ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (Karnataka Residential Educational Institutions Society) ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ (Residential School) 2024-25ರ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 6ನೇ ತರಗತಿ ಪ್ರವೇಶಕ್ಕೆ (6th Class Admission) ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ – Karnataka Examination Authority) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆಗಲೇ ಆರಂಭವಾಗಿದೆ.
ಹಾಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಂಘದ ವ್ಯಾಪ್ತಿಯಲ್ಲಿರುವ ಶಾಲೆ ಅಥವಾ ಕಾಲೇಜಿನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಡಿಸೆಂಬರ್ 7ರಿಂದ ಆರಂಭವಾಗಿದ್ದು, ಡಿ.31 ಕೊನೆಯ ದಿನವಾಗಿದೆ. 2024ರ ಫೆ. 18ರಂದು ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಕೆಇಎ ತಿಳಿಸಿದೆ.
ಯಾವ ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿಸಬಹುದು?
ವಸತಿ ಶಿಕ್ಷಣ ಸಂಸ್ಥೆಗಳಡಿ ಕಾರ್ಯ ನಿರ್ವಹಿಸುವ ಎಲ್ಲ ಮಾದರಿಯ ವಸತಿ ಶಾಲೆಗಳಿಗೂ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ. ಯಾರಿಗೆ ಯಾವುದು ಸೂಕ್ತ ಎಂದೆನ್ನಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಮೊರಾರ್ಜಿ ದೇಸಾಯಿ ವಸತಿ ಶಾಲೆ
- ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ
- ಏಕಲವ್ಯ ಮಾದರಿ ವಸತಿ ಶಾಲೆ
- ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ
- ಇಂದಿರಾ ಗಾಂಧಿ ವಸತಿ ಶಾಲೆ
- ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ
- ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ವಸತಿ ಶಾಲೆ
- ಸಂಗೊಳ್ಳಿ ರಾಯಣ್ಣ ವಸತಿ ಶಾಲೆ
- ಕವಿರನ್ನ ವಸತಿ ಶಾಲೆ
- ಗಾಂಧಿತತ್ವ ಮತ್ತು ನಾರಾಯಣ ಗುರು ವಸತಿ ಶಾಲೆ
ಈ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶ ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕೆಇಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವಾರ್ಷಿಕ ಆದಾಯ ಮಿತಿ ಇರಲಿದೆ
ಈ ವಸತಿ ಶಾಲೆಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳ ಕುಟುಂಬದವರ ಆದಾಯ ಮಿತಿಯನ್ನು ಇಲ್ಲಿ ಪರಿಗಣಿಸಲಾಗುತ್ತದೆ. ನಿಗದಿತ ಮಾನದಂಡಕ್ಕಿಂತ ಹೆಚ್ಚಿನ ವಾರ್ಷಿಕ ವರಮಾನ ಇದ್ದರೆ ಅಂಥವರಿಗೆ ಪ್ರವೇಶದ ಅವಕಾಶ ಇರುವುದಿಲ್ಲ. ಪರಿಶಿಷ್ಟ ಜಾತಿ/ ಪಂಗಡ, ಹಿಂದುಳಿದ ವರ್ಗದ ಪ್ರವರ್ಗ – 1ರ ವಿದ್ಯಾರ್ಥಿಗಳಿಗೆ 2.50 ಲಕ್ಷ ರೂ. ಮತ್ತು ಹಿಂದುಳಿದ ವರ್ಗ 2ಎ, 2ಬಿ, 3ಎ ಮತ್ತು 3ಬಿಗೆ 1 ಲಕ್ಷ ರೂ.ಗಳ ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು ನಿಗದಿ ಪಡಿಸಲಾಗಿದೆ. ಹೀಗಾಗಿ ಆದಾಯ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರಲಿದೆ.
ಏನೇನು ದಾಖಲೆ ಬೇಕು?
ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಸ್ಯಾಟ್ಸ್ ಸಂಖ್ಯೆ, ಭಾವಚಿತ್ರ ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲ ಮೂಲ ದಾಖಲಾತಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಈ ಸಹಾಯವಾಣಿಗೆ ಕರೆ ಮಾಡಿ
ಹೆಚ್ಚಿನ ಮಾಹಿತಿಗಾಗಿ ಕೆಇಎಯ ಸಹಾಯವಾಣಿ 080 23460460 ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: Apprenticeship Training: ಬೆಸ್ಕಾಂನಲ್ಲಿ 400 ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ
ವೆಬ್‌ಸೈಟ್ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ
ಕೆಇಎ ವೆಬ್‌ಸೈಟ್ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ವೆಬ್‌ಸೈಟ್ ಸಂಪರ್ಕಿಸಬಹುದು.