Site icon Vistara News

Tiger Nail: ತಲೆತಗ್ಗಿಸುವ ಯಾವ ಕೆಲಸವನ್ನೂ ಮಾಡಿಲ್ಲ: ತಾಯಿಯ ಕಾಣಿಕೆ ಕೈತಪ್ಪಿದ್ದಕ್ಕೆ ನಟ ಜಗ್ಗೇಶ್‌ ಬೇಸರ

Actor Jaggesh

ಬೆಂಗಳೂರು: ಹುಲಿ ಉಗುರು ಪೆಂಡೆಂಟ್‌ (Tiger Nail) ಧರಿಸಿದ ಹಿನ್ನೆಲೆಯಲ್ಲಿ ಚಿತ್ರನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರ ಮಲ್ಲೇಶ್ವರದ ನಿವಾಸದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧಕಾರ್ಯ ನಡೆಸಿ, ಪೆಂಡೆಂಟ್‌ ಅನ್ನು ವಶಕ್ಕೆ ಪಡೆದಿದ್ದಾರೆ. ತಾಯಿ ಕೊಟ್ಟ ಕಾಣಿಕೆ (Tiger claw Pendant) ತಪ್ಪಿ ಹೋದ ಹಿನ್ನೆಲೆಯಲ್ಲಿ ಜಗ್ಗೇಶ್ ಬೇಸರದ ನುಡಿಗಳನ್ನಾಡಿದ್ದು, ತನಗೆ ಕೇಡು ಮಾಡಲೆಂದೇ ಕೆಲವರು ವಿಡಿಯೋ ವೈರಲ್ ಮಾಡಿದ್ದಾರೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಮನೆಗೆ ಅರಣ್ಯಾಧಿಕಾರಿಗಳ ಭೇಟಿ ನಂತರ ಸಾಮಾಜಿಕ ಜಾಲತಾಣದಲ್ಲಿ ನಟ ಜಗ್ಗೇಶ್‌ ಪ್ರತಿಕ್ರಿಯಿಸಿ, ಕಾನೂನು ದೊಡ್ಡದು, ಅಧಿಕಾರಿಗಳು ಕೇಳಿದ ವಸ್ತು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ. ಎಷ್ಟೋ ದೋಚುವ ಮನುಷ್ಯರು, ಕೊಲೆ ಪಾತಕರು, ದೇಶದ್ರೋಹಿಗಳು, ಸಮಾಜ ಘಾತಕರಿಗಿಂತ ನನ್ನತಾಯಿ ಕಾಣಿಕೆ ಬಗ್ಗೆ ನೆನ್ನೆಯಿಂದ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ. ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ! ಪಾಚ್ಕೊಳಿ ಎಂದು ಹೇಳಿದ್ದಾರೆ.

ಒಂದು ವಿಷಯ ಅದ್ಭುತವಾಗಿ ಅರಿತೆ, ಪ್ರೀತಿಸುವವರು 1000 ಜನ ಇದ್ದರೂ, ವಿಷಯವಿಲ್ಲದೆ ದ್ವೇಷ ಮಾಡುವ 100 ಜನರು ಇದ್ದೆ ಇರುತ್ತಾರೆ. But remember one thing, ಒಳ್ಳೆ ಗುಣ, ನಡತೆ ಇದ್ದಾಗ ಕೊಲ್ಲೋಕೆ ಸಾವಿರ ಮಂದಿ ಬಂದರೂ, ಕಾಯಲು ಒಬ್ಬ ಬರುತ್ತಾನೆ, ಅವನೇ ದೇವರು. ಬದುಕಲ್ಲಿ ಸಾಧ್ಯವಾದರೆ ಒಬ್ಬರಿಗೆ ಒಳ್ಳೆಯದು ಮಾಡಿ,
ಅನ್ಯರಿಗೆ ಕೆಡುಕು ಬಯಸಿ ಬಾಳಿದರೆ ನಾಶವಾಗುತ್ತಾರೆ ಎಂದು ಕಿಡಿಕಾರಿದ್ದಾರೆ.

ಜಗ್ಗೇಶ್‌ ಪೆಂಡೆಂಟ್‌ನ ಉಗುರು ಕೊಳೆದು ಹೋಗಿದೆಯಂತೆ

ಬೆಂಗಳೂರು: ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರ ಮಲ್ಲೇಶ್ವರದ ಮನೆಯಲ್ಲಿ ಡಿಸಿಎಫ್ ರವೀಂದ್ರ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆಯಿತು. ದಾಳಿಯ ವೇಳೆ ಜಗ್ಗೇಶ್‌ ಅವರು ಮನೆಯಲ್ಲಿ ಇರಲಿಲ್ಲ. ಆದರೆ, ಪೆಂಡೆಂಟ್‌ನ್ನು ಮನೆಯಲ್ಲಿ ಇಟ್ಟುಹೋಗಿದ್ದರು. ಅದನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ʻʻ40 ವರ್ಷಗಳ ಹಳೆಯದ್ದಾದರಿಂದ ಪೆಂಡೆಂಟ್ ಕೊಳೆತ ಸ್ಥಿತಿಯಲ್ಲಿದೆ. ಎಫ್‌ಎಸ್‌ಎಲ್ ರಿಪೋರ್ಟ್ ಬಂದ ನಂತರವೇ ಕ್ರಮ ಕೈಗೊಳ್ಳುತ್ತೇವೆ. ವರ್ತೂರ್ ಸಂತೋಷ್ ಅವರ ಬಂಧನವಾದಾಗ ಅದು ಹುಲಿಯದ್ದೇ ಉಗುರು ಅಂತ ನಮಗೆ ಗೊತ್ತಿತ್ತು. ಆದರೆ ಜಗ್ಗೇಶ್ ಅವರ ಪೆಂಡೆಂಡ್ ಬಗ್ಗೆ ನಮಗೆ ಖಾತ್ರಿಯಾಗಬೇಕಿದೆʼʼ ಎಂದು ಅರಣ್ಯ ವಲಯ ಸಂರಕ್ಷಣಾ ಅಧಿಕಾರಿ ರವೀಂದ್ರ ಹೇಳಿದ್ದಾರೆ.

ಇದನ್ನೂ ಓದಿ | Tiger Nail : ದರ್ಶನ್‌, ಜಗ್ಗೇಶ್‌, ನಿಖಿಲ್ ಪೆಂಡೆಂಟ್‌ ವಶಕ್ಕೆ; ರಾಕ್‌ಲೈನ್‌ ಮನೆಯಿಂದ ಬರಿಗೈಲಿ ವಾಪಸ್

ನಾವು ನೋಟಿಸ್‌ ಕೊಟ್ಟಾಗ ಜಗ್ಗೇಶ್‌ ಅವರ ಪತ್ನಿ ಪರಿಮಳಾ ಅವರು ಲಾಕೆಟ್‌ ಕೊಟ್ಟಿದ್ದಾರೆ. ಹೀಗಾಗಿ ಯಾವುದೇ ತಪಾಸಣೆ ನಡೆಸಿಲ್ಲ. ಜಗ್ಗೇಶ್‌ ಅವರು ಇದು ತಾಯಿ ಕೊಟ್ಟಿದ್ದು, ಪೂಜೆ ಮಾಡಿ ಇಟ್ಟುಕೊಂಡಿದ್ದೇವೆ ಎಂದಿದ್ದರು. ಹೀಗಾಗಿ ಡಿಎನ್‌ಎ ಪರೀಕ್ಷೆಗಾಗಿ ಮಾಡಲು ಡೆಹ್ರಾಡೂನ್‌ಗೆ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ಇದು ನಿಜವಾದ ಹುಲಿಯುಗುರು ಆಗಿದ್ದರೆ, ಕರೆಸಿ ವಿಚಾರಣೆ ನಡೆಸಲಾಗುತ್ತದೆ ಎಂದು ರವೀಂದ್ರ ಹೇಳಿದ್ದಾರೆ.

Exit mobile version