Site icon Vistara News

Adiyogi Statue | ಚಿಕ್ಕಬಳ್ಳಾಪುರದಲ್ಲಿ 112 ಅಡಿ ಎತ್ತರದ ಭವ್ಯ ʼಆದಿಯೋಗಿʼ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ

Isha Foundation

ಚಿಕ್ಕಬಳ್ಳಾಪುರ: ನಗರ ಸಮೀಪದ ಅವಲಗುರ್ಕಿಯಲ್ಲಿ ಈಶ ಫೌಂಡೇಶನ್‌ ವತಿಯಿಂದ ನಿರ್ಮಿಸಿರುವ 112 ಅಡಿ ಎತ್ತರದ ಭವ್ಯ ಆದಿಯೋಗಿ (Adi Yogi) ಪ್ರತಿಮೆಯನ್ನು (Adiyogi Statue), ಸಾವಿರಾರು ಜನರ ಸಮ್ಮುಖದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾನುವಾರ ರಾತ್ರಿ ಅನಾವರಣ ಮಾಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್‌, ಈಶ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌ ಮತ್ತಿತರರು ಉಪಸ್ಥಿತರಿದ್ದರು.

ಆದಿಯೋಗಿ ಪ್ರತಿಮೆ ಲೋಕಾರ್ಪಣೆ ಬಳಿಕ ಕಾರ್ಯಕ್ರಮದಲ್ಲಿ ಸದ್ಗುರು ಅವರ ರಚನೆಯ ʼಆದಿಯೋಗಿ – ಯೋಗದ ಮೂಲʼ (adiyogi: the source of yoga) ಕನ್ನಡ ಅನುವಾದದ ಪುಸ್ತಕವನ್ನು ಸಿಎಂ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಆದಿಯೋಗಿಗಳ ಪ್ರತ್ಯಕ್ಷ ದರ್ಶನವನ್ನು ಸದ್ಗುರುಗಳು ನಮಗೆ ಮಾಡಿಸಿದ್ದಾರೆ. ಶಿವ ವಿಸ್ಮಯ ಮೂರ್ತಿ, ಶಿವನನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೋ ಅವರು ಈ ಸೃಷ್ಟಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ನಾವು ಈ ಕಾಲಾತೀತವಾಗಿರುವ ಸೃಷ್ಟಿಯ ಒಂದು ತೃಣವಾಗಿದ್ದೇವೆ. ಅದರಲ್ಲಿ ನಮ್ಮ ಬದುಕು ಇನ್ನಷ್ಟು ಸಣ್ಣದು. ಹುಟ್ಟು ಮತ್ತು ಸಾವು ಇವೆರಡು ಕೇವಲ ಕ್ಷಣಿಕ ಘಟನೆಗಳು. ಹೀಗಿರುವಾಗ ಇಷ್ಟೊಂದು ದೊಡ್ಡ ಸೃಷ್ಟಿಯ ಸೃಷ್ಟಿಕರ್ತ ಆದಿಯೋಗಿಯ ಪ್ರತ್ಯಕ್ಷ ದರ್ಶನ ಮಾಡಿಸುವುದು ಬಹುದೊಡ್ಡ ಸಾಹಸ. ಅದನ್ನು ಸದ್ಗುರುಗಳು ರಾಜ್ಯದ ಚಿಕ್ಕಬಳ್ಳಾಪುರದಲ್ಲಿ ಮಾಡಿರುವುದಕ್ಕೆ ನಾವೆಲ್ಲ ಭಾಗ್ಯಶಾಲಿಗಳು ಎಂದು ಹೇಳಿದರು.

ಸದ್ಗುರುಗಳನ್ನು ಸದಾಗುರು ಎಂದು ಬಣ್ಣಿಸಿದ ಸಿಎಂ, ಕಾಲಾತೀತವನ್ನು ದರ್ಶನ ಮಾಡಿದವರು ಸದಾಕಾಲ ಇರುತ್ತಾರೆ. ಸದ್ಗುರು ಅವರು ಮಾಡಿರುವ ಶೋಧನೆ, ಸಾಧನೆ, ತಪಸ್ಸು, ಅನುಭವ ಹಾಗೂ ಅಭಿವ್ಯಕ್ತ ಮಾಡಿರುವ ಎಲ್ಲ ವಿಚಾರಗಳನ್ನು ಸಮನ್ವಯ ಮಾಡಿದರೆ ಇದು ಭವಿಷ್ಯದ ಒಂದು ಭವ್ಯವಾದ ದರ್ಶನ ಎಂದು ತಿಳಿಸಿದರು.

ಈ ಆದಿಯೋಗಿ ಯಾವ ರೂಪದ ಶಿವ ಎಂದು ನಾನು ಸದ್ಗುರುಗಳನ್ನು ಕೇಳಿದ್ದೆ. ಅದಕ್ಕೆ ಅವರು ಉತ್ತರಿಸಿ, ದೊಡ್ಡ ತಪಸ್ಸನ್ನು ಮಾಡಿ, ಆಳವಾದ ವಿಚಾರಗಳನ್ನು ಅರ್ಥೈಸಿಕೊಂಡು, ದೇಹ-ಮನಸ್ಸು ಒಂದಾದಾಗ ಉಂಟಾಗುವ ಉನ್ಮತ್ತ ಸ್ಥಿತಿ ಎಂದು ಸದ್ಗುರುಗಳು ಹೇಳಿದ್ದಾರೆ. ಎಲ್ಲವೂ ಒಂದೇ ಸ್ಥಿತಿಯಲ್ಲಿರುವ ಅಮೃತ ಗಳಿಗೆ ಉನ್ಮತ್ತ ಆಗಿದ್ದು, ಈ ಅಮೃತ ಗಳಿಗೆಯಲ್ಲಿ ನಮಗೆ ಆದಿಯೋಗಿ ನಮಗೆ ದರ್ಶನ ಕೊಟ್ಟಿದ್ದಾರೆ. ಇದು ಬಹಳ ಕಾಲ ಎಲ್ಲರಿಗೂ ಪ್ರೇರಣೆ ನೀಡಲಿದೆ ಎಂದು ಹೇಳಿದರು.

ಆದಿಯೋಗಿ ಉದ್ಘಾಟನೆ ಕಾರ್ಯಕ್ರಮ ನಿಮಿತ್ತ ಆದಿಯೋಗಿ ಪ್ರತಿಮೆ ಮೇಲೆ ನಡೆಸಿದ ಲೇಸರ್ ಶೋ ನೆರೆದಿದ್ದ ಜನರನ್ನು ಭಕ್ತಿಯ ಲೋಕದಲ್ಲಿ ಮುಳುಗಿಸಿದರೆ, ಸದ್ಗುರು ಜಗ್ಗಿ ವಾಸುದೇವ್ ಮಗಳು ರಾಧೆ ನಡೆಸಿಕೊಟ್ಟ ಭರತನಾಟ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೊರೆಗೊಂಡವು.

ನಂತರ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್ ಅವರು, ತಮ್ಮ ತಾಯಿಯ ತವರು ಮನೆ ಚಿಕ್ಕಬಳ್ಳಾಪುರ ಆಗಿದ್ದು, ತಾವು ಚಿಕ್ಕಂದಿನಲ್ಲಿ ಇಲ್ಲಿನ ಅಕ್ಕ ಪಕ್ಕದ ಬೆಟ್ಟಗಳಲ್ಲಿ ತಮ್ಮ ತಾಯಿಯ ಜತೆ ಕಾಲ ಕಳೆದಿದ್ದೆ. ತಾಯಿ ಆಧ್ಯಾತ್ಮಿಕ ಹಾಗೂ ಯೋಗ ಪಟುವಾಗಿದ್ದರು. ತಾವು ಚಿಕ್ಕಬಳ್ಳಾಪುರದಲ್ಲೆ ಬಾಲ್ಯ ಕಳೆದಿದ್ದು, ಆದರೆ, ಈಗ ಕೆಲವರು ಬೆಟ್ಟದ ಹೆಸರು ಬದಲಾಯಿಸಿ, ತಮ್ಮ ಸಮಾಜಮುಖಿ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಲು ಯತ್ನಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ | Adi Yogi | ನೀವೇ ನಿರ್ಮಿಸಿಕೊಂಡ ಬೇಲಿಗಳಿಂದ ಹೊರಬನ್ನಿ; ಸದ್ಗುರು: ಚಿಕ್ಕಬಳ್ಳಾಪುರದಲ್ಲಿ ಆದಿ ಯೋಗಿ ಪ್ರತಿಮೆ

Exit mobile version