ಬೆಂಗಳೂರು: ಪಶ್ಚಿಮ ಆಫ್ರಿಕಾದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru Airport) ಬಂದ ಮಹಿಳೆಯೊಬ್ಬರ ಹೊಟ್ಟೆಯಲ್ಲಿ 7 ಕೋಟಿ ರೂ. ಮೌಲ್ಯದ ಕೊಕೇನ್ ಪತ್ತೆಯಾಗಿದೆ. ಕೊಕೇನ್ ತುಂಬಿರುವ 58 ಮಾತ್ರೆಗಳನ್ನು ನುಂಗಿ ಪ್ರಯಾಣಿಸಿದ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಬಂಧಿತ ಮಹಿಳೆಯನ್ನು ಸಿಯೆರ‍್ರಾ ಲಿಯೋನ್ (40) ಎಂದು ಗುರುತಿಸಲಾಗಿದೆ. ಇವರು ಪಶ್ಚಿಮ ಆಫ್ರಿಕಾ ದೇಶವೊಂದರ ಪ್ರಜೆಯಾಗಿದ್ದು, ಗಿನಿ ದೇಶದಿಂದ ದುಬೈ ಮಾರ್ಗವಾಗಿ ಜನವರಿ 14ರಂದು ಬೆಂಗಳೂರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಬ್ಯುಸಿನೆಸ್ ವೀಸಾ ಪಡೆದು ಬಂದಿದ್ದ ಲಿಯೋನ್, 686 ಗ್ರಾಂ ಕ್ಯಾಪ್ಸೂಲ್‌ಗಳನ್ನು ನುಂಗಿ ವಿಮಾನ ಹತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಹಿಳೆಯ ಶಂಕಾಸ್ಪದ ವರ್ತನೆ ಗಮನಿಸಿದ ಅಧಿಕಾರಿಗಳು ಕೂಡಲೇ ಬಾಡಿ ಸ್ಕ್ಯಾನ್ ಹಾಗೂ ರೇಡಿಯೋಲಜಿ ತಪಾಸಣೆ ಮಾಡಿದ್ದಾರೆ. ಆಗ ಮಹಿಳೆಯ ಹೊಟ್ಟೆಯಲ್ಲಿ ಕೊಕೇನ್ ಮಾತ್ರೆಗಳು ಇರುವುದು ಪತ್ತೆಯಾಗಿದೆ.
ಇದನ್ನೂ ಓದಿ: Mangalore Drugs | ಇನ್ನಷ್ಟು ಆಸ್ಪತ್ರೆಗೆ ಹಬ್ಬಿದ ಡ್ರಗ್ಸ್ ಜಾಲ: ಇಬ್ಬರು ವೈದ್ಯರು, 7 ವೈದ್ಯ ವಿದ್ಯಾರ್ಥಿಗಳ ಬಂಧನ