ಬೆಂಗಳೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೆಡಿಎಸ್ ನಾಯಕ, ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಶ್ರೀಕ್ಷೇತ್ರ ಆದಿಚುಂಚನಗಿರಿಯ (adichunchanagiri) ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ (Sri Nirmalanandanatha Swamiji) ಇಂದು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಮಾರಸ್ವಾಮಿ ಅವರಲ್ಲಿಗೆ ಭೇಟಿ ನೀಡಿ ಸ್ವಾಮೀಜಿ ಆರೋಗ್ಯ ವಿಚಾರಿಸಿ, ಎಚ್‌ಡಿಕೆ ಜತೆ ಸ್ವಲ್ಪ ಹೊತ್ತು ಮಾತನಾಡಿದರು. ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ವೈದ್ಯರ ಜೊತೆಗೂ ಚರ್ಚೆ ನಡೆಸಿದರು.
ಕುಮಾರಸ್ವಾಮಿ ಅವರು ಬುಧವಾರ ನಸುಕಿನ ಜಾವ ಏಕಾಏಕಿ ಅಸ್ವಸ್ಥರಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಒಂದೆರಡು ದಿನದಲ್ಲಿ ಅವರು ಎಂದಿನಂತೆ ಕೆಲಸ ಶುರು ಮಾಡಬಹುದು ಎಂದು ಅವರು ಹೇಳಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರರನ್ನು ಬೆಳಗ್ಗೆ 3 ಗಂಟೆ ಸುಮಾರಿಗೆ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅವರು ಬಂದಾಗ ಮಾತಿನಲ್ಲಿ ತೊದಲು ಇತ್ತು, ಕೈನಲ್ಲಿ ವೀಕ್ನೆಸ್ ಇತ್ತು. ಈ ಕಾರಣಕ್ಕಾಗಿಯೇ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಎಂದು ಎಚ್‌ಡಿಕೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ಅಪೋಲೋ ಆಸ್ಪತ್ರೆಯ ವೈದ್ಯ ಡಾ. ಸತೀಶ್ ಚಂದ್ರ ಅವರು ಹೇಳಿದ್ದಾರೆ.
ಅವರನ್ನು ಮನೆಯವರು ವಿಂಡೋ ಪಿರಿಯಡ್ ಅಂತ ಇರುವ ಅವಧಿಯಲ್ಲಿ ಕರೆದುಕೊಂಡು ಬಂದರು. ಅವರನ್ನು ತಕ್ಷಣವೇ ತಪಾಸಣೆ ನಡೆಸಲಾಯಿತು. ಎಂಆರ್‌ಐ ಸ್ಕ್ಯಾನ್ ಮಾಡಿ ತಕ್ಷಣವೇ ಚಿಕಿತ್ಸೆಯನ್ನು ನೀಡಿದೆವು. ತಕ್ಷಣವೇ ಚಿಕಿತ್ಸೆ ನೀಡಿರುವುದರಿಂದ ಗುಣಮುಖರಾಗಿದ್ದಾರೆ ಎಂದು ಡಾ. ಸತೀಶ್ ಚಂದ್ರ ಹೇಳಿದ್ದಾರೆ. ಮನೆಯವರು ವಿಂಡೋ ಪೀರಿಯೆಡ್‌ನಲ್ಲೇ ಬಂದು ಚಿಕಿತ್ಸೆ ನೀಡಿದ್ದರಿಂದ ಯಾವುದೇ ಅಪಾಯ ಆಗಲಿಲ್ಲ ಎನ್ನುವುದು ವೈದ್ಯರ ಅಭಿಪ್ರಾಯ. ಕುಮಾರಸ್ವಾಮಿ ಅವರು ಒಂದೇ ಗಂಟೆಯಲ್ಲಿ ಚೇತರಿಸಿಕೊಂಡಿದ್ದಾರೆ. ಚೆನ್ನಾಗಿ ಮಾತನಾಡುತ್ತಿದ್ದಾರೆ. ಕುಳಿತುಕೊಂಡು ಪೇಪರ್ ಓದಿದ್ದಾರೆ. ಅವರ ಮಾತು ಸರಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್.ಡಿ ಕುಮಾರಸ್ವಾಮಿ ಅವರು ತ್ವರಿತವಾಗಿ ಚೇತರಿಸಿಕೊಳ್ಳುವಂತೆ ಕೋರಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಪೋಲೋ ಆಸ್ಪತ್ರೆ ವೈದ್ಯರಿಗೆ ಕರೆ ಮಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ: HD Kumaraswamy : ಆಸ್ಪತ್ರೆ ತಲುಪಿದಾಗ ತೊದಲುತ್ತಿದ್ದರು, ಕೈನಲ್ಲಿ ವೀಕ್ನೆಸ್ ಇತ್ತು; ಈಗ ಹೇಗಿದ್ದಾರೆ ಕುಮಾರಸ್ವಾಮಿ?