Site icon Vistara News

Aditya L1 Mission: 4ನೇ ಬಾರಿ ಕಕ್ಷೆ ಬದಲಾಯಿಸಿದ ಆದಿತ್ಯ ಎಲ್‌ 1 ಮಿಷನ್;‌ ಇನ್ನೊಂದೇ ಹೆಜ್ಜೆ ಬಾಕಿ

Aditya L1 Mission

Aditya L1 Mission Successfully Completes 4th Earth Bound Maneuver

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವದ ಸೂರ್ಯಯಾನ ಆದಿತ್ಯ ಎಲ್‌ 1 ಮಿಷನ್‌ ನಾಲ್ಕನೇ ಕಕ್ಷೆಯ (Aditya L1 Mission) ಬದಲಾವಣೆಯನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರೊಂದಿಗೆ ಆದಿತ್ಯ ಎಲ್‌ 1 ಮಿಷನ್‌ ನಾಲ್ಕು ಬಾರಿ ಕಕ್ಷೆ ಬದಲಾವಣೆ ಮಾಡಿದಂತಾಗಿದ್ದು, ಇನ್ನೊಂದು ಬಾರಿ ಕಕ್ಷೆ ಬದಲಾಯಿಸಿದರೆ ಲ್ಯಾಗ್ರೇಂಜ್‌ ಪಾಯಿಂಟ್‌ನತ್ತ (L1) ಪ್ರಯಾಣ ಬೆಳೆಸಲಿದೆ.

“ನಾಲ್ಕನೇ ಬಾರಿ ಆದಿತ್ಯ ಎಲ್‌ 1 ಮಿಷನ್‌ನ ಕಕ್ಷೆ ಬದಲಾವಣೆ ಪ್ರಕ್ರಿಯೆಯು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ನೂತನ ಕಕ್ಷೆಯಲ್ಲಿ 296 ಕಿ.ಮೀ x 1,21,973 ಕಿ.ಮೀ ವೇಗದಲ್ಲಿ ಮಿಷನ್‌ ಚಲಿಸುತ್ತಿದೆ. ಐದನೇ ಅಥವಾ ಕೊನೆಯ ಕಕ್ಷೆ ಬದಲಾವಣೆಯನ್ನು ಸೆಪ್ಟೆಂಬರ್‌ 19ರಂದು ಕೈಗೊಳ್ಳಲಾಗುತ್ತದೆ” ಎಂದು ಇಸ್ರೋ ಮಾಹಿತಿ ನೀಡಿದೆ. ಹಾಗೆಯೇ, ಮಿಷನ್‌ನ ಫೋಟೊವನ್ನು ಕೂಡ ಶೇರ್‌ ಮಾಡಿದೆ.

ಸೆಪ್ಟೆಂಬರ್‌ 2ರಂದು ಆದಿತ್ಯ ಎಲ್‌ 1 ಮಿಷನ್‌ ಉಡಾವಣೆಯಾಗಿದ್ದು, ಸೆಪ್ಟೆಂಬರ್‌ 3ರಂದು ಮೊದಲ ಕಕ್ಷೆ ಬದಲಾವಣೆಯನ್ನು ಯಶಸ್ವಿಯಾಗಿ ಪೂರೈಸಿತು. ಸೆಪ್ಟೆಂಬರ್‌ 5ರಂದು ಎರಡನೇ ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡಿತು. ಇನ್ನು ಮೂರನೇ ಬಾರಿ ಸೆಪ್ಟೆಂಬರ್‌ 10ರಂದು ಕಕ್ಷೆ ಬದಲಾಯಿಸಿತು. ಒಟ್ಟು ಐದು ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡ ನಂತರ ಅಧ್ಯಯನ ನಡೆಸಲು ಉದ್ದೇಶಿಸಿರುವ ಲ್ಯಾಂಗ್ರೇಜ್‌ ಪಾಯಿಂಟ್‌ನತ್ತ (L1 Point) ಆದಿತ್ಯ ಎಲ್‌ 1 ಮಿಷನ್‌ ಸಾಗಲಿದೆ. ಲ್ಯಾಗ್ರೇಂಜ್‌ ಪಾಯಿಂಟ್‌ ತಲುಪಲು ಮಿಷನ್‌ಗೆ 125 ದಿನ ಬೇಕು.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಮಿಷನ್‌ ಹೊತ್ತುಕೊಂಡು ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್‌ ಸೆಪ್ಟೆಂಬರ್‌ 2ರಂದು ನಭಕ್ಕೆ ಹಾರಿದೆ. ನಭಕ್ಕೆ ನೆಗೆದ ಕೆಲವೇ ನಿಮಿಷಗಳಲ್ಲಿ ರಾಕೆಟ್‌ನಿಂದ ಆದಿತ್ಯ ಎಲ್‌ 1 ಮಿಷನ್‌ ಬೇರ್ಪಟ್ಟಿದೆ. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್‌ 1 ಮಿಷನ್‌ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್‌ ಸಂಚರಿಸಿ ಅಧ್ಯಯನ ನಡೆಸಲಿದೆ. ಭೂಮಿಯಿಂದ 15 ಲಕ್ಷ ಕಿಲೊಮೀಟರ್‌ ಅಂದರೆ, ಭೂಮಿಯಿಂದ ಸೂರ್ಯನಿಗಿರುವ ದೂರದಲ್ಲಿ ಶೇ.1ರಷ್ಟು ಮಾತ್ರ ಕ್ರಮಿಸಿದಂತೆ.

Exit mobile version