ಬೆಂಗಳೂರು: ಉತ್ತಮ ಫೋಟೊ ತೆಗೆಯಲು ಕ್ಯಾಮೆರಾಗಿಂತ ಹೆಚ್ಚು ಉತ್ತಮ ಹೃದಯ ಹಾಗೂ ಮನಸ್ಸು ಮುಖ್ಯ. ವಿದ್ಯಾಭೂಷಣರ ಹಾಡುಗಳನ್ನು ಕೇಳಿದಾಗ ಮನಸ್ಸಿಗೆ ಸಿಗುವ ಅದ್ಭುತ ಅನುಭವ ಅವರ ಪುತ್ರನ ಫೋಟೊಗಳನ್ನು ನೋಡಿದಾಗ ದೊರೆತಿದೆ ಎಂದು ನಟ, ನಿರ್ದೇಶಕ ಡಾ. ರಮೇಶ್ ಅರವಿಂದ್ ತಿಳಿಸಿದ್ದಾರೆ.
ನಗರದ ಚಿತ್ರಕಲಾ ಪರಿಷತ್‌ನಲ್ಲಿ ವಿದ್ಯಾಭೂಷಣ ಶ್ರೀಗಳ ಪುತ್ರ ಅನಿರುದ್ಧ್ ವಿದ್ಯಾಭೂಷಣ್ ಅವರ ವನ್ಯಜೀವಿ ಛಾಯಾಗ್ರಹಣದ ಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಅನಿರುದ್ಧ್ ಅವರ ಫೋಟೊಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ. ಯಾವುದೇ ಒಂದು ಫೋಟೊ ತೆಗೆಯುವುದಕ್ಕೆ ಒಂದು ಉತ್ತಮ ಹೃದಯ ಅಗತ್ಯ. ಕ್ಯಾಮೆರಾಕ್ಕಿಂತ ಹೆಚ್ಚಾಗಿ ಉತ್ತಮ ಮನಸ್ಸಿದ್ದರೆ ಒಳ್ಳೆಯ ಫೋಟೊಗಳನ್ನು ಸೆರೆಹಿಡಿಯಬಹುದು. ಅನಿರುದ್ಧ್ ಕ್ಯಾಮೆರಾವನ್ನು ಕೇವಲ ಒಂದು ಉಪಕರಣವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದರು.
ವನ್ಯಜೀವಿ ಫೋಟೊಗ್ರಫಿ ಸಂದರ್ಭದಲ್ಲಿ ಹೆಚ್ಚಿನ ಸಮಯವಿರುವುದಿಲ್ಲ, ರಿಟೇಕ್‌ಗೆ ಅವಕಾಶವಿರುವುದಿಲ್ಲ. ಕೆಲ ಕ್ಷಣಗಳಲ್ಲಿ ಆಗುವ ಘಟನೆಗಳನ್ನು ಸೆರೆಹಿಡಿಯಬೇಕು. ಒಂದು ಅದ್ಭುತ ಕ್ಷಣಕ್ಕಾಗಿ ತಾಸುಗಟ್ಟಲೇ, ದಿನಗಟ್ಟಲೇ ಕಾಯಬೇಕು. ಅಂತಹ ತಾಳ್ಮೆಯನ್ನು ಅನಿರುದ್ಧ್ ಮೈಗೂಡಿಸಿಕೊಂಡಿರುವುದಕ್ಕೆ ಇಂತಹ ಅದ್ಭುತ ಫೋಟೊಗಳನ್ನು ತೆಗೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಚಿತ್ರಕಲಾ ಪರಿಷತ್‌ನಲ್ಲಿ ಅ.೧೪ರಿಂದ ಆರಂಭವಾಗಿರುವ ಛಾಯಾಚಿತ್ರ ಪ್ರದರ್ಶನ ಅ.೧೬ರವರೆಗೆ ನಡೆಯಲಿದೆ. ಈ ವೇಳೆ ಅನಿರುದ್ಧ್ ಆಫ್ರಿಕಾದ ಪ್ರವಾಸದಲ್ಲಿ ಸೆರೆಹಿಡಿದ ಅದ್ಭುತ ಕ್ಷಣಗಳ ವಿಡಿಯೊವೊಂದನ್ನು ಇಡೀ ದಿನ ಪ್ರದರ್ಶನ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ನಿವೃತ್ತ ಐಎಫ್‌ಎಸ್ ಅಧಿಕಾರಿ ಎಂ.ಎನ್ ಜಯಕುಮಾರ್, ಲಕ್ಷ್ಮೀಶ ತೋರ್ಪಾಡಿ, ದಿನೇಶ್ ಕುಂಬ್ಳೆ, ಜಯಂತ್ ಕಾಯ್ಕಿಣಿ ಇದ್ದರು.
ಅನಿರುದ್ಧ್ ವಿದ್ಯಾಭೂಷಣ ಅವರ ಆಫ್ರಿಕಾ ಹಾಗೂ ಭಾರತ ಕಾಡುಗಳಲ್ಲಿ ಸೆರೆಹಿಡಿದಿರುವ ಛಾಯಾಚಿತ್ರಗಳ ಪ್ರದರ್ಶನವನ್ನು ಚಿತ್ರಕಲಾ ಪರಿಷತ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದು, ನಟ ರಮೇಶ್ ಅರವಿಂದ್ ಉದ್ಘಾಟಿಸಿದರು. ಈ ವೇಳೆ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ನಿವೃತ್ತ ಐಎಫ್‌ಎಸ್ ಅಧಿಕಾರಿ ಎಂ.ಎನ್ ಜಯಕುಮಾರ್, ಲಕ್ಷ್ಮೀಶ ತೊಲ್ಪಾಡಿ , ದಿನೇಶ್ ಕುಂಬ್ಳೆ, ಜಯಂತ್ ಕಾಯ್ಕಿಣಿ ಉಪಸ್ಥಿತರಿದ್ದರು.
ನಿಸರ್ಗ ಎನ್ನುವುದು “ಡು ನಾಟ್ ಡಿಸ್ಟರ್ಬ್” ಎನ್ನುವ ಬೋರ್ಡ್ ಅನ್ನು ಮೊದಲಿನಿಂದಲೂ ಹಾಕಿಕೊಂಡಿದೆ. ಆದರೆ, ಅನೇಕರು ಅದನ್ನು ಮೀರಿ ಹೋದಾಗ ಅನಾಹುತಗಳಾಗುತ್ತವೆ. ಆದರೆ, ಅನಿರುದ್ಧ್ ವನ್ಯಜೀವಿ ಫೋಟೊ ಶೂಟ್ ಸಮಯದಲ್ಲಿ ಎಲ್ಲಿಯೂ ವ್ಯನ್ಯಜೀವಿಗಳಿಗೆ ತೊಂದರೆ ಕೊಟ್ಟಿಲ್ಲ ಎನ್ನುವುದು ಆ ಫೋಟೊಗಳ ಕಣ್ಣಿನಲ್ಲಿಯೇ ತಿಳಿಯುತ್ತದೆ, ಅದು ಅಭಿನಂದನೀಯ
| ರಮೇಶ್ ಅರವಿಂದ್, ನಟ
ಇದನ್ನೂ ಓದಿ | ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆಗೆ ಆಸಕ್ತಿ ತೋರಿದ Covaxin ಉತ್ಪಾದಕ ಕಂಪನಿ ಭಾರತ್ ಬಯೋಟೆಕ್