ಉಡುಪಿ: ಚಿತ್ರನಟ, ನಿರ್ದೇಶಕ ಡಾ.ರಮೇಶ್ ಅರವಿಂದ್ ಅವರನ್ನು ಪ್ರತಿಷ್ಠಿತ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ 2022ಗೆ ಆಯ್ಕೆ ಮಾಡಲಾಗಿದ್ದು, ಅಕ್ಟೋಬರ್ 10ರಂದು ಡಾ. ಕೋಟ ಶಿವರಾಮ ಕಾರಂತರ ಜನ್ಮ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕೋಟದ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ತಿಳಿಸಿದ್ದಾರೆ.
ಹಲವು ದಶಕಗಳಿಂದ ಚಲನಚಿತ್ರ ಹಾಗೂ ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿ ನಟ, ನಿರ್ದೇಶಕ, ನಿರೂಪಕ, ವ್ಯಕ್ತಿತ್ವ ವಿಕಸನ ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದು ಕೀರ್ತಿ ಗಳಿಸಿರುವ ಡಾ.ರಮೇಶ್ ಅರವಿಂದ್ ಅವರ ಸರಳ, ಸವ್ಯಸಾಚಿ ವ್ಯಕ್ತಿತ್ವ, ಸಾಧನೆ ಪರಿಗಣಿಸಿ ಈ ವರ್ಷ ಅವರನ್ನು ಆಯ್ಕೆ ಸಮಿತಿಯು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Brahmin community | ಸಿರಿನಾಡು ಬ್ರಾಹ್ಮಣ ಸಮುದಾಯದ ಏಳ್ಗೆಗೆ ಸಹಕರಿಸಲು ಸಿದ್ಧ: ಸಚಿವ ಅಶ್ವತ್ಥ ನಾರಾಯಣ
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯಿತಿ, ಕೋಟದ ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ಕಳೆದ 17 ವರ್ಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರ ನೀಡಲಾಗುತ್ತಿದೆ.
ಈ ಪ್ರಶಸ್ತಿಗೆ ಈವರೆಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ನ್ಯಾಯಮೂರ್ತಿ ವೆಂಕಟಾಚಲ, ಕೆ.ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ ಕಾಸರವಳ್ಳಿ, ಜಯಶ್ರೀ, ಮೋಹನ ಆಳ್ವ, ಸಾಲು ಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ ಕಾಯ್ಕಿಣಿ, ಸದಾನಂದ ಸುವರ್ಣ, ಡಾ.ಬಿ.ಎಂ.ಹೆಗ್ಡೆ, ಪ್ರಕಾಶ್ ರೈ, ಶ್ರೀಪಡ್ರೆ, ಕವಿತಾ ಮಿಶ್ರ, ನಾಡೋಜ ಡಾ.ಎಸ್.ಎಲ್.ಭೈರಪ್ಪ, ಗಿರೀಶ್ ಭಾರಧ್ವಾಜ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಮಂಗಳೂರು | ನೂರರ ಸಂಭ್ರಮದಲ್ಲಿ ರಥಬೀದಿ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಶಾರದೆ