ಬೆಂಗಳೂರು: ಓಲಾ, ಉಬರ್ ಅಗ್ರಿಗೇಟರ್ ಆ್ಯಪ್‌ಗಳಲ್ಲಿ (Aggregator App) ಬೇಕಾಬಿಟ್ಟಿ ನಿಗದಿಪಡಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಸೂಚನೆ ಮೇರೆಗೆ ಸೋಮವಾರ (ನ. 14) ನಡೆದ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ. ಈ ಸಂಬಂಧ ಮಂಗಳವಾರ (ನ.15) ಪುನಃ ಸಭೆಯನ್ನು ಕರೆಯಲಾಗಿದೆ. ಆದರೆ, ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ನಿರ್ಧಾರವನ್ನು ಪ್ರಕಟ ಮಾಡಲಾಗದು ಎಂದು ಹೇಳಿರುವ ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ, ಮಂಗಳವಾರದ ಸಭೆ ಬಳಿಕ ಸಮಗ್ರ ವರದಿ ಸಿದ್ಧಪಡಿಸಿ ಹೈಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಶಾಂತಿನಗರ ಸಾರಿಗೆ ಇಲಾಖೆ ಕಚೇರಿಯಲ್ಲಿ ಸೋಮವಾರ (ನ. 14) ಸಾರಿಗೆ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಆಟೋ ಚಾಲಕರ ಸಂಘದವರು, ಓಲಾ, ಉಬರ್ ಕಂಪನಿಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.
ಕೋರ್ಟ್‌ಗೆ ಮಾಹಿತಿ ನೀಡಿಕೆ
ಓಲಾ, ಉಬರ್ ವಿಚಾರ ಹೈಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಕೋರ್ಟ್ ಸೂಚನೆ ಮೇರೆಗೆ ಸಭೆ ನಡೆಸಿದ್ದು, ಮಂಗಳವಾರ (ನ. 15) ಸಂಚಾರಿ ಪೊಲೀಸರ ಸಹಯೋಗದಲ್ಲಿ ಸಾರ್ವಜನಿಕರ ಜತೆ ಸಭೆ ನಡೆಸಲಾಗುತ್ತಿದ್ದು, ಅಲ್ಲಿನ ಅಭಿಪ್ರಾಯವನ್ನೂ ಪಡೆದು ಕೋರ್ಟ್‌ಗೆ ಮಾಹಿತಿಯನ್ನು ಸಲ್ಲಿಸಲಾಗುವುದು. ಆದರೆ, ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ನಿರ್ಧಾರವನ್ನು ತಿಳಿಸುವುದಿಲ್ಲ ಎಂದು ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ | Ola, uber auto| 10% ಹೆಚ್ಚುವರಿ ದರ ಸಾಲದೆಂದ ಓಲಾ, ಉಬರ್: ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಅವಕಾಶ
ಇದು ನ್ಯಾಯಸಮ್ಮತ ಸಭೆಯಲ್ಲ: ತನ್ವೀರ್ ಪಾಷ
ಈ ಸಭೆ ನ್ಯಾಯಯುತವಾಗಿ ನಡೆದಿಲ್ಲ. ಸರ್ಕಾರಕ್ಕೆ ಸಾರಿಗೆ ಇಲಾಖೆ ವರದಿ ಕೊಡಬೇಕು. ಸಾರಿಗೆ ಇಲಾಖೆಗೆ ದರ ನಿಗದಿ ಮಾಡುವ ಅಧಿಕಾರ ಇಲ್ಲ. ಹಾಗಂತ ಅಗ್ರಿಗೇಟರ್ ಆ್ಯಪ್‌ಗಳೇ ದರ ನಿಗದಿ ಮಾಡಿದರೆ, ಸಾರಿಗೆ ಇಲಾಖೆಯ ನಿಯಂತ್ರಣ ಕೈತಪ್ಪಲಿದೆ ಎಂದು ಓಲಾ, ಊಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ ಹೇಳಿದರು.
ಓಲಾ, ಊಬರ್ ದರ ಏರಿಕೆಗೆ ಯಾವುದೇ ಆಟೋ ಸಂಘಟನೆಗಳು ಒಪ್ಪಿಲ್ಲ. ಹಾಗಾದರೆ ವ್ಯವಸ್ಥೆಯೂ ಹಾಳಾಗುತ್ತದೆ. ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಓಲಾ, ಉಬರ್ ಪ್ರತಿನಿಧಿಗಳಿಗೆ ಸಭೆಗೆ ಅವಕಾಶ ನೀಡಬಾರದು. ನಾವು ಈ ಬಗ್ಗೆ ಸಾರಿಗೆ ಇಲಾಖೆಗೆ ಮನವರಿಕೆ ಮಾಡಿದ್ದೇವೆ. ಹಾಗಾಗಿ ಕೋರ್ಟ್‌ಗೆ ಸಾರಿಗೆ ಇಲಾಖೆಯೇ ಮನವರಿಕೆ ಮಾಡಬೇಕು. ಆದರೆ, ಕಣ್ಣೊರೆಸುವ ತಂತ್ರಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ. ಲೂಟಿ ಮಾಡುತ್ತಿರುವ ಸಂಸ್ಥೆಗೆ ಆರ್‌ಟಿಒ ಅವಕಾಶ ಮಾಡಿಕೊಟ್ಟಿದೆ ಎಂದು ತನ್ವೀರ್ ಪಾಷ ಪ್ರತಿಕ್ರಿಯೆ ನೀಡಿದರು.
ಆಟೋ ಸಂಘದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಹೇಳಿಕೆ
ಈ ಸಭೆಯಲ್ಲಿ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ. ಮತ್ತೆ ಎರಡು ಮೂರು ದಿನ ಸಾರಿಗೆ ಅಧಿಕಾರಿಗಳು ಸಮಯ ಪಡೆದಿದ್ದಾರೆ. ಓಲಾ, ಉಬರ್‌ನವರು ಪ್ರಭಾವಿಗಳಾಗಿದ್ದಾರೆ. ಹೀಗಾಗಿ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ. ಒಬ್ಬರು ಐಎಎಸ್ ಅಧಿಕಾರಿಯನ್ನೇ ಎತ್ತಂಗಡಿ ಮಾಡಿಸಿದ್ದಾರೆಂದರೆ ಏನರ್ಥ ಎಂದು ಆಟೋ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಪ್ರತಿಕ್ರಿಯೆ ನೀಡಿದರು.
ಆಟೋ ಮೀಟರ್ ಹೆಚ್ಚಿಸಿ
ಇಷ್ಟ ಬಂದ ಹಾಗೆ ದರ ನಿಗದಿ ಮಾಡುವ ಹಾಗಿಲ್ಲ. ಓಲಾ, ಉಬರ್‌ಗೆ ಅಗ್ರಿಗೇಟ್ ಲೈಸನ್ಸ್ ಸಿಕ್ಕಿಲ್ಲ. 2 ಕಿಲೋ ಮೀಟರ್‌ಗೆ 30ರಿಂದ 40 ರೂಪಾಯಿ ದರ ನಿಗದಿ ಮಾಡಬೇಕು. ಎಲ್ಲರಿಗೂ ಒಂದೇ ದರವನ್ನು ನಿಗದಿ ಮಾಡಬೇಕು. ಆಟೋ ಮೀಟರ್ ದರವನ್ನು ಹೆಚ್ಚಿಸಬೇಕು. ಸಾರಿಗೆ ಇಲಾಖೆ ಕೇರಳ ಮಾದರಿಯಲ್ಲಿ ಆ್ಯಪ್ ತರಬೇಕು ಎಂದು ಆಟೋ ಚಾಲಕರು ಮನವಿ ಮಾಡಿದರು.
ಕನ್ನಡದಲ್ಲಿ ಮಾತನಾಡಲು ಆಗ್ರಹ
ಸಭೆ ವೇಳೆ ಓಲಾ, ಉಬರ್ ಪ್ರತಿನಿಧಿಗಳು ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಆಟೋ ಚಾಲಕರು, ಏನೇ ಮಾತನಾಡುವುದಿದ್ದರೂ ಕನ್ನಡದಲ್ಲಿಯೇ ಮಾತನಾಡಿ ಎಂದು ಪಟ್ಟುಹಿಡಿದರು. ಅಲ್ಲದೆ, ಕನ್ನಡವೇ ಬರುವುದಿಲ್ಲ ಎಂದಾದರೆ ರಾಜ್ಯದಲ್ಲಿ ಅವರಿಗೆ ಕಾರ್ಯನಿರ್ವಹಿಸಲು ಅನುಮತಿಯನ್ನು ಏಕೆ ಕೊಡಲಾಯಿತು? ಕಳೆದ ಹತ್ತು ವರ್ಷದಿಂದ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ | Ola Car | ಓಲಾದ ಬಹುನಿರೀಕ್ಷಿತ ಇವಿ ಕಾರಿನ ಕೆಲವು ಫೀಚರ್‌ಗಳು ಅನಾವರಣ