ತುಮಕೂರು: ಕೊಡಗಿನ ಜನ ನಾಯಿಗೆ ಟಿಪ್ಪು ಹೆಸರು ಇಡುತ್ತಾರೆ. ಟಿಪ್ಪುವನ್ನು ಅವಮಾನಿಸಲೆಂದೇ ನಾಯಿಗಳಿಗೆ ಟಿಪ್ಪು ಹೆಸರು ಇಡುತ್ತಾರೆ. ಇದರಿಂದ ಟಿಪ್ಪು (Tippu Nija Kanasugalu) ಎಂದರೆ ಕೊಡಗಿನ ಜನರಿಗೆ ಎಷ್ಟು ಕ್ರೋಧ, ಸಿಟ್ಟು ಇದೆ ಎಂಬುವುದನ್ನು ಅರ್ಥಮಾಡಿಕೊಳ್ಳಬಹುದು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದ್ದಾರೆ.
ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಮನೆ ಮನೆಯಲ್ಲಿ ನಾಯಿಗಳಿಗೆ ಟಿಪ್ಪು ಹೆಸರು ಇಡುತ್ತೇವೆ. ಇವತ್ತೂ ಕೂಡ ಟಿಪ್ಪು ಹೆಸರು ಎತ್ತಿದ ಅಭ್ಯರ್ಥಿ ಕೊಡಗಿನಲ್ಲಿ ಸೋಲುತ್ತಾನೆ. ನಾನು ಟಿಪ್ಪು ಪರ ಎಂದವರೆಲ್ಲಾ ಸೋತಿದ್ದಾರೆ ಎಂದು ಹೇಳಿದ್ದಾರೆ.
ಮಾರ್ಚ್ 2ರಂದು ತುಮಕೂರಿನಲ್ಲಿ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ
ತುಮಕೂರಿನ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಮಾರ್ಚ್ 2ರಂದು ಸಂಜೆ 6 ಗಂಟೆಗೆ ʼಟಿಪ್ಪು ನಿಜ ಕನಸುಗಳುʼ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಟಿಕೆಟ್ ಶುಲ್ಕ 100 ರೂಪಾಯಿ ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿರುವ ಅವರು, ನಾಟಕ ಪ್ರದರ್ಶನಕ್ಕೆ ತಡೆ ಕೋರಿ ಅರ್ಜಿ ಹಾಕಿದವರು ಓಡಿ ಹೋದರು. ಹಿಂದಿನ ಸರ್ಕಾರಗಳು ಟಿಪ್ಪುವನ್ನು ಹೀರೋ ಎಂದು ಬಿಂಬಿಸಿವೆ. ಟಿಪ್ಪು ನಿಜವಾದ ಖಳನಾಯಕ. ಆತನ ನಿಜ ಕನಸುಗಳನ್ನು ನಾಟಕದಲ್ಲಿ ಅನಾವರಣ ಮಾಡಲಾಗಿದೆ. ಸತ್ಯದ ಅನಾವರಣವೇ ಈ ನಾಟಕದ ಉದ್ದೇಶ ಎಂದು ತಿಳಿಸಿದರು.
ಪುಸ್ತಕ ಮಾರಾಟಕ್ಕೆ ಅನುಮತಿ ಸಿಕ್ಕಿದೆ, ಸುಮಾರು 12 ಆವೃತ್ತಿ ಮುದ್ರಣ ಆಗಿದೆ. 40 ಸಾವಿರ ಪ್ರತಿಗಳು ಮಾರಾಟ ಆಗಿವೆ. ಕಡಿಮೆ ಸಮಯದಲ್ಲಿ ಇಷ್ಟು ಪ್ರತಿಗಳು ಮಾರಾಟವಾಗಿರುವುದು ಚಾರಿತ್ರಿಕ ದಾಖಲೆ. ಪೊಲೀಸರ ಸಲಹೆಯಂತೆ ಒಳಾಂಗಣ ವೇದಿಕೆಯಲ್ಲಿ ನಾಟಕ ಪ್ರದರ್ಶನ ಮಾಡಲಾಗುತ್ತಿದೆ. ನಾನು ಶಾಂತಿ ಪ್ರಿಯ, ಶಾಂತಿಯುತವಾಗಿ ಪ್ರದರ್ಶನ ಆಗಲಿ ಎಂಬುವುದೇ ನನ್ನ ಆಶಯ ಎಂದು ತಿಳಿಸಿದರು.
ನಾಟಕದಿಂದ ಬಿಜೆಪಿಗೆ ಲಾಭ ಆಗುತ್ತದೆ, ಕಾಂಗ್ರೆಸ್‌ಗೆ ನಷ್ಟ ಆಗುತ್ತದೆ ಎಂದು ಲೆಕ್ಕ ಹಾಕಿ ಕೂರುವ ವ್ಯಾಪಾರಿ ನಾನಲ್ಲ. ನಾನೊಬ್ಬ ರಂಗಭೂಮಿ ಕಲಾವಿದನಾಗಿದ್ದು, ನಾಟಕ ಮಾಡುವುದಷ್ಟೇ ನನ್ನ ಕೆಲಸ. ಇದು ಬಿಜೆಪಿಯ ಕಥಾನಕ ಅಲ್ಲ, ಇದು ಟಿಪ್ಪು ಕಥಾನಕ. ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಖಳನಾಯಕನನ್ನು ಖಳನಾಯಕನಾಗಿ ತೋರಿಸಬೇಕು. ಟಿಪ್ಪು ನಾಲ್ಕು ದೇವಸ್ಥಾನಗಳಿಗೆ ದತ್ತಿ ಕೊಟ್ಟು, 80 ದೇವಸ್ಥಾನಗಳನ್ನು ಒಡೆದುಹಾಕಿದ್ದಾನೆ. ಹೀಗಾಗಿ 80 ದೇವಸ್ಥಾನಗಳನ್ನು ಒಡೆದಿದ್ದನ್ನು ಹೇಳಬೇಕಾಗುತ್ತದೆ. ಸಾವಿರಾರು ಜನರನ್ನು ಕೊಂದಿದ್ದು, ಮತಾಂತರ ಮಾಡಿದ್ದನ್ನೂ ಹೇಳಬೇಕಾಗುತ್ತೆ ಎಂದು ತಿಳಿಸಿದ್ದಾರೆ.
ಉರಿಗೌಡ ಮತ್ತು ನಂಜೇಗೌಡ ಇತಿಹಾಸದಲ್ಲಿ ಬರುವ ವ್ಯಕ್ತಿಗಳಾಗಿದ್ದು, ಅದಕ್ಕೆ ನನ್ನ ಬಳಿ ದಾಖಲೆಗಳಿವೆ. ಗಿರೀಶ್ ಕಾರ್ನಾಡ್ ಅವರು ಉದ್ದೇಶಪೂರ್ವಕವಾಗಿಯೇ ಟಿಪ್ಪುವನ್ನು ಹೀರೋ ಮಾಡಿದ್ದಾರೆ. ತುಘಲಕ್ ಬಗ್ಗೆ ಚರಿತ್ರೆ ಹುಚ್ಚು ದೊರೆ ಎಂದರೆ, ಕಾರ್ನಾಡ್ ಅವರು ಆದರ್ಶ ರಾಜ ಎಂದು ಹೇಳುತ್ತಾರೆ. ಔರಂಗಜೇಬ ಆದರ್ಶ ರಾಜ ಎನ್ನುತ್ತಾರೆ. ಈ ಮೂಲಕ ನಮ್ಮ ಸಂಸ್ಕೃತಿಗೆ ಏಟು ಕೊಡುವುದೇ ಆಗಿನ ಎಡಪಂಥೀಯ ಕಾಂಗ್ರೆಸ್‌ನ ಉದ್ದೇಶವಾಗಿತ್ತು ಎಂದು ಹೇಳಿದರು.
ಕಾರ್ಯಪ್ಪ ಎಂಎಲ್‌ಸಿ ಆಗಲು ಈ ಪುಸ್ತಕ ಬರೆದಿದ್ದಾರೆ ಎಂಬ ಎಚ್. ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯಿಂದ ಆಯ್ಕೆಯಾಗಿ ಕಾಂಗ್ರೆಸ್ ಮನೆಯಲ್ಲಿ ಊಟ ಮಾಡುವ ಹಳ್ಳಿಹಕ್ಕಿಯಲ್ಲ, ಅದು ಹಾರೋ ಹಕ್ಕಿ. ಆ ಹಾರೋಹಕ್ಕಿಗೆ ಒಂದು ರಾತ್ರಿ ಕನಸು ಬಿದ್ದಿದೆ. ನನ್ನ ಸ್ಥಾನಕ್ಕೆ ಅಡ್ಡಂಡ ಬರುತ್ತಾರೆ ಎಂದು ಅವರಿಗೆ ಕನಸು ಬಿದ್ದಿದೆ. ಯಾವಾಗ ಆ ಕನಸು ಬಿತ್ತೋ ಆಗ ಮೈಸೂರು ಪತ್ರಕರ್ತರನ್ನು ಭೇಟಿಯಾದರು. ಅವರು ಕೋಗಿಲೆ ಇದ್ದಂತೆ, ಬೇರೆಯವರು ಕಟ್ಟಿದ ಗೂಡಲ್ಲಿ ಮೊಟ್ಟೆ ಇಡುತ್ತಾರೆ. ಅವರ ಎಂಎಲ್‌ಸಿ ಪೋಸ್ಟ್ ಅಲುಗಾಡುತ್ತಿದೆ ಎಂದು ಹಾರಿಹಾಯ್ದರು.