Site icon Vistara News

ಗ್ಲೋಬಲ್ ಬೆಂಗಳೂರು ಮಾಡಲು ಸಲಹಾ ಸಮಿತಿ; ಇದು ಡಿಕೆಶಿ ಮಾಸ್ಟರ್‌ ಪ್ಲ್ಯಾನ್!

DCM DK Shivakumar

#image_title

ಬೆಂಗಳೂರು: ಕೆಲ ಬಿಜೆಪಿ ಶಾಸಕರ ಬಹಿಷ್ಕಾರದ ನಡುವೆ ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ (‌All Party Meeting) ಸೋಮವಾರ ನಡೆಯಿತು. ಬೆಂಗಳೂರು ಸಮಗ್ರ ಅಭಿವೃದ್ಧಿ ಕುರಿತು ನಗರದ ಶಾಸಕರು, ಸಂಸದರು ಹಾಗೂ ಎಂಎಲ್‌ಸಿಗಳು ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನು ನೀಡಿದರು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ನೀರು ಸರಬರಾಜು, ತ್ಯಾಜ್ಯ ವಿಲೇವಾರಿ ಸಮಸ್ಯೆ, ಮಳೆ ಹಾನಿ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಸಮಗ್ರ ಅಭಿವೃದ್ಧಿಯೊಂದಿಗೆ ಗ್ಲೋಬಲ್ ಬೆಂಗಳೂರು ಮಾಡಲು ಒಂದು ಸಲಹಾ ಸಮಿತಿ ರಚನೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

ಇಲಾಖೆಗಳ ನಡುವೆ ಸಮನ್ವಯ ಇಲ್ಲ ಎಂದು ಬಿಜೆಪಿಯ ಮಾಜಿ ಸಚಿವರೇ ಹೇಳಿದ್ದಾರೆ. ನಗರದ ಹಲವು ಕಡೆ ಮಳೆ ಬಂದರೆ ನೀರು ನಿಲ್ಲುತ್ತೆ. ಈ ಸಮಸ್ಯೆ ಪರಿಹಾರ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾಮಗಾರಿಗಳು ಆರಂಭವಾದ ತಕ್ಷಣ ದಾಖಲೆ ಅಪ್ಲೋಡ್ ಆಗಬೇಕು. ಪ್ರತಿಯೊಬ್ಬರ ಜವಾಬ್ದಾರಿ ಫಿಕ್ಸ್ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ನಾನು ಅರ್ಧಗಂಟೆ ತಡವಾಗಿ ಬಂದೆ, ನಾನು ಬರಬೇಕಾದರೆ ಕೆಲ ಶಾಸಕರು ಮುನಿಸಿಕೊಂಡು ಹೋಗಿದ್ದಾರೆ. ಅವರಿಗೆ ಏನು ಕೆಲಸ ಇತ್ತೋ ಗೊತ್ತಿಲ್ಲ. ನಾವು ನಮ್ಮ ಕೆಲಸ ಮಾಡಿದ್ದೇವೆ. ರಾಜಕಾರಣ ಮುಗಿದಿದೆ. ಕೊಟ್ಟ ಮಾತು ಉಳಿಸಿಕೊಳ್ಳಬೇಕು. ರಾಜಕಾರಣವೇ ಮಾಡುತ್ತೇವೆ ಎಂದರೆ ಮಾಡಿ ನನ್ನ ಅಭ್ಯಂತರವಿಲ್ಲ ಎಂದು ತಿಳಿಸಿದರು.

ಅಭಿವೃದ್ಧಿ ಫಸ್ಟ್‌, ರಾಜಕೀಯ ನೆಕ್ಸ್ಟ್‌

ಚುನಾವಣೆ ರಾಜಕೀಯ ಮುಗಿಯಿತು. ಈಗ ರಾಜಕೀಯ ಗೊಡವೆ ಬೇಡ. ಸೈದ್ಧಾಂತಿಕ ಭಿನ್ನಾಭಿಪ್ರಾಯ, ವ್ಯತ್ಯಾಸ ಏನೇ ಇರಬಹುದು, ಅದನ್ನು ಪಕ್ಕಕ್ಕಿಡೋಣ. ಬೆಂಗಳೂರು ಅಭಿವೃದ್ಧಿಗೆ ಸಲಹೆ ಕೊಡಿ ಎಂದು ವಿಧಾನ ಸೌಧದಲ್ಲಿ ಏರ್ಪಡಿಸಿದ್ದ ಸರ್ವಪಕ್ಷಗಳ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದರು.

ಮಾಜಿ ಪ್ರಧಾನಿ ವಾಜಪೇಯಿ ಅವರು ಬಹಳ ಹಿಂದೆಯೇ ವಿಶ್ವಮಟ್ಟದಲ್ಲಿ ಬೆಂಗಳೂರು ನಗರದ ಘನತೆ, ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ್ದರು. ಈಗಿನ ಪ್ರಧಾನಿಯವರೂ ಅದನ್ನು ಬಹಳ ಸಾರಿ ಹೇಳಿದ್ದಾರೆ. ಹೀಗಾಗಿ ನಾವು-ನೀವೆಲ್ಲಾ ಸೇರಿ ಬೆಂಗಳೂರಿನ ಘನತೆ, ಗೌರವ, ಹೆಚ್ಚಿಸೋಣ ಎಂದು ತಿಳಿಸಿದರು.

ನೀವು ಯಾವುದೇ ರಾಜಕೀಯ ಪಕ್ಷದವರು ಆಗಿರಬಹುದು. ಒಟ್ಟಿಗೆ ಕೆಲಸ ಮಾಡೋಣ. ರಾಜಕೀಯ ಬಿಟ್ಟು ಅಭಿವೃದ್ಧಿ ಮಾಡೋಣ. ರಾಜಕೀಯನೇ ಮಾಡುತ್ತೀನಿ ಎಂದರೆ ನಾನು ಅದಕ್ಕೂ ರೆಡಿ. ಪ್ರೀತಿಗೂ ಸರಿ, ಸಂಘರ್ಷಕ್ಕೂ ರೆಡಿ. ಆದರೆ ನನಗೆ ದ್ವೇಷದ ರಾಜಕೀಯ ಬೇಕಿಲ್ಲ. ಅದರಲ್ಲಿ ನಂಬಿಕೆ ಇಲ್ಲ ಎಂದು ಹೇಳಿದರು.

ಬೆಂಗಳೂರು ನಾಗರಿಕರು ಮೂಲಸೌಕರ್ಯ ಸಮಸ್ಯೆಯಿಂದ ಬಹಳ ತೊಂದರೆ ಅನುಭವಿಸಿದ್ದಾರೆ. ಭ್ರಷ್ಟಾಚಾರದಿಂದ ನಲುಗಿ ಹೋಗಿದ್ದಾರೆ. ಸಮರ್ಪಕ ನಾಗರಿಕ ಸೌಕರ್ಯ ಪೂರೈಕೆ ನಮ್ಮೆಲ್ಲರ ಕರ್ತವ್ಯವಾಗಿದೆ. ನೀವು ನನಗೆ ಸಲಹೆ ಕೊಡಿ. ನಿರ್ಮಲ ಮನಸ್ಸಿಂದ ತೆಗೆದುಕೊಳ್ಳುತ್ತೇನೆ, ಅನುಷ್ಠಾನಕ್ಕೆ ತರೋಣ. ಬೆಂಗಳೂರು ಗೌರವ ಹೆಚ್ಚಿಸೋಣ ಎಂದು ತಿಳಿಸಿದರು.

ಬೆಂಗಳೂರಿನ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಪ್ರಮಾಣದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ, ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಕೆ ಆಗುತ್ತಿದೆಯೇ ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ವರದಿ ಕೊಡಬೇಕು. ದೇಶದ ಅರ್ಥ ವ್ಯವಸ್ಥೆಗೆ ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರು ಕೊಡುಗೆ ಅಪಾರ. ಜಿಎಸ್‌ಟಿ, ಸೆಸ್, ನಾನಾ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೆಚ್ಚು ಹಣ ಹೋಗುತ್ತದೆ. ರಾಜ್ಯಕ್ಕೆ ಬರಬೇಕಾದ ಪಾಲು ತಂದು ಅಭಿವೃದ್ಧಿ ಮಾಡೋಣ ಎಂದು ಹೇಳಿದರು.

ಇದನ್ನೂ ಓದಿ | Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್‌

ಬೆಂಗಳೂರು ಅಭಿವೃದ್ಧಿಯಲ್ಲಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯ. ಆದರೆ ಕೆಲವರು ಈ ಬಗ್ಗೆ ಗಮನ ಹರಿಸದೆ ಅವರವರ ಕಣ್ಣಿನ ನೇರಕ್ಕೆ ಅವರವರ ಅನುಕೂಲಕ್ಕೆ ತಕ್ಕಂತೆ ಹೇಳುತ್ತಾರೆ. ಕೆಲವರು ದಿಕ್ಕು ತಪ್ಪಿಸಲು ಯತ್ನಿಸುತ್ತಾರೆ. ನಾವು ಪ್ರತಿಯೊಂದನ್ನೂ ಪರಾಮರ್ಶಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳು ಆಟ ಆಡಲು ನೋಡಿದರೆ, ದಿಕ್ಕು ತಪ್ಪಿಸಲು ಯತ್ನಿಸಿದರೆ ಸಹಿಸುವುದಿಲ್ಲ. ಅಂತಹವರು ಜಾಗ ಖಾಲಿ ಮಾಡಬೇಕಾಗುತ್ತದೆ. ನಿಮ್ಮ ವೈಯಕ್ತಿಕ ಹಿತ ಪಕ್ಕಕ್ಕಿಡಿ. ನಿಜ ಅರ್ಥದಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತನ್ನಿ ಎಂದು ತಿಳಿಸಿದರು.

ಹಿಂದಿನ ದಿನಗಳಲ್ಲಿ ಏನಾಯಿತು ಎಂಬ ಬಗ್ಗೆ ಚರ್ಚೆ, ಪರಾಮರ್ಶೆಯಲ್ಲಿ ಸಮಯ ವ್ಯಯಿಸುವುದು ನನಗೆ ಬೇಕಿಲ್ಲ. ಭವಿಷ್ಯದ ಬಗ್ಗೆ ಸಕರಾತ್ಮಕ ಚಿಂತನೆ ಮಾಡೋಣ. ಬೆಂಗಳೂರು ಪರಿವರ್ತನೆ ಮಾಡೋಣ ಎಂದು ಸೂಚಿಸಿದರು.

ಬಿಬಿಎಂಪಿ ಅವೈಜ್ಞಾನಿಕ ವಾರ್ಡ್ ವಿಂಗಡಣೆ, ಮುಂಗಾರು ಪ್ರವೇಶದ ಹಿನ್ನೆಲೆ ಮಳೆ ಹಾನಿ ತಡೆಗೆ ಮುಂಜಾಗ್ರತೆ ಕ್ರಮ, ಕಳೆದ ಬಾರಿ ನೀರು ನುಗ್ಗಿದ ಸ್ಥಳಗಳಲ್ಲಿ ಆದ ಪರಿಹಾರ ಕ್ರಮ ಮತ್ತಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಇದನ್ನೂ ಓದಿ | 200 ಯುನಿಟ್‌ ಫ್ರೀ ಕೊಡಿ ಅನ್ನುವವರಿಗೆ ವಿವೇಕ ಇದೆಯಾ? ಈಗೆಷ್ಟು ಬಳಸ್ತಿದ್ದಾರೋ ಅಷ್ಟೇ ಬಳಸಬೇಕೆಂದ ಸಿದ್ದರಾಮಯ್ಯ

ಬಿಬಿಎಂಪಿ ವಿಭಜನೆ ದಿನೇಶ್ ಗುಂಡೂರಾವ್ ಸಲಹೆ

ಬಿಬಿಎಂಪಿ ವಾರ್ಡ್ ವಿಂಗಡನಣೆ ಅವೈಜ್ಞಾನಿಕವಾಗಿದೆ. ತಜ್ಞರ ಸಮಿತಿ ಮಾಡಿ ವಾರ್ಡ್‌ ಮರು ವಿಂಗಡಣೆ ಸರಿಪಡಿಸಬೇಕು. ಇನ್ನು ಅಭಿವೃದ್ಧಿ ದೃಷ್ಟಿಯಿಂದ ಬಿಬಿಎಂಪಿಯನ್ನು ನಾಲ್ಕು ಇಲ್ಲವೇ ಐದು ವಿಭಾಗ‌ ಮಾಡುವಂತೆ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ. ಈ ಹಿಂದೆ ಸರ್ಕಾರದ ಮಟ್ಟದಲ್ಲಿ ಇದು ಚರ್ಚೆ ಇತ್ತು. ಆದಷ್ಟು ಬೇಗ ವಿಭಜನೆ ಮಾಡಬೇಕು ಎಂದು ತಿಳಿಸಿದ್ದಾರೆ.

ಒಗ್ಗಟ್ಟು ಪ್ರದರ್ಶನ ಮಾಡದ ಬಿಜೆಪಿ ಶಾಸಕರು

ಸಭೆಗೆ ಒಂದು ಗಂಟೆ ತಡವಾಗಿ ಡಿ.ಕೆ.ಶಿವಕುಮಾರ್‌ ಅವರು ಬಂದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಮುನಿರತ್ನ, ಎಸ್‌.ಟಿ.ಸೋಮಶೇಖರ್, ಎಸ್‌.ಆರ್.ವಿಶ್ವನಾಥ್ ಅವರು ಅಸಮಾಧಾನ ವ್ಯಕ್ತಪಡಿಸಿ ಸಭೆ ಬಹಿಷ್ಕರಿಸಿ ಹೊರನಡೆದರು. ಆದರೆ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಉದಯ್, ಶಾಸಕರಾದ ಗರುಡಾಚಾರ್, ರವಿ ಸುಬ್ರಹ್ಮಣ್ಯ, ಸಿ.ಕೆ.ರಾಮಮೂರ್ತಿ, ಬೆಂಗಳೂರು ದಕ್ಷಿಣ ಶಾಸಕ ಕೃಷ್ಣಪ್ಪ, ಗೋಪಾಲಯ್ಯ ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಮೊದಲ ಸಭೆಯಲ್ಲಿ ಬಿಜೆಪಿ ನಾಯಕರಲ್ಲಿ ಒಗ್ಗಟ್ಟು ಕೊರತೆ ಇರುವುದು ಕಂಡುಬಂತು. ಇನ್ನುಳಿದಂತೆ ಕಾಂಗ್ರೆಸ್ ಶಾಸಕರಾದ ಜಮೀರ್ ಅಹಮದ್, ಕೆ.ಜೆ.ಜಾರ್ಜ್, ರಿಜ್ವಾನ್ ಅರ್ಷದ್, ರಾಮಲಿಂಗಾರೆಡ್ಡಿ ಸೇರಿ ಹಲವರು ಉಪಸ್ಥಿತರಿದ್ದರು.

Exit mobile version