ಬೆಂಗಳೂರು: ಬೇಡ ಜಂಗಮ ಸಮುದಾಯಕ್ಕೆ ಎಸ್‌ಸಿ ಮೀಸಲಾತಿ ನೀಡುವುದು ಬೇಡ ಎಂಬ ಕೂಗೊಂದು ಎದ್ದಿದ್ದು, ಇದು ವಿವಾದಕ್ಕೆ ಕಾರಣವಾಗುವ ಮನ್ಸೂಚನೆಯನ್ನು ನೀಡುತ್ತಿದೆ. ವಿಧಾನಸೌಧದಲ್ಲಿ ಬುಧವಾರ ನಡೆದ ಬಾಬು ಜಗಜೀವನ ರಾಮ್ ಪುಣ್ಯಸ್ಮರಣೆ ಕಾರ್ಯಕ್ರಮವು ಈ ಹೈಡ್ರಾಮಕ್ಕೆ ಸಾಕ್ಷಿಯಾಯಿತು. ಆದಿಜಾಂಬವ ಸಂಘಟನೆ ಈಗ ವಿರೋಧವನ್ನು ವ್ಯಕ್ತಪಡಿಸುತ್ತಿದೆ.
ಕಳೆದ 6 ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಬೇಡ ಜಂಗಮ ಸಮುದಾಯದಿಂದ ಮೀಸಲಾತಿ ಹಾಗೂ ಜಾತಿ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ. ಸರ್ಕಾರ ಸಹ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳ ಅನುಸಾರ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಆದರೆ, ಈಗ ಬೇಡ ಜಂಗಮ ಸಮುದಾಯದಕ್ಕೆ ಎಸ್.ಸಿ. ಮೀಸಲಾತಿ ನೀಡುವುದು ಬೇಡ ಎಂದು ಆದಿಜಾಂಬವ ಸಂಘಟನೆ ವಿರೋಧ ವ್ಯಕ್ತಪಡಿಸಿದೆ.
ಇದನ್ನೂ ಓದಿ | ಪೌರಕಾರ್ಮಿಕರ ನೇಮಕಾತಿ ಐತಿಹಾಸಿಕ ತೀರ್ಮಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಜಗಜೀವರಾವ್ ಪುಣ್ಯ ಸ್ಮರಣೆ ಪ್ರಯುಕ್ತ ವಿಧಾನಸೌಧದಲ್ಲಿರುವ ಬಾಬು ಜಗಜೀವನ ರಾಮ್ ಪ್ರತಿಮೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಲಾರ್ಪಣೆ ಮಾಡುವ ಸಂದರ್ಭದಲ್ಲಿ ಈ ಘೋಷಣೆಗಳು ಕೇಳಿಬಂದಿವೆ. ಆದಿಜಾಂಬವ ಸಂಘಟನೆ ರಾಜ್ಯಾಧ್ಯಕ್ಷ ಜಂಬೂದೀಪ ಸಿದ್ದರಾಜ್ ನೇತೃತ್ವದಲ್ಲಿ ಕಾರ್ಯಕರ್ತರು ಘೋಷಣೆ ಕೂಗುತ್ತಾ, ಬೇಡ ಜಂಗಮರು ಲಿಂಗಾಯತರಾಗಿದ್ದು, ಅವರಿಗೆ ಎಸ್‌ಸಿ ಮೀಸಲಾತಿ ನೀಡುವುದು ಬೇಡ ಎಂದು ಆಕ್ರೋಶವನ್ನು ಹೊರಹಾಕಿದರು.
ಈ ಸಂದರ್ಭದಲ್ಲಿ ಘೋಷಣೆ ಕೂಗದಂತೆ ಆದಿಜಾಂಬವ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಯತ್ನಿಸಿದರು. ಆಗ ಮಧ್ಯಪ್ರವೇಶ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಆದಿಜಾಂಬವ ಕಾರ್ಯಕರ್ತರನ್ನು ತಡೆಯದಂತೆ ಪೊಲೀಸರಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಜಂಬೂದೀಪ ಸಿದ್ದರಾಜ್, ಬೇಡ ಜಂಗಮರು ಲಿಂಗಾಯತರಾಗಿದ್ದಾರೆ. ಹೀಗಾಗಿ ಅವರನ್ನು ಎಸ್‌ಸಿಗೆ ಸೇರಿಸಬಾರದು. ಒಂದು ವೇಳೆ ಅವರ ಒತ್ತಡಕ್ಕೆ ಮಣಿದು ಸೇರಿಸಿದರೆ ಎಸ್‌ಸಿ ಪಟ್ಟಿಯಲ್ಲಿರುವ ಜಾತಿಗಳಿಗೆ ಅನ್ಯಾಯವಾಗುತ್ತದೆ ಹೇಳಿದರು.
ಇದನ್ನೂ ಓದಿ | ಈಡೇರದ ಸರ್ಕಾರದ ಭರವಸೆ; 5ನೇ ದಿನಕ್ಕೆ ಕಾಲಿಟ್ಟ ಬೇಡ ಜಂಗಮರ ಪ್ರತಿಭಟನೆ