ಬೆಂಗಳೂರು: ನಟಿ ಪೂಜಾ ಗಾಂಧಿ (Pooja Gandhi) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಹಾಗೂ ಬಹುಕಾಲದ ಗೆಳೆಯ ವಿಜಯ್ ಘೋರ್ಪಡೆ ಅವರನ್ನು ಮಳೆ ಹುಡುಗಿ ಮದುವೆಯಾಗಿದ್ದು, ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಬಂಧು-ಮಿತ್ರರು, ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಸರಳವಾಗಿ ಬುಧವಾರ ವಿವಾಹವಾಗಿದ್ದಾರೆ.
ವಿವಾಹ ಸಮಾರಂಭದಲ್ಲಿ ನಿರ್ದೇಶಕ ಯೋಗರಾಜ್ ಭಟ್, ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್, ಸಾಹಿತಿ ಜಯಂತ್ ಕಾಯ್ಕಿಣಿ, ನಟಿ ಸುಧಾರಣಿ, ಶುಭಾ ಪೂಂಜಾ, ನಿರ್ದೇಶಕಿ ಸುಮನಾ ಕಿತ್ತೂರು ಮತ್ತಿತರರು ಭಾಗವಹಿಸಿ, ನವ ದಂಪತಿಗೆ ಶುಭ ಕೋರಿದರು.
ಮೂಲತಃ ಉತ್ತರ ಪ್ರದೇಶದವರಾದ ಪೂಜಾ ಗಾಂಧಿ ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತ ಬೆಂಗಳೂರಿನಲ್ಲೇ ಕೆಲವು ಸಮಯದಿಂದ ನೆಲೆಸಿದ್ದಾರೆ. ತಮ್ಮ ಕನ್ನಡ ಪ್ರೀತಿಯಿಂದಲೇ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಕನ್ನಡ ಮಾತನಾಡಲು ಅಷ್ಟೇ ಅಲ್ಲ ಓದಲು ಮತ್ತು ಬರೆಯಲು ಅವರು ಕಲಿತಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.
ವಿಜಯ್ ಅವರೇ ಪೂಜಾ ಗಾಂಧಿಯವರಿಗೆ ಕನ್ನಡ ಕಲಿಸಿರುವುದಾಗಿ ಮಾಹಿತಿ ಇದೆ. ಪೂಜಾ ಗಾಂಧಿ ಹಾಗೂ ವಿಜಯ್ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು. ಕನ್ನಡ ಕಲಿತು ಕನ್ನಡಿಗನನ್ನು ಮದುವೆಯಾಗುವ ಮೂಲಕ ಇದೀಗ ಕರ್ನಾಟಕದ ಸೊಸೆಯಾಗಿದ್ದಾರೆ. ಪೂಜಾ ಗಾಂಧಿ ಕನ್ನಡ ಕಲಿತಿರುವುದು ಮಾತ್ರವಲ್ಲ ಅವರ ತಾಯಿಗೂ ಕನ್ನಡ ಹೇಳಿ ಕೊಟ್ಟಿದ್ದಾರೆ ಎನ್ನುವುದು ವಿಶೇಷ. 2012ರಲ್ಲಿ ಪೂಜಾ ಗಾಂಧಿ ಅವರಿಗೆ ಉದ್ಯಮಿ ಆನಂದ್ ಗೌಡ ಜತೆ ನಿಶ್ಚಿತಾರ್ಥವಾಗಿತ್ತು. ನಂತರ ಅದು ಮುರಿದು ಬಿದ್ದಿತ್ತು. ಈಗ ವಿಜಯ್ ಘೋರ್ಪಡೆ ಜತೆ ವಿವಾಹವಾಗಿದೆ.
ಇದನ್ನೂ ಓದಿ | Actress Ramya: ಹುಟ್ಟುಹಬ್ಬದಂದು ನಾಯಿಮರಿಗಳೊಂದಿಗೆ ಕಾಲಕಳೆದ ಮೋಹಕ ತಾರೆ ರಮ್ಯಾ
ಹಿಂದಿ, ಬಂಗಾಳಿ ಚಿತ್ರಗಳಲ್ಲಿ ನಟಿಸುತ್ತಿದ್ದ ಪೂಜಾ ಗಾಂಧಿ 2006ರಲ್ಲಿ ತೆರೆಕಂಡ ʼಮುಂಗಾರು ಮಳೆʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ಕನ್ನಡದಲ್ಲಿ ದಾಖಲೆಯ ಕಲೆಕ್ಷನ್ ಮಾಡಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪೂಜಾ ಗಾಂಧಿ ಈ ಚಿತ್ರದ ಮೂಲಕ ಸ್ಟಾರ್ ಆಗಿ ಹೊರ ಹೊಮ್ಮಿದ್ದರು. ಬಳಿಕ ಪೂಜಾ ಗಾಂಧಿ ಪುನೀತ್ ರಾಜ್ ಕುಮಾರ್, ಯಶ್, ಉಪೇಂದ್ರ ಮುಂತಾದವರ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಜತೆಗೆ ತಮಿಳು, ತೆಲುಗು, ಮಲೆಯಾಳಂ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ