ಬೆಂಗಳೂರು: ಹೊರದೇಶದ ಕನ್ನಡಿಗರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸಮನ್ವಯ ಸಾಧಿಸುವ ಉದ್ದೇಶದಿಂದ ಯುನೈಟೆಡ್ ಕಿಂಗ್‌ಡಮ್‌ನ(UK) ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಯುವ ಸಂಚಾಲಕರಾಗಿ ಲಂಡನ್‌ನ ಕನ್ನಡಿಗ ಆದೀಶ್ ರಜನೀಶ್ ವಾಲಿ ಅವರನ್ನು ಕಸಾಪ ನೇಮಕ ಮಾಡಿದೆ.
ಈ ಹಿಂದೆ ಸಿಟಿ ಯೂನಿವರ್ಸಿಟಿ ಆಫ್ ಲಂಡನ್‌ನಲ್ಲಿ ಪದವಿ ಸ್ವೀಕರಿಸುವಾಗ ಕನ್ನಡ ಧ್ವಜ ಪ್ರದರ್ಶಿಸುವ ಮೂಲಕ ಬೀದರ್‌ನ ಆದೀಶ್ ರಜನೀಶ್ ವಾಲಿ ಕನ್ನಡಿಗರ ಮೆಚ್ಚುಗೆ ಪಡೆದಿದ್ದರು. ನಂತರ ಯುವಕನಿಗೆ ಕಸಾಪದಿಂದ ಸನ್ಮಾನ ಮಾಡಿ, ಸದಸ್ಯತ್ವ ನೀಡಲಾಗಿತ್ತು. ಇದೀಗ ವಿದೇಶದಲ್ಲಿ ಕನ್ನಡಪರ ಕಾರ್ಯ ಮಾಡಲು ಮುಂದಿನ ಆದೇಶದವರೆಗೆ ಯುಕೆ ಗೌರವ ಯುವ ಸಂಚಾಲಕರಾಗಿ ನೇಮಕ ಮಾಡಲಾಗಿದೆ.
ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಅವರು ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧೈಯೋದ್ದೇಶವನ್ನು ಕನ್ನಡ ಸಾಹಿತ್ಯ ಪರಿಷತ್ ಹೊಂದಿದೆ. ಪರಿಷತ್ತನ್ನು ‘ಜನಸಾಮಾನ್ಯರ ಪರಿಷತ್ತನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಯುನೈಟೆಡ್ ಕಿಂಗ್‌ಡಮ್ ಗೌರವ ಯುವ ಸಂಚಾಲಕರಾಗಿ ಕನ್ನಡಿಗ ಆದೀಶ್ ರಜನೀಶ್ ವಾಲಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಗೋ ಸಂಪತ್ತು: ವಿದೇಶಗಳಲ್ಲಿ ಮಿಂಚುತ್ತಿವೆ ಭಾರತೀಯ ಗೋ ತಳಿಗಳು!
ಹೊರದೇಶದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲಾಗುತ್ತಿದ್ದು, ಹೊರದೇಶದಲ್ಲಿರುವ ಕನ್ನಡಿಗರನ್ನು ಪರಿಷತ್ತಿಗೆ ಸದಸ್ಯರನ್ನಾಗಿಸಲು, ಕನ್ನಡಪರ ಕಾರ್ಯಚಟುವಟಿಕೆಗಳನ್ನು ಹೊರದೇಶದಲ್ಲಿ ನಡೆಸಲು, ಕನ್ನಡ ಸಾಹಿತ್ಯ ಸಮಾವೇಶ, ಸಮ್ಮೇಳನಗಳ ಯೋಜನೆಯನ್ನು ಕಾರ್ಯಾನುಷ್ಠಾನಗೊಳಿಸಲು ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.