Site icon Vistara News

Fit At Any Age | ನಿವೃತ್ತ ಯೋಧ ಅಯ್ಯರ್‌ ಪುಸ್ತಕ ಲೋಕಾರ್ಪಣೆ,‌ ಫಿಟ್ನೆಸ್‌ ಸರಳ ಮಂತ್ರಗಳಿಗೆ ಬುಕ್ ಕನ್ನಡಿ

Fit At Any Age

ಬೆಂಗಳೂರು: ಏರ್‌ ಮಾರ್ಷಲ್‌ (ನಿವೃತ್ತ) ಪಿ.ವಿ.ಅಯ್ಯರ್‌ ಅವರು ಇದುವರೆಗೆ ಫಿಟ್‌ನೆಸ್‌ ವಿಡಿಯೊಗಳ ಮೂಲಕ ಹೆಸರುವಾಸಿಯಾಗಿದ್ದರು. ವಯಸ್ಸು ೯೦ ವರ್ಷ ದಾಟಿದರೂ ಪುಶ್‌ಅಪ್‌ಗಳನ್ನು ಮಾಡಬಹುದು, ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬಹುದು ಎಂಬುದನ್ನು ಅವರು ಹಲವು ವಿಡಿಯೊಗಳ ಮೂಲಕ ತೋರಿಸಿಕೊಟ್ಟಿದ್ದರು. ವಾಯುಪಡೆಯೇ ಇವರ ವಿಡಿಯೊ ಪೋಸ್ಟ್‌ ಮಾಡುತ್ತಿತ್ತು. ಇಷ್ಟು ಫಿಟ್‌ನೆಸ್‌ ಫ್ರೀಕ್‌ ಆಗಿರುವ ಪಿ.ವಿ.ಅಯ್ಯರ್‌ ಅವರು ಈಗ ಫಿಟ್‌ ಎಟ್‌ ಎನಿ ಏಜ್ (Fit At Any Age) ಎಂಬ ಪುಸ್ತಕ ಬರೆದಿದ್ದು, ಇದನ್ನು ಬೆಂಗಳೂರಿನಲ್ಲಿ ಏರ್‌ ಮಾರ್ಷಲ್‌ ಮಾನವೇಂದ್ರ ಸಿಂಗ್‌ ಲೋಕಾರ್ಪಣೆ ಮಾಡಿದ್ದಾರೆ.

ಪುಸ್ತಕದ ಮುಖಪುಟ.

ಪುಸ್ತಕ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಮಾನವೇಂದ್ರ ಸಿಂಗ್‌, “ಪಿ.ವಿ.ಅಯ್ಯರ್‌ ಬರೆದಿರುವ ಪುಸ್ತಕ ಎಲ್ಲ ವಯೋಮಾನದವರಿಗೆ ಉಪಯುಕ್ತವಾಗಿದೆ. ವಯಸ್ಸಿನ ಹಂಗಿಲ್ಲದೆ ಎಲ್ಲರೂ ಫಿಟ್‌ನೆಸ್‌ ಕಾಪಾಡಿಕೊಳ್ಳಬಹುದು, ಸರಳ ಹಾಗೂ ಸುಲಭ ಆದರೆ, ವೈಜ್ಞಾನಿಕ ಅಂಶಗಳೊಂದಿಗೆ ಅಂಗಸೌಷ್ಠವ ಹೊಂದಬಹುದು ಎಂಬುದನ್ನು ಅಯ್ಯರ್‌ ಅವರು ವಿವರಿಸಿದ್ದಾರೆ” ಎಂದು ತಿಳಿಸಿದರು.

ಖ್ಯಾತ ಟೆನಿಸ್‌ ಪಟು ರಮೇಶ್‌ ಕೃಷ್ಣನ್‌, ಬ್ಲೂಮ್ಸ್‌ಬರಿ ಇಂಡಿಯಾ ಪ್ರಧಾನ ಸಂಪಾದಕ ಕ್ರಿಶನ್‌ ಚೋಪ್ರಾ, ನೀತಿ ಆಯೋಗದ ಸಿಇಒ ಪರಮೇಶ್ವರನ್‌ ಅಯ್ಯರ್‌, ಕರ್ನಾಟಕ ನಿವೃತ್ತ ಡಿಜಿಪಿ ಆರ್.‌ ಶ್ರೀ ಕುಮಾರ್ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬ್ಲೂಮ್ಸ್‌ಬರಿ ಇಂಡಿಯಾ ಪುಸ್ತಕವನ್ನು ಪ್ರಕಟಿಸಿದರೆ, ರಮೇಶ್‌ ಕೃಷ್ಣನ್‌ ಮುನ್ನುಡಿ ಬರೆದಿದ್ದಾರೆ.

ಅಯ್ಯರ್‌ ಅವರು ೧.೨ ಲಕ್ಷ ಕಿ.ಮೀ ಓಡಿದ್ದಾರೆ. ಹಲವು ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾರೆ. ನಿತ್ಯವೂ ಎಂಟು ಕಿ.ಮೀ ಓಡುವ ಅವರು ವಾರದಲ್ಲಿ ಐದು ದಿನ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಾರೆ. ಇವರಿಗೆ ೪೭ ವರ್ಷದಿಂದಲೇ ಫಿಟ್‌ನೆಸ್‌ ಕಾಪಾಡುವ ಕುರಿತು ಆಸಕ್ತಿ ಮೂಡಿದ್ದು, ಯಾರು ಯಾವಾಗ ಬೇಕಾದರೂ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಮುಂದಾಗಬಹುದು ಹಾಗೂ ಅದರಲ್ಲಿ ಯಶಸ್ವಿಯಾಗಬಹುದು ಎಂಬುದನ್ನು ತೋರಿಸಿದ್ದಾರೆ.

ಇದನ್ನೂ ಓದಿ | ಬಸವರಾಜಪ್ಪನವರ ‘ಹಸಿರು ಹಾದಿಯ ಕಥನ’ ಪುಸ್ತಕ ಲೋಕಾರ್ಪಣೆ

Exit mobile version