ಬೆಂಗಳೂರು: ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಸಂಚಾರಿ ಪ್ರಯೋಗಾಲಯಕ್ಕೆ 2022ರ ಆಗಸ್ಟ್ 15ಕ್ಕೆ 20 ವರ್ಷ ಪೂರ್ಣಗೊಂಡಿದ್ದು, ಶಾಲೆಗಳಲ್ಲಿ ಮಕ್ಕಳ ವಿಜ್ಞಾನದ ಕೌತುಕವನ್ನು ಹೆಚ್ಚಿಸಿ, ಸೃಜನಶೀಲತೆ, ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ಪ್ರತಿಷ್ಠಾನದ ಸಹಾಯಕ ಮುಖ್ಯ ವ್ಯವಸ್ಥಾಪಕ ದಿಲೀಪ್ ಕುಮಾರ್ ಹೇಳಿದ್ದಾರೆ.
ಅಗಸ್ತ್ಯ ಇಂಟರ್‌ನ್ಯಾಶನಲ್ ಫೌಂಡೇಶನ್ ಬೆಂಗಳೂರಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಇದೊಂದು ಭಾರತೀಯ ಶಿಕ್ಷಣ ಟ್ರಸ್ಟ್ ಆಗಿದ್ದು, ಲಾಭರಹಿತವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಭಾರತದಲ್ಲಿನ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಸಹಿತ ಶಿಕ್ಷಕರಲ್ಲಿ ಕುತೂಹಲವನ್ನು ಹುಟ್ಟುಹಾಕುವುದು, ಸೃಜನಶೀಲತೆಯನ್ನು ಬೆಳೆಸುವುದು ಮತ್ತು ಆತ್ಮವಿಶ್ವಾಸವನ್ನು ಬೆಳೆಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ರಾಮ್‌ಜಿ ರಾಘವನ್ ನೇತೃತ್ವದ ವಿಜ್ಞಾನಿಗಳು, ಶಿಕ್ಷಣತಜ್ಞರು ಮತ್ತು ಉದ್ಯಮಿಗಳ ತಂಡವು 1999ರಲ್ಲಿ ಅಗಸ್ತ್ಯವನ್ನು ಸ್ಥಾಪಿಸಿದರು. ಇದರ ಮೂಲಕ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಮತ್ತು ಸಾರ್ವಜನಿಕ ಶಾಲಾ ಶಿಕ್ಷಕರನ್ನು ಪೂರೈಸುವ ವಿಶ್ವದ ಅತಿದೊಡ್ಡ ಮೊಬೈಲ್ ಲ್ಯಾಬ್ ಮತ್ತು ವಿಜ್ಞಾನ ಶಿಕ್ಷಣ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಪ್ರತಿಷ್ಠಾನದ ಮೂಲಕ ಪ್ರತಿ ವರ್ಷ ಸುಮಾರು 1.5 ಮಿಲಿಯನ್ ಮಕ್ಕಳನ್ನು ತಲುಪಲಾಗುತ್ತಿದೆ. ಇದುವರೆಗೆ ೮ ಮಿಲಿಯನ್‌ಗಿಂತಲೂ ಹೆಚ್ಚು ಮಕ್ಕಳನ್ನು ತಲುಪಿದೆ.
ಆಗಸ್ಟ್ 15 2002ರಂದು ಆರಂಭ
ಆಗಸ್ಟ್ 15 2002ರಂದು ಒಂದು ಸಂಚಾರಿ ಪ್ರಯೋಗಾಲಯದಿಂದ ಪ್ರಾರಂಭವಾದ ಈ ಕಾರ್ಯಕ್ರಮವು ರಾಮ್ ಜೀ ರಾಘವನ್ ಅವರ ಕನಸಾಗಿದೆ. ಆಸಕ್ತಿ ಸೃಜನಶೀಲತೆ ನಾಯಕತ್ವ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯರಂಭಗೊಂಡಿತು. ಇದಕ್ಕೀಗ 20 ವರ್ಷ ಸಂದಿದೆ. ಇದೀಗ ದೇಶದ 21 ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು 175ಕ್ಕೂ ಹೆಚ್ಚು ಸಂಚಾರಿ ಪ್ರಯೋಗಾಲಯವನ್ನು ಹೊಂದಲಾಗಿದೆ.
ಪ್ರತಿದಿನ ಬೇರೆ ಬೇರೆ ಶಾಲೆಗಳಿಗೆ ತೆರಳಿ ವಿಜ್ಞಾನದ ಕೌತುಕವನ್ನು ಹೆಚ್ಚಿಸಿ ಮಕ್ಕಳಲ್ಲಿ ಸೃಜನಶೀಲತೆ ನಾಯಕತ್ವ ಗುಣಗಳನ್ನು ಬೆಳೆಸುತ್ತಿದ್ದು. ಅಗಸ್ತ್ಯ ಪ್ರತಿಷ್ಠಾನವು ಮುಂದಿನ 10 ವರ್ಷಕ್ಕೆ ನೂರು ಮಿಲಿಯನ್ ಮಕ್ಕಳನ್ನು ತಲುಪುವ ಗುರಿಯನ್ನು ಹೊಂದಿದ್ದು, ಹೆಚ್ಚು ಹೆಚ್ಚು ಶಿಕ್ಷಕರಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಈ ಗುರಿ ಮುಟ್ಟುವ ಉದ್ದೇಶವನ್ನು ಹೊಂದಲಾಗಿದೆ ಎಂದು ದಿಲೀಪ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | Competitive Exam | ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅನಿವಾರ್ಯವಾದ ಸ್ಪರ್ಧಾತ್ಮಕ ಪರೀಕ್ಷೆ