ಕಲಬುರಗಿ: ಕಲಬುರಗಿಗೆ ಇಂದು ಕಾರ್ಯಕ್ರಮವೊಂದಕ್ಕೆ ಆಗಮಿಸಲಿರುವ ಖ್ಯಾತ ನಟ ಪ್ರಕಾಶ್ ರಾಜ್ (Actor Prakash Raj) ಆಗಮನಕ್ಕೆ ವಿರೋಧ ವ್ಯಕ್ತವಾಗಿದೆ. ಕಲಬುಗರಿ ನಗರಕ್ಕೆ ಆಗಮಿಸದಂತೆ ರೈಗೆ ನಿರ್ಬಂಧ ಹೇರುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ಆಯುಕ್ತರಿಗೆ ಹಿಂದೂ ಜಾಗೃತ ಸೇನೆ ಎಂಬ ಸಂಘಟನೆ ಮನವಿ ನೀಡಿದೆ.
ಇಂದು ಸಂಜೆ 6 ಗಂಟೆಗೆ ಕಲಬುರಗಿಯ ಪಂಡಿತ್ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಮೈಸೂರಿನ, ಪ್ರಕಾಶ್ ರಾಜ್ ಅವರೇ ನಡೆಸುತ್ತಿರುವ ʼನಿರ್ದಿಗಂತʼ ನಾಟಕ ತಂಡದ ʼಗಾಯಗಳುʼ ನಾಟಕ ಪ್ರದರ್ಶನ ಹಾಗೂ ನಂತರ ಸಂವಾದ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ನಾಟಕ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಭಾಗಿಯಾಗಬೇಕಿದೆ.
ನಟ ಪ್ರಕಾಶ್ ರೈ ಅವರು ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತೆ ಪ್ರಚೋದನಾತ್ಮಕ ಭಾಷಣ ಮಾಡುವ ಸಾಧ್ಯತೆಯಿದೆ. ಈಗಾಗಲೇ ಚಂದ್ರಯಾನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಕಲಬುರಗಿಯಲ್ಲಿ ಮತ್ತೊಂದು ಪ್ರಚೋದನಾತ್ಮಕ ಹೇಳಿಕೆ ನೀಡುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ನಿರ್ಬಂಧಿಸಬೇಕು ಎಂದು ಮನವಿ ಮಾಡಲಾಗಿದೆ.
2018ರಲ್ಲೂ ಪ್ರಕಾಶ್ ರೈ ಕಲಬುರಗಿಗೆ ಆಗಮಿಸಿದ್ದಾಗ ಕೆಲವರು ಪ್ರಕಾಶ್ ರೈ ಕಾರಿಗೆ ಅಡ್ಡಗಟ್ಟಿ ಗಲಾಟೆ ಮಾಡಿದ್ದರು. ಈ ಹಿಂದೆ ಕೋಟದಲ್ಲಿ ಶಿವರಾಮ ಕಾರಂತ ಹೆಸರಿನ ಪ್ರಶಸ್ತಿಯನ್ನು ಪ್ರಕಾಶ್ ರೈ ಅವರಿಗೆ ನೀಡಿದಾಗ, ನೀಡದಂತೆ ಕೆಲವು ಹಿಂದೂ ಸಂಘಟನೆಗಳು ಆಕ್ಷೇಪಿಸಿದ್ದವು.
ಇತ್ತೀಚೆಗೆ ಉದಯನಿಧಿ ಸ್ಟಾಲಿನ್ ಅವರ ವಿವಾದಿತ ʼಸನಾತನ ಧರ್ಮʼ (Sanatan Dharma row) ಹೇಳಿಕೆಯನ್ನು ಪ್ರಕಾಶ್ ರೈ ಸಮರ್ಥಿಸಿಕೊಂಡಿದ್ದರು. ಇದರಿಂದ ಹಲವು ಬಗೆಯ ಖಂಡನೆ ಮಂಡನೆಗೆ ತುತ್ತಾಗಿದ್ದರು.
ಇದನ್ನೂ ಓದಿ: Actor Prakash Raj : ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ಅಪ್ಪ-ಅಮ್ಮನಿಗೆ ಹುಟ್ಟಿದ್ದು; ನಟ ಪ್ರಕಾಶ್ ರಾಜ್ ಹೇಳಿಕೆ