾರೆ ಎಂದು ಬಾಂಬೆ ಹೈಕೋರ್ಟ್‌ನ ಅಸ್ಕರ್ ಯೂಸಫ್ ಪ್ರಕರಣದ ಆದೇಶವನ್ನು ಉಲ್ಲೇಖಿಸಿದರು. ನಿಗದಿತ ಸಮಯದಲ್ಲಿ ಕೈದಿ, ತನ್ನ ಖರ್ಚಿನಲ್ಲಿ ಊಟ ಹೊರಗಿನಿಂದ ಪಡೆಯಬಹುದು ಎಂದರು.

ಈ ವೇಳೆ ಪ್ರತಿಕ್ರಿಯಿಸಿದ ಜಡ್ಜ್‌ ಎಸ್.ಆರ್. ಕೃಷ್ಣಕುಮಾರ್, ನೀವು ಆಹಾರ, ಹಾಸಿಗೆ ಮೂಲಭೂತ ಹಕ್ಕು ಎನ್ನುತ್ತಿದ್ದೀರಿ. ಆದರೆ ನಾನು ಈಗ ಮಧ್ಯಂತರ ಆದೇಶ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಪ್ರಕರಣದ ವಿಚಾರಣೆ ಮಾಡಬೇಕು. ವಿಚಾರಣಾಧೀನ ಕೈದಿ ಇದ್ದಾಗ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅಧಿಕಾರ ಇದೆ. ಅಲ್ಲಿ ಮೊದಲು ಅರ್ಜಿ ಸಲ್ಲಿಸಿ ಅವಕಾಶ ಕೋರಬೇಕು. ಅಲ್ಲಿ ನಿರಾಕರಣೆಯಾದರೆ, ಮುಂದೆ ನೋಡೋಣ ಎಂದು ಹೇಳಿ, ಮುಂದಿನ ವಿಚಾರಣೆ 29ಕ್ಕೆ ಮುಂದೂಡಿದರು.

ಜೈಲೂಟದಿಂದಾಗಿ ಫುಡ್‌ ಪಾಯಿಸನಿಂಗ್‌ ಹಾಗೂ ಅತಿಸಾರ ಆಗುತ್ತಿದೆ. ಹೀಗಾಗಿ ಮನೆಯೂಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ದರ್ಶನ್‌ ಮನವಿ ಮಾಡಿದ್ದರು. ಜೈಲಿನ ಆಹಾರ ದರ್ಶನ್‌ಗೆ ಒಗ್ಗದೇ ಫುಡ್ ಪಾಯಿಸನಿಂಗ್ ಆಗುತ್ತಿದೆ. ಹೀಗೆಂದು ಜೈಲಿನ ವೈದ್ಯರೇ ಹೇಳಿದ್ದರು. ಅತಿಸಾರದಿಂದಾಗಿ ದರ್ಶನ್ ತೂಕ ತುಂಬಾ ಕಡಿಮೆಯಾಗಿದೆ. ಹಲವು ಕೆಜಿಗಳಷ್ಟು ತೂಕವನ್ನು ದರ್ಶನ್ ಕಳೆದುಕೊಂಡಿದ್ದಾರೆ. ದರ್ಶನ್ ಜಾಮೀನಿಗಾಗಿ ವಕೀಲರು ಬೇಕಾದ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ಇನ್ನು ಕೆಲವಷ್ಟು ದಿನ ದರ್ಶನ್ ಜೈಲಿನಲ್ಲೆ ಇರಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮನೆ ಊಟಕ್ಕೆ ಅನುಮತಿ ನೀಡುವಂತೆ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ದರ್ಶನ್‌ & ಗ್ಯಾಂಗ್‌ಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಆಗಸ್ಟ್ 1 ರವರೆಗೆ ದರ್ಶನ್ ಅಂಡ್ ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶ ವಿಶ್ವನಾಥ‌ ಸಿ ಗೌಡರ್ ಗುರುವಾರ ಆದೇಶ ನೀಡಿದ್ದರು.

Exit mobile version