ತುಮಕೂರು: ನಗರದ ಪಕ್ಕದಲ್ಲಿಯೇ ಹಾದುಹೋಗಿರುವ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ-48(Asian Highway-47)ಯಲ್ಲಿ ಸದ್ಯ ಭೀಮಗಾತ್ರದ ಗುಂಡಿಗಳದ್ದೇ ಕಾರುಬಾರು. ಕ್ಯಾತ್ಸಂದ್ರ ಬಳಿಯ ಜಾಸ್ ಟೋಲ್ ಗೇಟ್‌ನಿಂದ ಶಿರಾ ಟೋಲ್ ಗೇಟ್‌ವರೆಗಿನ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಸುಮಾರು 20 ಕಿಲೋ ಮೀಟರ್ ದೂರ ವಾಹನ ಸವಾರರಿಗೆ ನರಕದ ದರ್ಶನವೇ ಆಗಿಹೋಗುತ್ತದೆ. ಹೀಗಾಗಿ ಹೆದ್ದಾರಿ ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತುಮಕೂರು ಜಿಲ್ಲೆ ರಾಜಧಾನಿ ಬೆಂಗಳೂರಿನ ಹೆಬ್ಬಾಗಿಲು. ಹೀಗಾಗಿ ಜಿಲ್ಲೆಯ ರಸ್ತೆಗಳಲ್ಲಿ ವಾಹನಗಳ ನಿರಂತರ ಓಡಾಟ ಇದ್ದೇ ಇರುತ್ತದೆ. ಅದರಲ್ಲಿಯೂ ಬೆಂಗಳೂರು- ಪುಣೆಗೆ ಸಂಪರ್ಕ ಕಲ್ಪಿಸುವ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಲಕ್ಷಾಂತರ ಜನ ಸಂಚರಿಸುತ್ತಾರೆ. ರಾಜ್ಯದ ಬಹುತೇಕ ಜನರು ಇದೇ ಹೆದ್ದಾರಿ ಮೂಲಕ ರಾಜಧಾನಿಯನ್ನು ತಲುಪುತ್ತಾರೆ. ಆದರೆ ಈ ರಾಷ್ಟ್ರೀಯ ಹೆದ್ದಾರಿ ಸಾವಿನ ರಹದಾರಿಯಾಗಿ ಬದಲಾಗುತ್ತಿದೆ.
ಇದನ್ನೂ ಓದಿ | Rajakaluve Encroachment | ಬಡವರ ಮನೆ ಮೇಲೆ ಬಿಬಿಎಂಪಿ ಸಿಂಹ ಗರ್ಜನೆ; ಪ್ರಭಾವಿಗಳಿಗೆ ಮೃದು ಧೋರಣೆ!
ಈ ಹೆದ್ದಾರಿಯಲ್ಲಿ ವಾಹನ ಚಾಲನೆ ಮಾಡುವ ಚಾಲಕರ ವ್ಯಥೆಯನ್ನಂತೂ ಕೇಳುವುದೇ ಬೇಡ. ಮೈಯೆಲ್ಲಾ ಕಣ್ಣಾಗಿದ್ದರೂ ಈ ಗುಂಡಿಗಳನ್ನು ತಪ್ಪಿಸುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಅಂಗೈಯಲ್ಲಿ ಜೀವ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ವಾಹನ ಸವಾರರದ್ದಾಗಿದ್ದು, ಸ್ವಲ್ಪ ಯಾಮಾರಿದರೂ ಜೀವಕ್ಕೇ ಕುತ್ತು ಬರುವುದು ಖಚಿತವಾಗಿದೆ. ಒಮ್ಮೆ ಈ ಗುಂಡಿಮಯ ರಸ್ತೆಯಲ್ಲಿ ಓಡಾಡಿದರೆ ಸಾಕು, ನಿಮಗೆ ಇದ್ದಕ್ಕಿದ್ದ ಹಾಗೆ ಸೊಂಟ ನೋವು ಬಳುವಳಿಯಾಗಿ ಬಂದುಬಿಡುತ್ತದೆ. ಈ ಭೀಮಗಾತ್ರದ ಗುಂಡಿಗಳಿಗೆ ಇಳಿಯೋ ಬಹುತೇಕ ವಾಹನಗಳು ಕೂಡ ಗ್ಯಾರೇಜ್ ಕಡೆ ಮುಖ ಮಾಡುತ್ತಿವೆ. ಕೆಲವು ವಾಹನಗಳ ಟಯರ್‌ಗಳಿಗೆ ಡ್ಯಾಮೇಜ್ ಆಗಿದ್ದರೆ ಇನ್ನೂ ಕೆಲವು ವಾಹನಗಳ ಆಕ್ಸೆಲ್ ಬ್ಲೇಡ್‌ಗಳೇ ತುಂಡಾದ ನಿದರ್ಶನಗಳೂ ಇವೆ.
ಗುಂಡಿಗಳಿಂದ ಹೆಚ್ಚುತ್ತಿದೆ ಅಪಘಾತಗಳ ಸಂಖ್ಯೆ
ಈ ಗುಂಡಿಮಯ ಹೆದ್ದಾರಿಯಿಂದಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸಾವು-ನೋವುಗಳ ಪ್ರಮಾಣವೂ ಜಾಸ್ತಿಯಾಗ್ತಿದೆ. 2022ರ ಜನವರಿಯಿಂದ ಇಲ್ಲಿಯವರೆಗೆ ಈ ಹೆದ್ದಾರಿಯಲ್ಲಿ ಸುಮಾರು 90ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಹತ್ತಾರು ಜನರು ಪ್ರಾಣಬಿಟ್ಟಿದ್ದಾರೆ.
ರಸ್ತೆ ಸುಸ್ಥಿತಿಯಲ್ಲಿ ಇಲ್ಲದಿದ್ದರೂ ಸುಂಕ ವಸೂಲಾತಿಗಿಲ್ಲ ಬ್ರೇಕ್
ಇಷ್ಟೆಲ್ಲಾ ಆಗುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಇದ್ಯಾವುದಕ್ಕೂ ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲ. ಏಕೆ ದುರಸ್ತಿ ಮಾಡಿಲ್ಲ ಎಂದು ಸಾರ್ವಜನಿಕರು ಕೇಳಿದರೆ, ಟೆಂಡರ್ ಆಗಿಲ್ಲ, ಮಳೆಯಾಗುತ್ತಿದೆ ಎಂಬ ಸಣ್ಣಪುಟ್ಟ ಕಾರಣಗಳನ್ನು ನೀಡುತ್ತಿದೆ. ಇನ್ನೂ ಸ್ವಲ್ಪ ಜಾಸ್ತಿ ವಿಚಾರಿಸಿದರೆ, ಆ ಹೆದ್ದಾರಿ ವ್ಯಾಪ್ತಿಗೆ ಬರುವುದಿಲ್ಲ, ನೀವು ಚಿತ್ರದುರ್ಗದಲ್ಲಿರುವ ಕಚೇರಿಗೆ ಹೋಗಿ ಕೇಳಿ ಎಂಬ ಉತ್ತರ ಇಲ್ಲಿನ ಎನ್ಎಚ್ಎಐ ಅಧಿಕಾರಿಗಳಿಂದ ಬರುತ್ತಿದೆ. ರಸ್ತೆ ಸುಸ್ಥಿತಿಯಲ್ಲಿ ಇಲ್ಲದೇ ಇದ್ದರೂ ಟೋಲ್ ಗೇಟ್‌ಗಳಲ್ಲಿ ಸುಂಕ ವಸೂಲಾತಿ ಮಾತ್ರ ಹಾಗೆಯೇ ಮುಂದುವರಿದಿದೆ.
ಒಟ್ಟಿನಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುವ ಈ ಹೆದ್ದಾರಿ ಈಗ ಸಾವಿನ ರಹದಾರಿಯಾಗಿ ಪರಿವರ್ತನೆಯಾಗಿದೆ. ಈ ಗುಂಡಿಮಯ ರಸ್ತೆಯಲ್ಲಿ ಸಂಚರಿಸಿ ಆರೋಗ್ಯವನ್ನು ಹಾಳುಮಾಡಿಕೊಂಡು, ವಾಹನವನ್ನೂ ಹಾಳು ಮಾಡಿಕೊಂಡು, ಕೊನೆಗೆ ಟೋಲ್ ಗೇಟ್‌ನಲ್ಲಿ ಸುಂಕವನ್ನು ಕೂಡ ಕಟ್ಟಬೇಕಾದ ಹಣೆಬರಹ ವಾಹನ ಸವಾರರದ್ದಾಗಿದೆ.
ಇದನ್ನೂ ಓದಿ | ನಾವೂ ಕಪ್ಪು ಬಾವುಟ ತೋರಿಸಿ, ಮೊಟ್ಟೆ ಹೊಡೆದೇ ಬಂದಿದ್ದೀವಿ ಗೊತ್ತ?: ಸರ್ಕಾರಕ್ಕೆ ಸಿದ್ದರಾಮಯ್ಯ ಆವಾಜ್