ಬೆಂಗಳೂರು: ಚಿಕ್ಕಬಳ್ಳಾಪುರದ ಅವಲಗುರ್ಕಿ ಗ್ರಾಮದಲ್ಲಿ ಸುಪ್ರಸಿದ್ಧ ನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ (Adiyodi Statue) ನಿರ್ಮಾಣ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ. ಅರ್ಜಿಯನ್ನು ವಜಾ ಮಾಡಲು ಕೋರ್ಟ್ ಕೆಲವೊಂದು ವಿಶೇಷ ಕಾರಣಗಳನ್ನು ಪಟ್ಟಿ ಮಾಡಿದೆ.
ಚಿಕ್ಕಬಳ್ಳಾಪುರದ ಚಂಬಳ್ಳಿಯ ಎಸ್ ಕ್ಯಾತಪ್ಪ ಮತ್ತಿತರರು ಪಿಐಎಲ್ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. “ಅರ್ಜಿದಾರರು ಶುದ್ಧಹಸ್ತದಿಂದ ನ್ಯಾಯಾಲಯದ ಮೆಟ್ಟಿಲೇರಿಲ್ಲ. ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಿಲ್ಲ” ಎನ್ನುವುದು ಅರ್ಜಿ ವಜಾಕ್ಕೆ ಕೋರ್ಟ್ ನೀಡಿದ ಪ್ರಮುಖ ಕಾರಣ.
ಈಶ ಯೋಗ ಕೇಂದ್ರ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು, “ಅರ್ಜಿದಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಬಹಿರಂಗಪಡಿಸಲಾಗಿಲ್ಲ. ಈ ಕುರಿತು ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡಿಲ್ಲ” ಎಂದು ಆಕ್ಷೇಪಿಸಿದರು. ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಶಿವಪ್ರಕಾಶ್ ಅವರು “ನಮ್ಮ ವಿರುದ್ಧ ದುರುದ್ದೇಶಪೂರಿತವಾಗಿ ಪ್ರಕರಣ ದಾಖಲಿಸಲಾಗಿದೆ. ಚಳವಳಿಗಳಲ್ಲಿ ಭಾಗಿಯಾಗಿರುವುದಕ್ಕೆ ಪ್ರಕರಣ ದಾಖಲಿಸಲಾಗಿದೆ” ಎಂದರು.
ರೈತರಿಗೂ ಅರ್ಜಿಗೂ ಏನೇನೂ ಸಂಬಂಧವಿಲ್ಲ
ಇದಕ್ಕೆ ಪೀಠವು “ಏನಾದರೂ ಪರವಾಗಿಲ್ಲ. ಶುದ್ಧಹಸ್ತವಾಗಿ ನೀವು ನ್ಯಾಯಾಲಯದ ಮುಂದೆ ಬರಬೇಕು. ಪ್ರಕರಣಗಳಿದ್ದರೆ ಅದನ್ನು ಬಹಿರಂಗಪಡಿಸಬೇಕು. ಆನಂತರ ಅದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಬಹುದಿತ್ತು. ವ್ಯಕ್ತಿಗಳ ನಡುವಿನ ವೈಷಮ್ಯಕ್ಕೆ ಪ್ರಕರಣ ದಾಖಲಿಸಲಾಗಿದೆ. ಹೀಗಿರುವಾಗ ರೈತರ ಪ್ರತಿಭಟನೆಯ ಪ್ರಶ್ನೆ ಎಲ್ಲಿಂದ ಬರುತ್ತದೆ? ಯಾವ ಕಾರಣಕ್ಕಾಗಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬುದನ್ನು ನಾವು ಪರಿಶೀಲಿಸುತ್ತಿಲ್ಲ. ಅರ್ಜಿದಾರರು ನ್ಯಾಯಾಲಯದ ಮುಂದೆ ಬಂದಾಗ ಯಾವುದೇ ದಾಖಲೆಯನ್ನು ಮುಚ್ಚಿಟ್ಟಿಲ್ಲ ಎಂಬುದನ್ನು ನೋಡಲಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಯ ವಿಚಾರ ಎತ್ತಿಕೊಂಡು ನ್ಯಾಯಾಲಯದ ಮುಂದೆ ಬಂದಾಗ ಶುದ್ಧಹಸ್ತರಾಗಿ ನ್ಯಾಯಾಲಯದ ಮುಂದೆ ಇದ್ದಾರೆಯೇ ಎಂಬುದು ಕನಿಷ್ಠ ಬಯಕೆಯಾಗಿದೆ. ನಿಮ್ಮ ಕಪಾಟಿನಲ್ಲಿ ಅಸ್ಥಿಪಂಜರಗಳು ಇರುವುದನ್ನು ಬಹಿರಂಗಪಡಿಸದಿರುವಾಗ ಇನ್ನೊಬ್ಬರನ್ನು ಪ್ರಶ್ನಿಸಲು ನಿಮಗೆ ಯಾವ ಹಕ್ಕಿದೆ? ಮತ್ತೊಬ್ಬರ ಕಡೆ ನೀವು ಬೆರಳು ತೋರುವಾಗ ಉಳಿದ ಬೆರಳುಗಳು ನಿಮ್ಮತ್ತಲೇ ಇರುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಅರ್ಜಿದಾರರನ್ನು ಕುರಿತು ಹೇಳಿತು.
ಕಾನೂನಿಗೆ ವಿರುದ್ಧವಾಗಿ ಈಶ ಯೋಗ ಕೇಂದ್ರದ ಪರವಾಗಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರಗಳು ಆದೇಶ ಮಾಡಿವೆ. ಹೀಗಾಗಿ, ಅವಲಗುರ್ಕಿಯಲ್ಲಿ ಈಶ ಯೋಗ ಕೇಂದ್ರಕ್ಕೆ ಸಂಬಂಧಿಸಿದ ಭೂಮಿಗೆ ದಾಖಲೆ ಸಲ್ಲಿಸಲು ಆದೇಶಿಸಬೇಕು ಮತ್ತು ನಂದಿ ಬೆಟ್ಟದ ವ್ಯಾಪ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಪ್ರಕ್ರಿಯೆ ಆರಂಭಿಸಲು ನಿರ್ದೇಶನ ನೀಡಬೇಕು. ಪರಿಸರ ವ್ಯವಸ್ಥೆ, ಅವಲಗುರ್ಕಿ ಪ್ರದೇಶದ ಬೆಟ್ಟದ ಶ್ರೇಣಿಯಲ್ಲಿನ ಭೂಪ್ರದೇಶದ ಚಹರೆ ಬದಲಿಸದಂತೆ ಮತ್ತು ಹಾನಿ ಉಂಟು ಮಾಡದಂತೆ ಇಶಾ ಯೋಗ ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಮೊದಲಿಗೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಯಥಾಸ್ಥಿತಿ ಕಾಪಾಡಲು ಈಶ ಯೋಗ ಕೇಂದ್ರಕ್ಕೆ ನಿರ್ದೇಶಿಸಿತ್ತು.
ಇದನ್ನೂ ಓದಿ : High court furious : ಬೇಕಾಬಿಟ್ಟಿ ಖರ್ಚು ಮಾಡಲು ದುಡ್ಡಿದೆ, ಮಕ್ಕಳ ಸಮವಸ್ತ್ರಕ್ಕೆ ದುಡ್ಡಿಲ್ವಾ?: ಸರ್ಕಾರಕ್ಕೆ ಹೈಕೋರ್ಟ್ ತರಾಟೆ