ರಾಯಚೂರು: ಇಲ್ಲಿನ ವಲ್ಕಂದಿನ್ನಿ ಗ್ರಾಮದ ಕಲುಷಿತ ನೀರು ಸೇವನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬ ಮಹಿಳೆ ಮೃತಪಟ್ಟಿರುವ ವರದಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 8ಕ್ಕೆ ಏರಿದೆ. ಸ್ಥಳೀಯ ನಿವಾಸಿ ಲಕ್ಷ್ಮೀ (26) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದೀಗ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ೮೦ಕ್ಕೇರಿದೆ.
ಕಲುಷಿತ ನೀರು ಸೇವಿಸಿದ ಪರಿಣಾಮ ತೀವ್ರ ವಾಂತಿ-ಭೇದಿಯಿಂದ ಬಳಲುತ್ತಿದ್ದ ಇವರನ್ನು ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಲಕ್ಷ್ಮೀ ಜುಲೈ 3ರಂದು ಮೃತಪಟ್ಟಿದ್ದಾರೆ.
ಇದನ್ನೂ ಓದಿ | ರಾಯಚೂರು ಕಲುಷಿತ ನೀರು ಸೇವನೆ ಪ್ರಕರಣ: ಮತ್ತೊಬ್ಬ ಮಹಿಳೆ ಸಾವು
ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿರುವ 80 ಮಂದಿಗೆ ಜಿಲ್ಲಾ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ ಸುರೇಂದ್ರ ಬಾಬು ಪ್ರತಿಕ್ರಿಯಿಸಿದ್ದು, ಮೇ 31 ರಂದು ವಲ್ಕಂದಿನ್ನಿ ಮತ್ತು ಜೂಕೂರು ಗ್ರಾಮದಲ್ಲಿನ ಜನತೆ ಸೇವಿಸಿದ್ದ ನೀರು ಕಲುಷಿತಗೊಂಡಿತ್ತು. ಎರಡು ಗ್ರಾಮಕ್ಕೂ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ ನೇರವಾಗಿ ಹೊಳೆ ನೀರು ಮನೆಗಳಿಗೆ ಪೂರೈಕೆಯಾಗಿರುವುದು ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ತಕ್ಷಣವೇ ಎರಡು ಗ್ರಾಮಕ್ಕೂ ಹೊಳೆ ನೀರಿನ ಸರಬರಾಜನ್ನು ನಿಲ್ಲಿಸಲಾಗಿದೆ.
ಹೊಳೆ ನೀರು ಕುಡಿದ ಪರಿಣಾಮ ಗ್ರಾಮಸ್ಥರಲ್ಲಿ ವಾಂತಿ-ಭೇದಿ ಶುರುವಾಗಿದೆ. ಮೊದಲ ದಿನ ಜೂಕೂರು ಗ್ರಾಮದಲ್ಲಿ 9 ಮಂದಿ ಹಾಗೂ ವಲ್ಕಂದಿನ್ನಿ ಗ್ರಾಮದಲ್ಲಿ 7 ಮಂದಿ ಅಸ್ವಸ್ಥಗೊಂಡಿದ್ದರು. ಬಳಿಕ ವಲ್ಕಂದಿನ್ನಿಯಲ್ಲಿ 24, ಜೂಕೂರು ಗ್ರಾಮದಲ್ಲಿ 9 ಮಂದಿಯ ಆರೋಗ್ಯ ಹದಗೆಟ್ಟಿತ್ತು. ಈಗಾಗಲೇ ಗ್ರಾಮದ ನೀರಿನ ವ್ಯವಸ್ಥೆಗೆ ಎರಡು ಫಿಲ್ಟರ್ ಅಳವಡಿಕೆ ಮಾಡಲಾಗಿದ್ದು, ಜತೆಗೆ ಅಧಿಕಾರಿಗಳು ಮನೆ ಮನೆಗಳಿಗೆ ಭೇಟಿ ನೀಡಿ ಸರ್ವೇ ಕಾರ್ಯ ಆರಂಭಿಸಿದ್ದಾರೆ. ಎರಡೂ ಗ್ರಾಮದಲ್ಲಿ ತಾತ್ಕಾಲಿಕವಾಗಿ ಚಿಕಿತ್ಸಾ ಶಿಬಿರವನ್ನು ತೆರೆಯಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸುರೇಂದ್ರ ಬಾಬು ಹೇಳಿದ್ದಾರೆ.
ಇದನ್ನೂ ಓದಿ | ಇಂಡಿಯಲ್ಲಿ 70ಕ್ಕೂ ಹೆಚ್ಚು ಮಂದಿಗೆ ವಾಂತಿ, ಭೇದಿ: ಕಲುಷಿತ ನೀರು ಕಾರಣ ಶಂಕೆ