Site icon Vistara News

ಕೋಟಿ ಸದಸ್ಯತ್ವಕ್ಕೆ ಕಸಾಪ ಮೊದಲ ಹೆಜ್ಜೆ; ಆ್ಯಪ್‌ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

ಕನ್ನಡ ಸಾಹಿತ್ಯ ಪರಿಷತ್ತಿನ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯತ್ವ ಸಂಖ್ಯೆಯನ್ನು ೧ ಕೋಟಿಗೆ ಹೆಚ್ಚಿಸಬೇಕೆಂಬ ಕಸಾಪ ಅಧ್ಯಕ್ಷ ಡಾ. ಮಹೇಶ್‌ ಜೋಶಿ ಅವರ ಗುರಿಗೆ ಮೊದಲ ಹೆಜ್ಜೆಯಂತೆ ಬಹುನಿರೀಕ್ಷಿತ “ಕಸಾಪ” ಮೊಬೈಲ್‌ ಅಪ್ಲಿಕೇಶನ್‌ ಲೋಕಾರ್ಪಣೆಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದಾರೆ. ಈ ಆ್ಯಪ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇರಲಿದೆ. ಇನ್ನೊಂದು ವಿಶೇಷವೆಂದರೆ ಆನ್‌ಲೈನ್‌ ಮೂಲಕವೇ ಕಸಾಪ ಸದಸ್ಯತ್ವ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.

ಇನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳ ಕುರಿತು ಮಾಹಿತಿ, ಕಸಾಪ ಪತ್ರಿಕೆ, ಕಸಾಪ ಚಟುವಟಿಕೆ ಸೇರಿದಂತೆ ಇನ್ನಿತರ ಸಮಗ್ರ ಮಾಹಿತಿಯನ್ನು ಈ ಅಪ್ಲಿಕೇಶನ್‌ ಒಳಗೊಂಡಿದೆ. ಈ ಮೂಲಕ ಕನ್ನಡಪರ ಚಟುವಟಿಕೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ನಿಯತಕಾಲಿಕೆಗಳು, ಕಸಾಪ ಪ್ರಕಟಣೆಯ ಪುಸ್ತಕಗಳ ಸಹಿತ ಎಲ್ಲ ಮಾಹಿತಿಯನ್ನು ಈ ಆ್ಯಪ್‌ ಒಳಗೊಂಡಿದೆ.

ಒಂದು ಕೋಟಿ ಸದಸ್ಯತ್ವ ಗುರಿ

ಕರ್ನಾಟಕ ಸೇರಿದಂತೆ ಕನ್ನಡಿಗರು ದೇಶ-ವಿದೇಶಗಳಲ್ಲಿ ವ್ಯಾಪಿಸಿದ್ದಾರೆ. ಆದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಇನ್ನೂ ಕೋಟಿ ಸಂಖ್ಯೆಗೆ ಮುಟ್ಟಿಲ್ಲ. ಕನ್ನಡಾಭಿಮಾನವನ್ನು ಹೊಂದಿರುವ ಜನ ನಮ್ಮಲ್ಲಿ ಹೆಚ್ಚಿದ್ದರೂ ಅವರನ್ನು ಕಸಾಪಕ್ಕೆ ಸದಸ್ಯರನ್ನಾಗಿ ಮಾಡುವಲ್ಲಿ ಯಶಸ್ವಿಯಾಗುತ್ತಿಲ್ಲ. ಇನ್ನು ಮನೆ, ಮನೆಗೆ ತೆರಳಿ, ಬೀದಿ ಬೀದಿ ಸುತ್ತುವ ಮೂಲಕ ಇಲ್ಲವೇ ಕಚೇರಿಗಳಿಗೆ ಹೋಗಿ ಸದಸ್ಯತ್ವ ನೋಂದಣಿ ಮಾಡಿಸುವುದು ಹಾಗೂ ಕೈಬರಹದ ಮೂಲಕ ಅಪ್ಡೇಟ್‌ ಮಾಡಿಕೊಳ್ಳುವುದು ಕಷ್ಟಕರ ಕೆಲಸ ಆಗಿರುವುದರಿಂದ ಮೊಬೈಲ್‌ ಅಪ್ಲಿಕೇಶನ್‌ ಮಾಡುವ ನಿರ್ಧಾರಕ್ಕೆ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಬಂದಿದ್ದರು. ಈ ನಿಟ್ಟಿನಲ್ಲಿ ಕಸಾಪ ಆ್ಯಪ್‌ ಸಿದ್ಧಗೊಂಡಿದ್ದು, ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ.

ಸಾಹಿತ್ಯ ಆಸಕ್ತಿ ಮೂಡಿಸುವ ಕಾರ್ಯ ಕಸಾಪದಿಂದ ಆಗಲಿ- ಸಿಎಂ

ಕನ್ನಡ ಸಾಹಿತ್ಯ ಪರಿಷತ್ತು ಹೊಸ ರೂಪ ಪಡೆಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸರ್ಕಾರ ಜತೆಯಾಗಿ ಕನ್ನಡ ಕಟ್ಟುವ ಕಾರ್ಯವನ್ನು ನಡೆಸಲಿದೆ. ಸಾಹಿತ್ಯದ ಒಡನಾಟ ಇಲ್ಲದವರಿಗೂ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವ ಕಾರ್ಯವನ್ನು ಪರಿಷತ್ತು ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ (ಆ.೪) ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ ಮೊಬೈಲ್ ಅಪ್ಲಿಕೇಷನ್‌ ಲೋಕಾರ್ಪಣೆ ಮಾಡಿ ಮಾತನಾಡಿ, ʻʻನಾಡೋಜ ಡಾ. ಮಹೇಶ ಜೋಶಿ ಅವರ ನೇತೃತ್ವದಲ್ಲಿ ಪರಿಷತ್ತು ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದೆ. ಅದಕ್ಕೆ ಕಾರಣ ಅವರ ಕ್ರಿಯಾಶೀಲತೆ ಹಾಗೂ ಕನ್ನಡ ಕಟ್ಟಿಬೆಳೆಸುವ ಛಲವೇ ಕಾರಣ. ಪ್ರಸ್ತುತ ಕನ್ನಡಿಗರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಅಪಾರವಾದ ನಿರೀಕ್ಷೆಯಿದೆ. ಆ ಎಲ್ಲ ನಿರೀಕ್ಷೆಗಳನ್ನು ಮಹೇಶ ಜೋಶಿ ಮಾರ್ಗದರ್ಶನದಲ್ಲಿ ಅವರ ನೇತೃತ್ವದ ತಂಡ ಕೆಲಸ ಮಾಡಲಿದೆ ಎನ್ನುವ ವಿಶ್ವಾಸ ಸರ್ಕಾರಕ್ಕೆ ಇದೆ ಎಂದು ತಿಳಿಸಿದರು.

ಕನ್ನಡ ಭಾಷೆಗೆ ದೇಶದಲ್ಲಿ ಅಗ್ರಸ್ಥಾನವಿದೆ. ಅದಕ್ಕೆ ತಕ್ಕಂತೆ ಆಯಾ ಕಾಲಘಟದಲ್ಲಿ ಸವಾಲುಗಳು ಬಂದೇ ಬರುತ್ತವೆ. ಕನ್ನಡ ಉಳಿಸಿ ಎಲ್ಲ ರಂಗದಲ್ಲಿ ಬೆಳೆಸುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸರ್ಕಾರವೂ ಜತೆಯಾಗಿ ಮುನ್ನಡೆಯಲಿದೆ. ಮುಂದಿನ ದಿನಗಳಲ್ಲಿ ಉತ್ತಮ ಸಾಹಿತ್ಯ ಕೃತಿಗಳು ಪ್ರಕಟವಾಗಬೇಕಿದೆ. ಎಲ್ಲ ಕಾಲದಲ್ಲಿ ನೆನಪಿಸಿಕೊಳ್ಳುವಂತಹ ಸಮಾಜಮುಖಿ ಸಾಹಿತ್ಯ ರಚನೆ ಆಗಬೇಕಿದೆ. ಸ್ಫೂರ್ತಿದಾಯಕ ಕಾದಂಬರಿಗಳು ೮೦ರ ದಶಕದ ನಂತರ ಅಷ್ಟಾಗಿ ಪ್ರಕಟವಾಗಿಲ್ಲ. ಕನ್ನಡ ಸಾಹಿತ್ಯದ ಪ್ರಕಾರಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವ ಮಟ್ಟದಲ್ಲಿ ಬೆಳೆಯಬೇಕಿದೆʼʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ | ಕಸಾಪ ಸದಸ್ಯತ್ವ ಪಡೆದ ಕೆನಡಾ ಸಂಸತ್ತಿನಲ್ಲಿ ಕನ್ನಡ ಮಾತನಾಡಿದ ಸಂಸದ ಚಂದ್ರ ಆರ್ಯ


ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ನಿಟ್ಟಿನಲ್ಲಿ ಪರಿಷತ್ತನ್ನು ಮುನ್ನಡೆಸಲಾಗುತ್ತಿದೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ ಕಾಪಾಡುವ ಹಾಗೂ ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಹೊತ್ತು, ಪರಿಷತ್ತಿನ ನಿಯಮ-ನಿಬಂಧನೆಗಳಿಗೆ ಆಮೂಲಾಗ್ರ ಬದಲಾವಣೆ ತರುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನು ಇರಿಸಲಾಗಿದೆ ಎಂದು ತಿಳಿಸಿದರು.

ವಿಶ್ವಾದ್ಯಂತ ಕನ್ನಡವನ್ನು ಒಗ್ಗೂಡಿಸಲು ಹೊರರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಹೊರದೇಶ ಘಟಕಗಳನ್ನು ಸ್ಥಾಪಿಸುವ ದೃಷ್ಟಿಯಿಂದಲೂ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್ತಿಗೆ ಪ್ರಸ್ತುತ ಮುಂದಿನ ಐದು ವರ್ಷಗಳ ಈ ಅವಧಿಯಲ್ಲಿ ಒಂದು ಕೋಟಿ ಸದಸ್ಯತ್ವವನ್ನು ಹೊಂದುವ ದೃಷ್ಟಿಯಿಂದ ಶ್ರೀಸಾಮಾನ್ಯನೂ ಸದಸ್ಯತ್ವ ಪಡೆಯಲು ಅನುಕೂಲವಾಗುವಂತೆ ೫೦೦ ರೂ. ಇದ್ದ ಸದಸ್ಯತ್ವ ಶುಲ್ಕವನ್ನು ೨೫೦ ರೂ.ಗಳಿಗೆ ಇಳಿಸಲಾಗಿದೆ. ಇನ್ನು ಮುಂದೆ https://play.google.com/store/apps/details?id=com.knobly.kasapa ವಿಳಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಪ್ಲಿಕೇಶನ್‌ ಸಾರ್ವಜನಿಕರಿಗೆ ಸಿಗಲಿದೆʼʼ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ, ವಿ.ಸೋಮಣ್ಣ, ಶಾಸಕರಾದ ನೆಹರೂ ಓಲೇಕಾರ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕಾರ್ಯದರ್ಶಿಗಳಾದ ಎಂ.ಎಸ್. ಶ್ರೀಕರ್, ಜಯರಾಮ ಮತ್ತು ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ ಹಾಗೂ ಪರಿಷತ್ತಿನ ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿದೇಶಗಳಲ್ಲಿಯೂ ಘಟಕ; ಸಲಹೆ ನೀಡಲು ಸಮಿತಿ ರಚನೆ

Exit mobile version